ಮಹಾನಗರ: ಸಮಾಜದಲ್ಲಿ ಪ್ರೀತಿಗಿಂತ ಬಹುತೇಕ ಜನರಲ್ಲಿ ಭಯವೇ ಹೆಚ್ಚಾಗುತ್ತಿದೆ. ಇಂತಹ ಮನೋಭಾವ ದೂರ ವಾಗಿ, ಭಯ ಇಲ್ಲದ ಪ್ರೀತಿಯ ಸಮಾಜ ನಿರ್ಮಾಣದತ್ತ ಎಲ್ಲರೂ ಕೈಜೋಡಿಸಬೇಕು ಎಂದು ಮಾಜಿ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಯುನಿವೆಫ್ ಕರ್ನಾಟಕ ನೇತೃತ್ವದಲ್ಲಿ ಪುರಭವನದಲ್ಲಿ ಶುಕ್ರವಾರ ನಡೆದ ಪ್ರವಾದಿ ಹ. ಮುಹಮ್ಮದ್ ಅವರ ಸಂದೇಶ ಪ್ರಚಾರ “ಅರಿಯಿರಿ ಮನುಕುಲದ ಪ್ರವಾದಿಯನ್ನು’ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ಜನರಲ್ಲಿಯೂ ಪ್ರೀತಿ ತುಂಬಿದೆ. ಆದರೆ, ಪ್ರೀತಿಯ ಜತೆಗೂ ಅವರಲ್ಲಿ ಭಯವಿದೆ. ಹೀಗಾಗಿ ಯಾವುದೇ ಕೆಲಸ ಮಾಡುವಾಗಲೂ ಅವರಿಗೆ ಭಯ ಎದುರುಗೊಳ್ಳುತ್ತದೆ. ಇದಕ್ಕಾಗಿ ಮೊದಲು ಭಯವನ್ನು ದೂರ ಮಾಡಿ-ಪ್ರೀತಿಯನ್ನು ಇನ್ನಷ್ಟು ಹತ್ತಿರ ಮಾಡಬೇಕು ಎಂದರು.
ಇನ್ನೊರ್ವನ ಮನಸ್ಸಿನ ಭಾವನೆಯನ್ನು ನಾವೇ ಅರ್ಥ ಮಾಡಿಕೊಳ್ಳುವವರಾಗ ಬೇಕು. ಇನ್ನೊಬ್ಬನಿಗೆ ಕನಿಕರ ತೋರುವ ಮೊದಲು ಅವನ ಮನಸ್ಸನ್ನು ನಾವೇ ಎಂದು ಪರಿಗಣಿಸಿದರೆ ಸಮಾಜ ಸುಂದರವಾಗಲಿದೆ. ವೈಯಕ್ತಿಕ ಜೀವನದಲ್ಲಿ ನಡೆಯುವ ಎಲ್ಲ ಘಟನೆಗಳನ್ನು ಶಪಿಸುವ ಬದಲು ಸ್ವೀಕರಿಸುವ ಮನೋಭಾವ ಬೆಳೆಯಬೇಕು. ಜತೆಗೆ, ಮನೆ, ಅಕ್ಕಪಕ್ಕ ಸಮಾಜ ಎಲ್ಲ ಕಡೆಗಳಲ್ಲಿಯೂ ಮರ್ಯಾದೆ ಸಿಗುವ ವಾತಾವರಣ ನಿರ್ಮಾಣವಾಗಬೇಕು. ಇನ್ನೊಬ್ಬನಿಗೆ ಅಥವಾ ಇನ್ನೊಂದು ಸಮಾಜಕ್ಕೆ ಮರ್ಯಾದೆ ನೀಡುವ ಮನೋಭಾವ ಬೆಳೆಸಿಕೊಂಡಾಗ ಆರೋಗ್ಯಯುತ ಸಮಾಜ ನಿರ್ಮಾಣವಾಗಬಲ್ಲುದು ಎಂದರು.
ವೈಸಿಎಸ್/ವೈಎಸ್‌ಎಂ ಮಂಗಳೂರು ಧರ್ಮ ಪ್ರಾಂತ ವಿಭಾಗದ ನಿರ್ದೇಶಕ ಫಾ| ರೂಪೇಶ್ ಮಾಡ್ತ ಮಾತನಾಡಿ, ನಮ್ಮಲ್ಲಿರುವ ತತ್ತ್ವಕ್ಕಿಂತ ಮನುಷ್ಯತ್ವ ಮೊದಲಾಗಬೇಕು. ನಮ್ಮ ಧರ್ಮ ನಮ್ಮೊಂದಿಗೆ, ಆದರೆ ನಮ್ಮ ಸ್ನೇಹ ಎಲ್ಲರೊಂದಿಗೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ದೃಷ್ಟಿ ಸರಿ ಯಾಗಿದ್ದರೆ ಸಾಲದು, ದೃಷ್ಟಿಕೋನ ಸರಿಯಾಗಿರಬೇಕು ಎಂದರು.
ಪತ್ರಕರ್ತ ಅಬ್ದುಸ್ಸಲಾಮ್ ಪುತ್ತಿಗೆ ಅಧ್ಯ ಕ್ಷತೆ ವಹಿಸಿ ಮಾತನಾಡಿದರು. ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಬ್ದುಲ್ಲ ಪಾರೆ ಸ್ವಾಗತಿಸಿದರು. ಪ್ರಮುಖರಾದ ಯು.ಕೆ. ಖಾಲಿದ್, ಅಬೂಬಕ್ಕರ್ ಕುದ್ರೋಳಿ ಸಯೀದ್ ಅಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.