Advertisement

“ದುರ್ವ್ಯಸನ ಮುಕ್ತ ಜಿಲ್ಲೆ ನಿರ್ಮಿಸೋಣ’

02:35 PM Aug 19, 2018 | |

ದಾವಣಗೆರೆ: ದುರ್ವ್ಯಸನ(ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ) ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕರುಣ ಜೀವ ಕಲ್ಯಾಣ ಟ್ರಸ್ಟ್‌, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಶನಿವಾರ ಸಾಂಕೇತಿಕ ಜಾಥಾ ಹಮ್ಮಿಕೊಳ್ಳಲಾಗಿತ್ತು.

Advertisement

ಜಯದೇವ ವೃತ್ತದಲ್ಲಿ ಸಾಂಕೇತಿಕ ಜಾಥಾಕ್ಕೆ ಚಾಲನೆ ನೀಡಿದ ಯರಗುಂಟೆಯ ಶ್ರೀ ಪರಮೇಶ್ವರ ಸ್ವಾಮೀಜಿ ಮಾತನಾಡಿ, ದಾವಣಗೆರೆ ಜಿಲ್ಲೆಯನ್ನು ದುರ್ವ್ಯಸನ(ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ) ಮುಕ್ತ ಜಿಲ್ಲೆಯನ್ನಾಗಿಸಬೇಕಾಗಿದೆ. ಆ ನಿಟ್ಟಿನಲ್ಲಿ ಮೊದಲು ಮನೆ, ಓಣಿ, ನಂತರ ಗ್ರಾಮ, ತಾಲೂಕು, ಜಿಲ್ಲೆಯ ಸ್ವತ್ಛತೆ ಅಂದರೆ ದುರ್ವ್ಯಸನ(ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ) ಮುಕ್ತ ಮಾಡಬೇಕಿದೆ. ಮಕ್ಕಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಕುಡಿತ, ಮಾದಕ ದ್ರವ್ಯ ಮತ್ತು ಸಿಗರೇಟು ಸೇವನೆಯಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಮಕ್ಕಳು ತಿಳಿದು, ತಮ್ಮ ತಂದೆ-ತಾಯಿ, ಸುತ್ತಮುತ್ತಲಿನ ಜನರಿಗೆ ತಿಳಿಸಿ, ಜಾಗೃತಿ ಮೂಡಿಸಬೇಕು. ಒಂದೊಮ್ಮೆ ತಂದೆ ಮದ್ಯದ ದಾಸರಾಗಿದ್ದರೆ, ಬಿಡಿಸಲು ಒತ್ತಾಯಿಸಬೇಕು. ಕುಡಿಯುವುದರಿಂದ ಸಮಾಜ, ಶಾಲೆಯಲ್ಲಿ ನಮಗೆ ಗೌರವವೇ ಸಿಗುವುದಿಲ್ಲ. ಹಾಗಾಗಿ ಕುಡಿಯುವುದನ್ನು ನಿಲ್ಲಿಸಬೇಕು ಎಂದು ತಿಳಿಹೇಳಬೇಕು.. ಮಕ್ಕಳು ಮನಸ್ಸು ಮಾಡಿದರೆ ದುರ್ವ್ಯಸನ ಮುಕ್ತ ಜಿಲ್ಲೆಯ ಮಾತ್ರವಲ್ಲ ಸಮಾಜವನ್ನೇ ನಿರ್ಮಾಣ ಮಾಡಬಹುದು ಎಂದರು.

ಹಿರಿಯ ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಮಾತನಾಡಿ, ದುರ್ವ್ಯಸನ ಭಾರೀ ಅನಾಹುತ ಉಂಟು ಮಾಡುತ್ತಿದೆ. ಸರ್ಕಾರ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲೇ ಮದ್ಯ, ಮಾದಕ ದ್ರವ, ಸಿಗರೇಟು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಪಾಠ ಅಳವಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಭಾರೀ ಅನಾಹುತ ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
 
ಈಚೆಗೆ ಪ್ರೌಢಶಾಲಾ- ಕಾಲೇಜು ವಿದ್ಯಾರ್ಥಿಗಳೇ ಮದ್ಯ, ಗುಟ್ಕಾ, ಸಿಗರೇಟು ಸೇವನೆ ಮಾಡುವುದು ಕಂಡು ಬರುತ್ತಿದೆ. ಒಂದು ಹಂತಕ್ಕೆ ಬಂದ ನಂತರ ಸಾಕಷ್ಟು ಸಮಸ್ಯೆ ಆಗುತ್ತದೆ. ಸರ್ಕಾರ ಪ್ರಾಥಮಿಕ ಶಾಲಾ ಹಂತದಲ್ಲೇ ದುರ್ವ್ಯಸನಗಳ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು. ಆರೋಗ್ಯಕ್ಕಾಗಿಯೇ ಖರ್ಚು ಮಾಡುವಂತಹ ಕೋಟ್ಯಾಂತರ ಅನುದಾನ ಉಳಿಯುತ್ತದೆ. ಸಮಾಜ ದುರ್ವ್ಯಸನ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.

ಕರುಣಾ ಜೀವ ಕಲ್ಯಾಣ ಟ್ರಸ್ಟ್‌ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ ಮಾತನಾಡಿ, ದುರ್ವ್ಯಸನ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಅ. 2ರ ವರೆಗೆ ಜಿಲ್ಲೆಯ 2,500 ಶಾಲಾ-ಕಾಲೇಜಿನಲ್ಲಿ ಜಾಗೃತಿ ಶಿಬಿರ ನಡೆಸಲಾಗುವುದು. ವಿದ್ಯಾರ್ಥಿಗಳ ಮೂಲಕ ಮನೆ, ಸಮಾಜದಲ್ಲಿ ಜಾಗೃತಿ
ಮೂಡಿಸಲಾಗುವುದು. ವಿದ್ಯಾರ್ಥಿಗಳು, ಮಹಿಳೆಯರು, ಮಠಾಧೀಶರರು ಮತ್ತು ಮಾಧ್ಯಮಗಳ ಮೂಲಕ ದುರ್ವ್ಯಸನ ಮುಕ್ತ ಜಿಲ್ಲೆಯ ನಿರ್ಮಾಣದ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

Advertisement

ದುರ್ವ್ಯಸನಕ್ಕೆ ಯುವ ಜನಾಂಗ ಬಲಿಯಾಗುತ್ತಿದೆ. ಮಧ್ಯ ವಯಸ್ಸಿನ ಯುವ ಜನಾಂಗ ಅಪಘಾತ, ಅವಘಡಕ್ಕೆ ತುತ್ತಾಗುವುದು ಅವರವರ ಕುಟುಂಬಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಆಗುವಂತಹ ಅನ್ಯಾಯ. ದುರ್ವ್ಯಸನದಿಂದ ಇಂತಹ ಅನ್ಯಾಯ ಆಗುತ್ತಿದೆ ಎಂಬುದು ಅತ್ಯಂತ ಸ್ಪಷ್ಟವಾಗಿ ಗೊತ್ತು. ಆದರೆ, ಬೆಂಕಿಗೆ ಗಂಟೆ ಕಟ್ಟುವವರು ಯಾರು…? ಎಂಬ ಸ್ಥಿತಿ ಇದೆ. ಸಮಾಜದ ಎಲ್ಲ ವರ್ಗದವರು ಸೇರಿ ಮದ್ಯ, ಗುಟ್ಕಾ, ಸಿಗರೇಟು ಇತರೆ ದುರ್ವ್ಯಸನ ಬಗ್ಗೆ ಜನ ಜಾಗೃತಿ ಮೂಡಿಸಬೇಕು. ದಾವಣಗೆರೆಯನ್ನು ದುರ್ವ್ಯಸನ(ಡ್ರಿಂಕ್ಸ್‌, ಡ್ರಗ್ಸ್‌, ಟೊಬ್ಯಾಕೊ) ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಮಿಕ ಮುಖಂಡ ಆವರಗೆರೆ ಚಂದ್ರು, ನಿವೃತ್ತ ಪ್ರಾಚಾರ್ಯ ಡಾ| ಎಚ್‌.ವಿ. ವಾಮದೇವಪ್ಪ, ಪ್ರೀತಿ ರವಿಕುಮಾರ್‌, ವೀಣಾ
ಇತರರು ಇದ್ದರು. ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ವಿವಿಧ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next