ತುಮಕೂರು: ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿರುವ ಕಲ್ಪತರು ನಾಡಿನಲ್ಲಿ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿ ನಡೆಯುತ್ತಿರುವುದು ಸಂತಸ ಮೂಡಿದ್ದು 7 ವರ್ಷದ ಒಳಗಿನ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್ ಪಡೆಯುವ ಅವಕಾಶ ನಿಮ್ಮದಾಗಲಿ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ನಗರದ ಬಂಡಿಮನೆ ಕಲ್ಯಾಣ ಮಂಟಪದಲ್ಲಿ ಮಂಡ್ಯ ಚೆಸ್ ಅಕಾಡೆಮಿ ಮತ್ತು ತುಮಕೂರಿನ ಕ್ಯಾಸಲ್ ಸ್ಕೂಲ್ ಆಫ್ ಚೆಸ್, ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಹಾಗೂ ಅಖೀಲ ಭಾರತ ಚೆಸ್ ಸಂಸ್ಥೆ ಸಹಯೋಗದಲ್ಲಿ ಸೋಮವಾರದಿಂದ ಆರಂಭಗೊಂಡಿರುವ 32ನೇ ರಾಷ್ಟ್ರೀಯ ಏಳು ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಚೆಸ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ 31 ವರ್ಷಗಳ ಹಿಂದೆ ವಿಶ್ವ ಚೆಸ್ ಮಾಸ್ಟರ್ ಆಗಿರುವ ವಿಶ್ವನಾಥ್ ಆನಂದ ಇಲ್ಲಿ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದರು.
ಭವಿಷ್ಯ ಉಜ್ವಲವಾಗಲಿ: ಇಷ್ಟು ದೊಡ್ಡ ಮಟ್ಟದಲ್ಲಿ ಚೆಸ್ ಪಂದ್ಯಾವಳಿ ನಮ್ಮ ನಗರದಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಇಲ್ಲಿ ಆಡುತ್ತಿರುವ ಎಷ್ಟೋ ಮಕ್ಕಳು ವಿಶ್ವನಾಥ್ ಆನಂದ್ ಅವರ ರೀತಿ, ಇಂದಿನ ಲಿಟಲ್ ಮಾಸ್ಟರ್ ಪ್ರಜ್ಞಾನಂದ ರೀತಿ ಚಾಂಪಿಯನ್ ಆಗಿ ಹೊರಹೊಮ್ಮಬಹುದು. ನಿಮ್ಮೆಲ್ಲರಿಗೂ ಶುಭವಾಗಲಿ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ಏಷ್ಯಾ ಕಾಮನ್ ವೆಲ್ತ್ ಗೇಮ್‌ಗೆ ಆಯ್ಕೆ: ಮಂಡ್ಯ ಚೆಸ್ ಆಕಾಡೆಮಿಯ ಅಧ್ಯಕ್ಷ ಮಂಜುನಾಥ ಜೈನ್ ಮಾತನಾಡಿ ಇಂದಿನ ಟೂರ್ನಿಯಲ್ಲಿ ಮೂರುವರೆ ವರ್ಷದಿಂದ 7 ವರ್ಷದ ಒಳಗಿನ ಮಕ್ಕಳು ಭಾಗವಹಿಸುತ್ತಿದ್ದು, ಪ್ರತಿ ಚೆಸ್ ಆಟಗಾರನು 11 ರೌಂಡ್ ಗಳನ್ನು ಆಡಬೇಕಾಗಿದೆ. ತಾನಾಡಿದ 11 ರೌಂಡ್‌ಗಳಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ, ವಿಜೇತರನ್ನು ನುರಿತ ಅಂತಾರಾಷ್ಟ್ರೀಯ ಮಟ್ಟದ ತೀರ್ಪುಗಾರರು ಆಯ್ಕೆ ಮಾಡಲಿದ್ದಾರೆ. ಇಲ್ಲಿ ಪ್ರಥಮ ಮೂರು ಸ್ಥಾನಗಳನ್ನು ಪಡೆದ ಮಕ್ಕಳು, ಮುಂದೆ ನಡೆಯುವ ಏಷ್ಯಾ ಕಾಮನ್ ವೆಲ್ತ್ ಗೇಮ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖೀಲ ಭಾರತ ಚೆಸ್ ಸಂಸ್ಥೆಯ ಕಾರ್ಯದರ್ಶಿ ಭರತ್‌ಸಿಂಗ್ ಚೌಹಾನ್, ವಿಶ್ವ ಚೆಸ್ ಫೆಡರೇಷನ್ ಉಪಾಧ್ಯಕ್ಷ ಡಿ.ವಿ.ಸುಂದರ್, ಕರ್ನಾಟಕ ಚೆಸ್ ಅಕಾಡೆಮಿಯ ಕಾರ್ಯದರ್ಶಿ ಅರವಿಂದಶಾಸ್ತ್ರಿ, ಎಸ್. ನಾಗಣ್ಣ, ಸೆಂಟ್ ಮೇರಿಸ್ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಮರ್ಸಿ, ನಮ್ರತಾ ರಿಪೈನರಿ ಸಂಸ್ಥೆಯ ಅರುಣ್ ಕುಮಾರ್, ಡಾ.ಪದ್ಮಾಕ್ಷಿ ಲೋಕೇಶ್ ಮೊದಲಾದವರು ಇದ್ದರು.