Advertisement

ಮಂಗಳೂರು ವಲಯ ರೈಲ್ವೇ ತ್ರಿಶಂಕು ಸ್ಥಿತಿಯಿಂದ ಮುಕ್ತವಾಗಲಿ

05:19 PM Apr 26, 2019 | Sriram |

ಅಭಿವೃದ್ಧಿ,ಸಂಪರ್ಕ ಸಾರಿಗೆ ವಿಚಾರದಲ್ಲಿ ಹಲವಾರು ರೀತಿಯ ತೊಡಕುಗಳು ಎದುರಾಗುತ್ತಿರುವುದರಿಂದ ಮೂರು ವಿಭಾಗಗ ಳನ್ನು ಹೊಂದಿರುವ ಮಂಗಳೂರು ವಲಯ ರೈಲ್ವೇಯನ್ನು ಪ್ರತ್ಯೇಕ ವಿಭಾಗವನ್ನಾಗಿ ಮಾಡಬೇಕು ಎಂಬ ಬೇಡಿಕೆ ಹಲ ವಾರು ವರ್ಷಗಳಿಂದ ಇದೆ.ಆದರೆ ಇದಕ್ಕೆ ಕೆಲವು ತೊಡಕುಗ ಳಿವೆ. ಇದನ್ನು ಸರಿಪಡಿಸುವತ್ತ ಅಥವಾ ಇದಕ್ಕೆ ಪರ್ಯಾಯ ವಾಗಿ ಏನು ಮಾಡಬಹುದೆಂಬ ಚಿಂತನೆ ಸ್ಮಾರ್ಟ್‌ ನಗರಿ ಯಾಗಿ ಬೆಳೆಯುತ್ತಿರುವ ಮಂಗಳೂರಿಗೆ ಅತೀ ಆವಶ್ಯಕವಾಗುತ್ತಿದೆ.

Advertisement

ದಕ್ಷಿಣ,ನೈಋತ್ಯ ಹಾಗೂ ಕೊಂಕಣ ರೈಲ್ವೇ ನಡುವೆ ಹಂಚಿಹೋಗಿರುವ ಮಂಗಳೂರು ವಲಯದ ತ್ರಿಶಂಕು ಸ್ಥಿತಿಗೆ ಪರಿಹಾರ ಕಲ್ಪಿಸುವ ವಿಚಾರ ಮತ್ತೂಮ್ಮೆ ಪ್ರಸ್ತಾವನೆಗೆ ಬಂದಿದೆ. ಮಂಗಳೂರು ವಿಭಾಗ ರಚನೆ ಬದಲಿಗೆ ಪರ್ಯಾಯ ವ್ಯವಸ್ಥೆಯೊಂದು ಪ್ರಸ್ತಾವನೆಯಾಗುತ್ತಿದೆ.

ಮಂಗಳೂರು ಪ್ರದೇಶ ರೈಲ್ವೇ ಯಾವ ವಿಭಾಗಕ್ಕೆ ಸೇರಿದೆ ಎಂದರೆ, ಮೂರು ವಿಭಾಗಗಳ‌ ಹೆಸರನ್ನು ಹೇಳ ಬೇಕಾಗುತ್ತದೆ. ಪ್ರಸ್ತುತ ತೋಕೂರುವರೆಗಿನ ಭಾಗ ಪಾಲಾ^ಟ್‌ ವಿಭಾಗಕ್ಕೆ ಸೇರಿದೆ. ಫರಂಗಿಪೇಟೆಯ ಬಳಿಕ ನೈಋತ್ಯ ರೈಲ್ವೇಯ ಮೈಸೂರು ವಿಭಾಗಕ್ಕೆ, ತೋಕೂರಿನಿಂದ ಆಚೆಗೆ ಕೊಂಕಣ ರೈಲ್ವೇ ವಿಭಾಗಕ್ಕೆ ಸೇರುತ್ತದೆ. ಹಾಗಾಗಿ ಒಟ್ಟು ದಕ್ಷಿಣ ಕನ್ನಡ ಜಿಲ್ಲೆ ರೈಲು ಸೌಕರ್ಯ ಅಭಿವೃದ್ಧಿಗೆ ಮೂರು ವಲಯಗಳನ್ನು ಆಶ್ರಯಿಸಬೇಕಾಗುತ್ತದೆ. ಆಡಳಿತಾತ್ಮಕವಾಗಿ ತನ್ನದೇ ಆದ ಒಂದು ವ್ಯವಸ್ಥೆಯನ್ನು ಇನ್ನೂ ಹೊಂದಲು ಸಾಧ್ಯವಾಗಿಲ್ಲ. ಮೂರು ವಲಯಗಳ ಮಧ್ಯೆ ಹಂಚಿಹೋಗಿರುವ ಮಂಗಳೂರನ್ನು ಒಂದು ವ್ಯವಸ್ಥೆಯ ಹೆಸರಿನಡಿಯಲ್ಲಿ ಒಟ್ಟುಗೂಡಿಸುವ ಆವಶ್ಯಕತೆ ಇದೆ. ಇದೇ ಕಾರಣದಿಂದ ಹುಟ್ಟಿಕೊಂಡಿದ್ದು ಮಂಗಳೂರು ವಿಭಾಗ ಬೇಡಿಕೆ. ಆದರೆ ಮಂಗಳೂರು ವಿಭಾಗ ರಚನೆ ತಾಂತ್ರಿಕ ಕಾರಣಗಳಿಂದ ಸಾಧ್ಯವಿಲ್ಲ ಎಂಬ ಪ್ರತಿಪಾದನೆ ಮುಂದಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರೈಲ್ವೇ ರೀಜನಲ್‌ ಕಚೇರಿ ಸ್ಥಾಪನೆಗೆ ರೈಲ್ವೇ ಸಚಿವಾಲಯಕ್ಕೆ ಬೇಡಿಕೆ ಇರಿಸಲಾಗಿದೆ ಎನ್ನ ಲಾ ಗಿದೆ.
ಮಂಗಳೂರಿನಲ್ಲಿ ಕೊಂಕಣ ರೈಲ್ವೇ ರೀಜನಲ್‌ ಕಚೇರಿ ಮಾಡಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ ಇಲ್ಲಿ ಕೊಂಕಣ  ರೈಲ್ವೇ ನಿಗಮದ ಪೂರ್ಣ ಪ್ರಮಾಣದ ರೀಜನಲ್‌ ಕಚೇರಿ ಬಾರದಿದ್ದರೂ ರೀಜನಲ್‌ ರೈಲ್ವೇ ಮ್ಯಾನೇಜರ್‌ ಮೊಕ್ಕಾಂ ಕಚೇರಿಯನ್ನು ಸ್ಥಾಪಿಸಲಾಗಿದೆ. ಕೊಂಕಣ ರೈಲ್ವೇಗೆ ಸಂಬಂಧಪಟ್ಟಂತೆ ಆಡಳಿತಾತ್ಮಕ ಹಾಗೂ ಸೌಲಭ್ಯಗಳ ಬಗ್ಗೆ ವ್ಯವಹರಿಸಲು ಇದು ಒಂದಷ್ಟು ಸಹಕಾರಿಯಾಗಿದೆ. ಕೊಂಕಣ ರೈಲ್ವೇ ವ್ಯವಸ್ಥೆಯಲ್ಲಿ ರೀಜನಲ್‌ ಕಚೇರಿಗಳ ಸ್ಥಾಪನೆಗೆ ಅವಕಾಶವಿದೆ.

ಭಾರತೀಯ ರೈಲ್ವೇ ವ್ಯವಸ್ಥೆಯಲ್ಲಿ ಪ್ರಸ್ತುತ ವಲಯ (ಝೋನ್‌) ಹಾಗೂ ವಿಭಾಗಗಳು ( ಡಿವಿಜನ್‌) ಅಸ್ತಿತ್ವದಲ್ಲಿವೆ. ರೀಜನಲ್‌ ಕಚೇರಿಗಳು ಕಾರ್ಯಾಚರಿಸುತ್ತಿಲ್ಲ. ಆದರೆ ಮಂಗಳೂರಿನಲ್ಲಿ ರೈಲು ವ್ಯವಸ್ಥೆಯ ತ್ರಿಶಂಕು ಪರಿಸ್ಥಿತಿಯನ್ನು ಪರಿಗಣಿಸಿ ಕೊಂಕಣ ರೈಲ್ವೇ ಮಾದರಿಯಲ್ಲೇ ಮಂಗಳೂರಿನಲ್ಲಿ ಪೂರ್ಣ ಪ್ರಮಾಣದ ರೀಜನಲ್‌ ಕಚೇರಿಯೊಂದನ್ನು ಆರಂಭಿಸ ಬೇಕು ಎಂಬುದು ಉದ್ದೇಶಿತ ಪ್ರಸ್ತಾವನೆಯ ಹಿಂದಿರುವ ಆಶಯವಾಗಿದೆ.

ಮಂಗಳೂರು ರೈಲ್ವೇ ಇತಿಹಾಸವನ್ನು ಅವಲೋಕಿಸಿದರೆ  ರೈಲ್ವೇ ಸಂಪರ್ಕ ಜಾಲದಲ್ಲಿ ಈ ಪ್ರದೇಶ ದೇಶದಲ್ಲಿ ಪ್ರಮುಖ ಕೇಂದ್ರವಾಗಿ ರೂಪುಗೊಳ್ಳಬೇಕಾಗಿತ್ತು. ಇಲ್ಲಿನ ರೈಲ್ವೇ ಸಂಪರ್ಕ ಜಾಲಕ್ಕೆ ಶತಮಾನದ ಇತಿಹಾಸವಿದೆ. ವಾಸ್ತವಿಕತೆಯಲ್ಲಿ ಮಂಗಳೂರು ಸೇರಿದಂತೆ ಕರ್ನಾಟದ ಕರಾವಳಿ ಜಿಲ್ಲೆಗಳಲ್ಲಿ  ರೈ ಲ್ವೇ ಜಾಲ ಇನ್ನೂ ಹೇಳಿಕೊಳ್ಳುವ ರೀತಿಯಲ್ಲಿ ವಿಸ್ತರಣೆಯಾಗಿಲ್ಲ. 1907ರಲ್ಲಿ ಮದ್ರಾಸ್‌- ಮಂಗಳೂರು ರೈಲು ಮಾರ್ಗ ಆರಂಭಗೊಂಡಿತು.

Advertisement

1979ರಲ್ಲಿ ಹಾಸನ- ಮಂಗಳೂರು, 1983ರಲ್ಲಿ ಮಂಗಳೂರು- ಎನ್‌ಎಂಪಿಟಿ, 1996ರಲ್ಲಿ ಮಂಗಳೂರು- ರೋಹಾ ( ಕೊಂಕಣ್‌ ಎಕ್ಸ್‌ಪ್ರೆಸ್‌) ರೈಲು ಪ್ರಾರಂಭವಾಯಿತು. ಇದು ಹೊರತು ಪಡಿಸಿದರೆ ಬೇರೆ ಯಾವುದೇ ಯೋಜನೆಗಳು ಕರಾವಳಿ ಕರ್ನಾಟಕಕ್ಕೆ ದೊರೆತಿಲ್ಲ. ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳು ರೈಲ್ವೇ ಸೌಲಭ್ಯದಿಂದ ನಿರಂತರವಾಗಿ ವಂಚಿತರಾಗುತ್ತಿವೆ ಎಂಬ ಅಸಮಾಧಾನ ಈ ಭಾಗದ ಜನರಲ್ಲಿದೆ.

ಇಂಟರ್‌ಸಿಟಿ ರೈಲು ಸಂಚಾರದ ಪ್ರಸ್ತಾವ
ಇನ್ನೊಂದು ಪ್ರಮುಖ ಅಂಶ ಎಂದರೆ ಮಂಗಳೂರಿನಲ್ಲೂ ಇಂಟರ್‌ಸಿಟಿ ರೈಲು ಸಂಚಾರದ ಪ್ರಸ್ತಾವಗಳು ಕೇಳಿಬರುತ್ತಿವೆ. ಈ ದಿಶೆಯಲ್ಲೂ ಮಂಗಳೂರು ಪ್ರದೇಶ ಒಂದು ವ್ಯವಸ್ಥೆಯಡಿ ಒಟ್ಟುಗೂಡುವುದು ಅವಶ್ಯ. ಮಂಗಳೂರು ನಗರ ವಿಸ್ತಾರಗೊಂಡು ಹೊರ ಪ್ರದೇಶಗಳಿಗೆ ಚಾಚುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳು ಉಪನಗರಗಳಾಗಿ ಬೆಳೆಯುತ್ತಿವೆ. ನಗರದ ಬೆಳವಣಿಗೆಗಳನ್ನು ಊಹಿಸಿಕೊಂಡು ಈಗಿನ ಮತ್ತು ಭವಿಷ್ಯದ ಆವಶ್ಯಕತೆಗಳನ್ನು ಪರಿಗಣಿಸಿ ಸುಗಮ ಸಂಚಾರದ ನಿಟ್ಟಿನಲ್ಲಿ ಒಂದಷ್ಟು ಯೋಜನೆಗಳು ರೂಪಿತವಾಗುವುದು ಮತ್ತು ಅನುಷ್ಠಾನದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಅವಶ್ಯವೆನಿಸುತ್ತದೆ. ಈ ನಿಟ್ಟಿನಲ್ಲಿ ಮಂಗಳೂರಿಗೆ ಮೆಟ್ರೊ ರೈಲು ಸಂಚಾರ ಸೇರಿದಂತೆ ಇಂಟರ್‌ಸಿಟಿ ರೈಲು ಸೌಲಭ್ಯಗಳು ಕೂಡ ಭವಿಷ್ಯದ ಆವಶ್ಯಕತೆಯಾಗಿದೆ.

ರೈಲ್ವೇ ಸಂಪರ್ಕದಲ್ಲಿ ಮಂಗಳೂರು ಇನ್ನೂ ಹೆಚ್ಚು ವಿಸ್ತೃತೆಯನ್ನು ಪಡೆದುಕೊಳ್ಳುವಂತಾಗಲು ಹೊಸ ಸಾಧ್ಯತೆಗಳ ಅಧ್ಯಯನಗಳು ನಡೆಯಬೇಕಾಗಿದೆ. ಹೀಗಿರುವ ಮಾರ್ಗಗಳಲ್ಲಿ ಹೊಸ ರೈಲುಗಳ ಓಡಾಟದ ಜತೆಗೆ ಒಂದಷ್ಟು ಹೊಸ ಮಾರ್ಗಗಳನ್ನು ಮುಖ್ಯವಾಗಿ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಚಾರ ವೇರ್ಪಡುವ ನಿಟ್ಟಿನಲ್ಲಿ ಗುರುತಿಸುವಿಕೆ ಹಾಗೂ ಈಗಾಗಲೇ ಸಮೀಕ್ಷೆ ನಡೆದಿರುವ ಹೊಸ ಮಾರ್ಗಗಳ ಅನುಷ್ಠಾನ ಮುಂತಾದ ಸಕಾರಾತ್ಮಕ ಕ್ರಮಗಳು ನಡೆಯಬೇಕಾಗಿದೆ.

ಎಲ್ಲ ಅಂಶಗಳನ್ನು ಪರಿಗಣಿಸಿ ಮಂಗಳೂರು ಪ್ರದೇಶ ಪ್ರಸ್ತುತ ಎದುರಿಸುತ್ತಿರುವ ತ್ರಿಶಂಕು ಸ್ಥಿತಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಒಂದು ಕಾರ್ಯ ಯೋಜನೆ ಆಗಬೇಕಾಗಿದೆ. ಇದು ವಿಭಾಗ ರೂಪದಲ್ಲಾದರೂ ಆಗಬಹುದು ಅಥವಾ ರೀಜನಲ್‌ ಕಚೇರಿ ವ್ಯವಸೆœಯಲ್ಲಾದರೂ ಆಗಬಹುದು. ಒಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ರೂಪುಗೊಳ್ಳಲಿ.

ಪ್ರತ್ಯೇಕ ವಿಭಾಗ
ಉಳ್ಳಾಲದಿಂದ ಪ್ರಾರಂಭಿಸಿ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌ ಸೇರಿದಂತೆ ಮಂಗಳೂರು ಉಡುಪಿ, ಹಾಸನ, ಕಾರವಾರ ಭಾಗದ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ಮಂಗಳೂರು ರೈ ಲ್ವೇ ವಿಭಾಗವನ್ನು ರಚಿಸಬೇಕು ಎಂಬ ಬೇಡಿಕೆ ಕಳೆದ ಹಲವಾರು ವರ್ಷಗಳಿಂದ ಮಂಡನೆಯಾಗುತ್ತಿದ್ದರೂ ಇದಕ್ಕೆ ಪೂರಕ ಸ್ಪಂದನೆ  ರೈಲ್ವೇ ಇಲಾಖೆಯಿಂದ ದೊರಕಿಲ್ಲ. ಒಂದು ರೈಲು ವಿಭಾಗವನ್ನು ರಚಿಸಬೇಕಾದರೆ ಕನಿಷ್ಠ 600ರಿಂದ 700 ಕಿ.ಮೀ. ವ್ಯಾಪ್ತಿ ಬೇಕಾಗುತ್ತದೆ. ಮಂಗಳೂರು ವಿಭಾಗ ರಚನೆಗೆ ಇಷ್ಟು ಕಿ.ಮೀ. ವ್ಯಾಪ್ತಿ ಲಭ್ಯವಿಲ್ಲ ಎಂಬ ಕಾರಣ ನೀಡಲಾಗುತ್ತಿದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ಉಳ್ಳಾಲದಿಂದ ಪ್ರಾರಂಭಿಸಿ ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌ ಸೇರಿದಂತೆ ಮಂಗಳೂರು, ಉಡುಪಿ, ಹಾಸನ ಕಾರ ವಾರ ಭಾಗದ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ಮಂಗಳೂರು ರೈಲ್ವೇ ವಿಭಾಗ ರಚನೆ ಅಥವಾ ಕಾರವಾರ, ಮಂಗಳೂರು, ಹಾಸನ, ಕುಣಿಗಲ್‌ವರೆಗಿನ ಮಾರ್ಗವನ್ನು ಸೇರ್ಪಡೆ ಮಾಡಿ ಮಂಗಳೂರು ವಿಭಾಗ ರಚನೆ ಅಥವಾ ಕಣ್ಣೂರು ಹೊರಗಿನ ಭಾಗ, ಮಂಗಳೂರು, ಹಾಸನ, ಕುಣಗಲ್‌ವರೆಗಿನ ಪ್ರದೇಶ ಸೇರ್ಪಡೆಗೊಳಿಸಿ ಮಂಗಳೂರು ವಿಭಾಗ ರಚನೆ ಸಾಧ್ಯತೆಗಳನ್ನು ಪರಿಶೀಲಿಸಬಹುದು ಎಂಬ ಸಲಹೆಗಳನ್ನು ಮಾಡಲಾಗಿತ್ತು. ಆದರೆ ಇದು ಕೂಡ ಕಾರ್ಯ ಸಾಧುವಲ್ಲ ಎಂಬ ವಾದವೂ ಇದೆ.

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next