ಮಹಾನಗರ: ಪ್ರತಿಯೊಬ್ಬರದೂ ಮಗುವಿನ ಮನಸ್ಸಾಗಬೇಕು. ದ್ವೇಷ, ಅಸೂಯೆ, ಮತೀಯವಾದಗಳಿಗೆ ಅವಕಾಶ ನೀಡದೆ ಸೌಹಾರ್ದ ಸಮಾಜ ನಿರ್ಮಾಣ ಮಾಡಬೇಕು ಎಂದು ಸಚಿವ ಬಿ. ರಮಾನಾಥ ರೈ ಹೇಳಿದರು.
ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಬ್ರಹ್ಮ ಕಲಶೋತ್ಸವ ಅಂಗವಾಗಿ ನಡೆದ ದ್ವಿತೀಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಸಾಮಾಜಿಕ ಅಸಮಾನತೆಗಳು ಇಂದಿಗೂ ಉಳಿದುಕೊಂಡಿವೆ. ಅವುಗಳನ್ನು ಹೋಗಲಾಡಿಸುವ ಪ್ರಯತ್ನವನ್ನು ನಾಗರಿಕ ಸಮಾಜ ನಡೆಸಬೇಕು ಎಂದು ಅವರು ಆಶಿಸಿದರು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಮಾತನಾಡಿದರು. ನಟ ನವೀನ್ ಡಿ. ಪಡೀಲ್ ಹಾಗೂ ಕ್ಷೇತ್ರದಲ್ಲಿ ದುಡಿದ ಹಲವರನ್ನು ಸಮ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್‌ನಲ್ಲಿ ಮುಖ್ಯ ಸಚೇತಕ ಐವನ್ ಡಿ’ಸೋಜಾ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣೀಕ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಎಚ್. ಎಸ್. ಸಾಯಿರಾಂ, ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅನಿಲ್ ಶೆಟ್ಟಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಬಾಲಕೃಷ್ಣ ಕೊಟ್ಟಾರಿ, ಉದ್ಯಮಿ ಮಹಾಬಲ ಕೊಟ್ಟಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ನವೀನ್ ಡಿ. ಪಡೀಲ್, ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಕೆ. ಚಿತ್ತರಂಜನ್ ಉಪಸ್ಥಿತರಿದ್ದರು. ಕಿರಣ್ ಬಜಾಲ್ ಸ್ವಾಗತಿಸಿ, ನರೇಶ್ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮ
ಬ್ರಹ್ಮಕಲಶೋತ್ಸವ ಅಂಗವಾಗಿ ಗರೋಡಿ ಕ್ಷೇತ್ರದಲ್ಲಿ ಬುಧವಾರ ಬೆಳಗ್ಗೆ ಗಣಪತಿ ಗೋಮ, ಆಶ್ಲೇಷ ಬಲಿ ಪೂಜೆ,
ಸಂಜೆ ಮಂಡಲಪೂಜೆ, ತತ್ವಕಲಶ, ತತ್ವಕಲಾ ಹೋಮಗಳು, ಕುಂಭೇಶ ಕರ್ಕರಿ ಪೂಜೆ, ಬ್ರಹ್ಮಕಲಶ ಪೂಜೆ, ಆವಾಸ ಹೋಮಗಳು, ಬ್ರಹ್ಮಕಲಶಾ ವಾಸ ನಡೆಯಿತು. ಬಳಿಕ ಮಂಗಳೂರು ಶರವು ಕಲಾವಿದರಿಂದ ‘ಕಾರ್ನಿಕದ ಶನೈಶ್ಚರ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.