Advertisement

ಬನ್ನಿ, ಆಡಳಿತ ವ್ಯವಸ್ಥೆ ಬದಲಾಯಿಸೋಣ

03:07 PM Apr 22, 2022 | Kavyashree |

ಶಿವಮೊಗ್ಗ: ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಪರಿಣಾಮ ನೌಕರರ ಮೇಲೂ ಆಗಿದೆ. ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ನಿಗದಿತ ಸಮಯದಲ್ಲಿ ಕೆಲಸ ಮಾಡಿದಲ್ಲಿ ಭ್ರಷ್ಟತೆ ಕಡಿಮೆಯಾಗುತ್ತದೆ. ಎಲ್ಲರೂ ಒಂದಾಗಿ ಬದಲಾವಣೆ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಇಲ್ಲಿನ ಪ್ರವಾಸಿ ಬಂಗಲೆ ಬಳಿ ನಡೆದ ಪ್ರಪ್ರಥಮ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ನೌಕರರಿಗೆ ದೇಶದಲ್ಲೇ ದಕ್ಷರು ಎಂಬ ಖ್ಯಾತಿ ಇದೆ. ನಮ್ಮ ಜವಾಬ್ದಾರಿ, ಕರ್ತವ್ಯದ ಮಹತ್ವ ಅರಿತು ಕೆಲಸ ಮಾಡಬೇಕು. ಆಳುವುದು-ಆಡಳಿತ ನಡೆಸುವುದು ಬೇರೆ ಬೇರೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಫಲ ಜನರಿಗೆ ತಲುಪಿಸಬೇಕಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನೆನಪಿಟ್ಟುಕೊಂಡು ಕೆಲಸ ಮಾಡಿ. ಸಾಮಾನ್ಯರಿಗೆ ನೆರವಾಗಲು ಕೆಲವೊಮ್ಮೆ ಕಾನೂನು ಉಲ್ಲಂಘಿಸಿದರೂ ತಪ್ಪಲ್ಲ ಎಂದರು.

2 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಆಡಳಿತ ಯಂತ್ರ ಸುಗಮವಾಗಿ ನಡೆಯುತ್ತಿದೆ. ಇದಕ್ಕೆ ನೌಕರ ವರ್ಗದ ಸಹಕಾರವೇ ಕಾರಣ. ಇದೆಲ್ಲಾ ದೇವರು ಕೊಟ್ಟಿರುವ ಅವಕಾಶ. ಕೂತಲ್ಲೇ ಖುರ್ಚಿ ಬಿಸಿ ಮಾಡಬೇಡಿ, ಜನರಿಗಾಗಿ ಕೆಲಸ ಮಾಡಿ. ಒಳ್ಳೆಯದಕ್ಕೆ ನಿಮ್ಮೊಂದಿಗೆ ಇರುತ್ತೇನೆ, ಯಾವುದೇ ಭ್ರಷ್ಟತೆಗೆ ಅವಕಾಶ ಇಲ್ಲ. ಆಡಳಿತದಲ್ಲಿ ದಕ್ಷತೆ ನಮ್ಮ ಶುದ್ಧತೆಯಿಂದ ಬರುತ್ತದೆ ಎಂದರು.

ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುತ್ತಿರುತ್ತವೆ. ಅದಕ್ಕೆ ನಾವು ನಮ್ಮ ಸಾಮಾಜಿಕ, ಜನಪರ ಕೆಲಸ, ಕಾರ್ಯಕ್ಷಮತೆ ಮೂಲಕ ಉತ್ತರ ನೀಡಬೇಕು. ಅದನ್ನು ನಾನು ನೌಕರರಿಂದ ಬಯಸುತ್ತಿದ್ದೇನೆ. ಬನ್ನಿ ಆಡಳಿತ ಯಂತ್ರದಲ್ಲಿ ಬದಲಾವಣೆ ಮಾಡೋಣ, ಆಳುವ ರೀತಿಯನ್ನು ಬದಲಾಯಿಸೋಣ, ಜನಸಾಮಾನ್ಯರ ಬಳಿಗೆ ವ್ಯವಸ್ಥೆಯನ್ನು ಕೊಂಡೊಯ್ಯೋಣ. ಬಡವರು, ರೈತರು, ದೀನ ದಲಿತರು ಸೇರಿ ಎಲ್ಲರ ಅಭಿವೃದ್ಧಿಗಾಗಿ ಸ್ಥಿತಪ್ರಜ್ಞೆ ಮತ್ತು ಸಮಯ ಪ್ರಜ್ಞೆಯಿಂದ ಕೆಲಸ ಮಾಡೋಣವೆಂದು ಕರೆ ನೀಡಿದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಜ್ಯ ಸರ್ಕಾರ ಸರ್ಕಾರಿ ನೌಕರರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ವೇತನ ಮತ್ತು ಸೌಲಭ್ಯಗಳನ್ನು ನೀಡಿದೆ. ಕಾನೂನು ರೂಪಿಸುವವರು ನಾವಾದರೂ ಅದನ್ನು ಜಾರಿಗೆ ತರುವ ಜವಾಬ್ದಾರಿ ನಿಮ್ಮ ಮೇಲಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳಾದಾಗ ಹೆಮ್ಮೆ, ಗೌರವ ಸಲ್ಲುತ್ತಿರುವುದು ಕೂಡ ನಿಮ್ಮ ಪರಿಶ್ರಮದಿಂದ. ಹೀಗಾಗಿ ಇದಕ್ಕೆ ನೌಕರರೂ ಭಾಜನರು ಎಂದರು.

Advertisement

ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ|ಅಶ್ವತ್ಥನಾರಾಯಣ, ಶಾಸಕರಾದ ಲಕ್ಷ್ಮಣ ಸವದಿ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸೇರಿ ಇತರರು ಇದ್ದರು.

ಜಿಲ್ಲಾಮಟ್ಟದ ಸರ್ವೋತ್ತಮ ಪ್ರಶಸ್ತಿ ಪುರಸ್ಕೃತರಿಗೆ 25 ಸಾವಿರ, ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ 50 ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

 ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ.

 ನಮ್ಮ ಜವಾಬ್ದಾರಿ, ಕರ್ತವ್ಯದ ಮಹತ್ವ ಅರಿತು ಕೆಲಸ ಮಾಡಬೇಕು.

 ಆಳುವುದು-ಆಡಳಿತ ನಡೆಸುವುದು ಬೇರೆ ಬೇರೆ.

 ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನೆನಪಿಟ್ಟುಕೊಂಡು ಕೆಲಸ ಮಾಡಿ: ಸರ್ಕಾರಿ ನೌಕರರಿಗೆ ಸಿಎಂ ಕಿವಿಮಾತು

Advertisement

Udayavani is now on Telegram. Click here to join our channel and stay updated with the latest news.

Next