Advertisement

ಸಮೃದ್ಧ ಭಾರತದ ಸಂಕಲ್ಪ ನಮ್ಮದಾಗಲಿ

12:52 PM Aug 16, 2017 | Team Udayavani |

ಬೀದರ: ದೇಶದ ಸಮಗ್ರತೆಗೆ ಸವಾಲಾಗಿರುವ ಆಂತರಿಕ ಮತ್ತು ಬಾಹ್ಯ ಶಕ್ತಿಗಳನ್ನು ಮಣಿಸಿ ಸಮೃದ್ಧ ಭಾರತ ನಿರ್ಮಿಸುವ ಸಂಕಲ್ಪವನ್ನು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿ ನಾಗರಿಕನೂ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.ನಗರದ ಜಿಲ್ಲಾ ಪೊಲೀಸ್‌ ಕವಾಯತ್‌ ಮೈದಾನದಲ್ಲಿ ಮಂಗಳವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಗೆ ಒತ್ತು ನೀಡಿ, ಆರ್ಥಿಕ ಮತ್ತು ಇತರ ಕ್ಷೇತ್ರಗಳಲ್ಲಿ ಸುಧಾರಣೆ ತಂದು, ನಮ್ಮ ಸ್ವಾತಂತ್ರ್ಯ ಸೇನಾನಿಗಳು ಕಂಡ ಶೋಷಣಾಮುಕ್ತ ಸಮತಾ ರಾಷ್ಟ್ರದ ನಿರ್ಮಾಣಕ್ಕೆ ಶ್ರಮಿಸಬೇಕಾಗಿದೆ ಎಂದರು. ದೀರ್ಘ‌ಕಾಲದ ಹೋರಾಟ, ಅಪಾರ ಬೆಲೆತೆತ್ತು ಸಾಧಿಸಿದ ಸ್ವಾತಂತ್ರ್ಯ ನಮ್ಮ ಕೈ ಜಾರಿ ಹೋಗದಂತೆ ಎಚ್ಚರ ವಹಿಸುವುದು ಸಮಕಾಲೀನ ಪೀಳಿಗೆಯ ಜವಾಬ್ದಾರಿಯಾಗಿದೆ. ಸ್ವಾತಂತ್ರ್ಯ ಆಚರಣೆಯ ಸಂದರ್ಭದಲ್ಲಿ ಜನತೆಗೆ, ವಿಶೇಷವಾಗಿ ಯುವ ಜನರು ಮತ್ತು ವಿದ್ಯಾರ್ಥಿ ವೃಂದಕ್ಕೆ ಈ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ ಎಂದ ಅವರು, ಕಳೆದ 7 ದಶಕಗಳಲ್ಲಿ ರಾಷ್ಟ್ರದಲ್ಲಿ ಎಲ್ಲರಿಗೂ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಕಲ್ಪಿಸಿ, ಸರ್ವರ ಅಭ್ಯುದಯಕ್ಕೆ ನೆರವಾಗಬಲ್ಲ ಭೂಮಿಕೆ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು. ಸ್ವತಂತ್ರ ಭಾರತ ಜಾಗತಿಕ ರಾಷ್ಟ್ರ ಸಮೂಹದಲ್ಲಿ ಅಭಿವೃದ್ಧಿ ವಿಷಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಶಿಕ್ಷಣ, ಆರೋಗ್ಯ, ಗ್ರಾಮೀಣ ಹಾಗೂ ನಗರಾಭಿವೃದ್ಧಿ, ಸಂಶೋಧನೆ ಮೊದಲಾದ ಕ್ಷೇತ್ರಗಳಲ್ಲಿ ಜಗತ್ತು ಗುರುತಿಸುವಂಥ ಸಾಧನೆ ಮಾಡಲಾಗಿದೆ. ಬಡತನ, ಅನಕ್ಷರತೆ, ಆರೋಗ್ಯ ಮತ್ತು ನೈರ್ಮಲ್ಯ ವಿಷಯದಲ್ಲಿ ಗಣನೀಯ ಸುಧಾರಣೆ ತರಲಾಗಿದ್ದರೂ ಈ ಸಮಸ್ಯೆಗಳನ್ನು ಪೂರ್ಣ ಮಟ್ಟದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ಈ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಂಘಟಿತ ಪ್ರಯತ್ನ ಮುಂದುವರಿದಿರುವುದು ಆಶಾದಾಯಕ ಬೆಳವಣಿಗೆ ಆಗಿದೆ ಎಂದರು. ಕಳೆದ 4 ವರ್ಷಗಳಿಮದ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಸರ್ವರಿಗೂ ಸಮಪಾಲು- ಸಮಬಾಳು ತತ್ವದಡಿ ಕೆಲಸ ಮಾಡುತ್ತಿದೆ. ಶೋಷಿತರಾದಿಯಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪ್ರಗತಿಗೆ ಇಂಬುಕೊಡುವ ಹಲವು ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಿದೆ. ಬೀದರ ಜಿಲ್ಲೆಯಲ್ಲಿ ಪ್ರತಿಭಾವಂತ ಮಾನವ ಸಂಪನ್ಮೂಲದ ಜೊತೆಗೆ ಉತ್ತಮ ನೈಸರ್ಗಿಕ ಸಂಪನ್ಮೂಲಗಳು ಇವೆ. ಎಲ್ಲ ಸಕರಾತ್ಮಕ ಅಂಶಗಳನ್ನು ಯುಕ್ತವಾಗಿ ಬಳಸಿಕೊಂಡು ಜಿಲ್ಲೆಯ ಸಮಗ್ರ ಬೆಳವಣಿಗೆಗೆ ಸರ್ಕಾರ ಯೋಜನೆಗಳನ್ನು ಹಾಕಿಕೊಂಡು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ತುಕಡಿಗಳಿಂದ ಗೌರವ ವಂದನೆ: ಕಾರ್ಯಕ್ರಮದಲ್ಲಿ ಸಚಿವರು ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ರಹೀಮ್‌ ಖಾನ್‌ ಅಧ್ಯಕ್ಷತೆ ವಹಿಸಿದ್ದರು. ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ರಘುನಾಥರಾವ್‌ ಮಲ್ಕಾಪುರೆ, ವಿಜಯಸಿಂಗ್‌, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಉಪಾಧ್ಯಕ್ಷೆ ಶಾಲಿನಿ ಚಿಂತಾಮಣಿ, ಬುಡಾ ಅಧ್ಯಕ್ಷ ಸಂಜಯ
ಜಾಗೀರದಾ, ಜಿಲ್ಲಾ ಧಿಕಾರಿ ಡಾ| ಮಹಾದೇವ, ಸಿಇಒ ಡಾ| ಸೆಲ್ವಮಣಿ ಮತ್ತು ಎಸ್‌ಪಿ ದೇವರಾಜ್‌ ಡಿ. ಮತ್ತು ಎಎಸ್‌ಪಿ ಶ್ರೀಹರಿ ಬಾಬು ವೇದಿಕೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next