ಮನೆಯಲ್ಲಿ ಬಜೆಟ್ ಪ್ಲ್ರಾನ್ ಮಾಡುವುದು ಎಂದರೆ ಖರ್ಚುಗಳಿಗೆ ಕಡಿವಾಣ ಹಾಕುವುದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ಬಜೆಟ್‌ನ ಅರ್ಥ ಅದಲ್ಲ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು. ಇನ್ನೊಂದರ್ಥದಲ್ಲಿ ಸ್ಮಾರ್ಟ್ ಆಗಿ ಖರ್ಚು ಮಾಡುವುದು. ಈ ಕುರಿತೇ ಜಗತಸಿದ್ದ ಆರ್ಥಿಕ ತಜ್ಞ ಕಾರ್ಲ್ ರಿಚರ್ಡ್ಸ ಒಂದು ಒಳ್ಳೆಯ ಬಜೆಟ್ ನಿಮ್ಮ ಜೀವನಕ್ಕೆ ಅತ್ಯಗತ್ಯವಾಗಿ ಬೇಕಿರುವ ಸಂಗತಿಗಳತ್ತ ಮಾತ್ರ ಗಮನ ಹರಿಸುತ್ತದೆ ಎಂದು ಹೇಳಿದ್ದಾರೆ.
ಶಾಪಿಂಗ್ ವ್ಯಸನಿಗಳಾಗದಿರಿ
ಅಪನಗದೀಕರಣ (ಡಿಮಾನಿಟೈಸೇಷನ್)ದ ಅನಂತರ ವ್ಯವಹಾರಗಳೆಲ್ಲ ಕ್ಯಾಶ್‌ಲೆಸ್ ಮಾದರಿಯಲ್ಲಿ ನಡೆಯುತ್ತಿರುವುದರಿಂದ ನಮ್ಮ ಖರ್ಚುವೆಚ್ಚಗಳನ್ನು ಟ್ರ್ಯಾಕ್ ಮಾಡುವುದು ತುಂಬಾ ಸುಲಭವಾಗಿಬಿಟ್ಟಿದೆ. ಅದೇನೋ ಒಳ್ಳೆಯದೇ ಆದರೆ ಕ್ಯಾಶ್‌ಲೆಸ್ ಪದ್ಧತಿಯಿಂದಾಗಿ ಖರ್ಚುಗಳೂ ಹೆಚ್ಚುತ್ತಿರುವುದು ಸುಳ್ಳಲ್ಲ. ಪರ್ಸ್ ತೆಗೆದು ನೋಟುಗಳನ್ನು ನೀಡುವಾಗ ಅಳೆದು ತೂಗಿ, ತುಂಬಾ ಯೋಚನೆ ಮಾಡಿ ಖರ್ಚು ಮಾಡುತ್ತೇವೆ. ಅದೇ ಪೇಟಿಎಂನದ್ದಾದರೆ ಒಂದೇ ಗುಂಡಿ ಅಮುಕಿದಾಗ ಪಟ್ಟೆಂದು ಹಣ ಹೋಗಿಬಿಡುತ್ತದೆ, ನಮ್ಮ ಅನುಭವಕ್ಕೇ ನಿಲುಕದಂತೆ. ಹೀಗಾಗಿ ಆನ್‌ಲೈನ್ ವ್ಯವಹಾರಗಳ ಕುರಿತು ಜಾಗರೂಕರಾಗಿರಬೇಕು. ಶಾಪಿಂಗ್ ವ್ಯಸನಿಗಳಾಗಬಾರದು.
ಉಳಿತಾಯಕ್ಕೆ ಸರಿಯಾದ ಸಮಯ
ದುಡ್ಡಿನ ಮಹತ್ವ ಗೊತ್ತಿರುವವರ ಎಷ್ಟೋ ಮನೆಗಳಲ್ಲಿಯೂ ಮನೆ ನಿರ್ವಹಣೆಗೆ ಸರಿಯಾದ ಬಜೆಟ್ ರೂಪಿಸಿರುವುದಿಲ್ಲ ಎನ್ನುವುದು ಸಂಶೋಧನೆಯಿಂದ ತಿಳಿದುಬಂದ ವಿಪರ್ಯಾಸದ ಸಂಗತಿ. ಬಜೆಟ್ ರೂಪಿಸಿದ ಮನೆಯವರು, ರೂಪಿಸದವರಿಗಿಂತ ಹೆಚ್ಚು ಉಳಿತಾಯ ಮಾಡಿದ ಮಾಹಿತಿಯನ್ನೂ ಸಂಶೋಧನೆ ಹೊರ ಹಾಕಿತ್ತು. ಇದು ಹೇಗೆ ಸಾಧ್ಯವಾಯಿತು ಎಂದರೆ, ತಿಂಗಳಿಗೆ ಇಂತಿಷ್ಟು ಮೊತ್ತವನ್ನು ಎತ್ತಿಟ್ಟರೆ ಅಥವಾ ಹೂಡಿಕೆಯಲ್ಲಿ ತೊಡಗಿಸಿದರೆ ಪ್ರತಿ ತಿಂಗಳು ತನ್ನಿಂದ ತಾನೇ ಜಮಾ ಅಗುತ್ತಿರುತ್ತದೆ. ಇತ್ತಕಡೆ ಬಜೆಟ್ ಹೊಂದಿರದ ಮನೆಯವರು ಬ್ಯಾಂಕ್ ಖಾತೆಯಲ್ಲಿ ದುಡ್ಡಿರುವುದನ್ನು ಕಂಡು ಕಾಲ ಕಾಲಕ್ಕೆ ಖರ್ಚು ಮಾಡುತ್ತಾ, ಭವಿಷ್ಯದ ಯೋಚನೆಯನ್ನೇ ಬಿಟ್ಟಿರುತ್ತಾರೆ. ಮುಂದೆ ದುಡ್ಡಿನ ಅವಶ್ಯಕತೆ ಬಂದಾಗ ಅವರಿಗೆ ಅರಿವಾಗುವಷ್ಟರಲ್ಲಿ ಸಮಯ ಮೀರಿರುತ್ತದೆ. ಹೀಗಾಗಿ ಉಳಿತಾಯಕ್ಕೆ ಸರಿಯಾದ ಸಮಯವೆಂದರೆ ಈಗಲೇ’!
50: 30: 20 ನಿಯಮ
ನಿಮ್ಮದೇ ಬಜೆಟ್ ರೂಪಿಸುವ ಮುನ್ನ ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಆದಾಯದ ಮೂಲಗಳನ್ನು ಮೊದಲು ಬರೆದಿಟ್ಟುಕೊಳ್ಳುವುದು. ಸಂಬಳ, ಬಾಡಿಗೆ, ಠೇವಣಿ ಮೇಲಿನ ಬಡ್ಡಿ, ಡಿವಿಡೆಂಡ್ ಮುಂತಾದವೆಲ್ಲ ಅದರಲ್ಲಿ ಸೇರಿರಬೇಕು. ಅನಂತರ ತಿಂಗಳ ಖರ್ಚು ವೆಚ್ಚಗಳನ್ನು ಪಟ್ಟಿ ಮಾಡಬೇಕು. ಅವಕ್ಕೆಲ್ಲ ತಗಲುವ ಮೊತ್ತವನ್ನು ಜತೆಯಲ್ಲೇ ನಮೂದಿಸಬೇಕು. ದಿನಸಿ ಬಿಲ್‌ಗಳು, ಕರೆಂಟ…- ವಾಟರ್ ಬಿಲ…, ಮನೆಗೆಲಸದಾಕೆಗೆ ನೀಡುವ ಸಂಬಳ, ಪೆಟ್ರೋಲ…- ಡೀಸೆಲ್ ಬಿಲ…, ವಾಹನದ ಇ.ಎಂ.ಐ. ಹೀಗೆ ನಿಮ್ಮ ಜೇಬಿನಿಂದ ಹೊರ ಹೋದ ಪ್ರತಿ ಮೊತ್ತವೂ ಪಟ್ಟಿಯಲ್ಲಿರಬೇಕು. ಕೆಲವು ಖರ್ಚುಗಳು ಪ್ರತಿ ತಿಂಗಳೂ ಬರುವುದಿಲ್ಲ. ಹೀಗಾಗಿ ಅವೆಲ್ಲವನ್ನೂ ತಿಂಗಳ ಲೆಕ್ಕಕ್ಕೆ ಸರಿದೂಗುವಂತೆ ಭಾಗಿಸಿ ಪಟ್ಟಿಯಲ್ಲಿ ಬರೆದಿಡಬೇಕು.
ಕೌಟುಂಬಿಕ ಬಜೆಟ್ ವಿಷಯದಲ್ಲಿ 50: 30: 20 ಎಂಬ ಹೆಸರುವಾಸಿ ನಿಯಮವಿದೆ. ಅದು ಏನನ್ನುತ್ತದೆಯೆಂದರೆ ಶೇ. 50ರಷ್ಟು ಆದಾಯವನ್ನು ಮೂಲಭೂತ ಅಗತ್ಯಗಳಿಗಾಗಿ (ಆಹಾರ, ಮನೆ, ಬಟ್ಟೆ) ಖರ್ಚು ಮಾಡಬೇಕು. ಶೇ. 30ರಷ್ಟನ್ನು ಇತರ ಖರ್ಚುಗಳಿಗಾಗಿ ವ್ಯಯಿಸಬೇಕು. ಉಳಿದ ಶೇ. 20ರಷ್ಟು ಮೊತ್ತವನ್ನು ಉಳಿತಾಯದ ಖಾತೆಗೆ ಜಮಾ ಮಾಡಬೇಕು. ಇದೊಂದು ಮಾದರಿಯಷ್ಟೆ. ಇದನ್ನು ಗಮನದಲ್ಲಿರಿಸಿಕೊಂಡು ಮುನ್ನಡೆದರೆ ಸಾಕು.
ಹೆಚ್ಚದಿರಲಿ ಇ.ಎಂ.ಐ.
ನಾವು ಪ್ರತಿ ತಿಂಗಳು ಕಟ್ಟುವ ಸಾಲದ ಕಂತು, ಯಾವತ್ತೂ ನಮ್ಮ ಆದಾಯದ ಶೇ. 50ರಷ್ಟನ್ನು ಮೀರಬಾರದು. ಇ.ಎಂ.ಐ. ಆದಾಯದ ಶೇ. 15ರಷ್ಟನ್ನು ಮೀರಬಾರದು, ವೈಯಕ್ತಿಕ ಲೋನ್ ಶೇ. 10ರಷ್ಟನ್ನು ಮೀರಿರಬಾರದು. ಇ.ಎಂ.ಐ.ಗಳು ಹೆಚ್ಚಿದಂತೆಲ್ಲ ಭವಿಷ್ಯದ ಯೋಜನೆಗಳಿಗೆ ದುಡ್ಡು ಸಾಲದಿರುವ ಅಪಾಯವಿರುತ್ತದೆ. ಹೀಗಾಗಿ ಇ.ಎಂ.ಐ. ಗಳನ್ನು ಕಡಿಮೆ ಮಾಡಿಕೊಂಡಷ್ಟೂ ಒಳ್ಳೆಯದು. ಸರಕಾರಿ ಬಜೆಟ್ ಹೇಗೆ ದೇಶದ ಭವಿಷ್ಯವನ್ನು ರೂಪಿಸುವುದೋ ಅದೇ ರೀತಿ ಕೌಟುಂಬಿಕ ಬಜೆಟ್ ನಮ್ಮೆಲ್ಲರ ಜೀವನವನ್ನು ಕೈಹಿಡಿದು ನಡೆಸುವುದು. ಆರ್ಥಿಕ ಸ್ವಾತಂತ್ರ್ಯ ನೀಡಿ ನಮ್ಮನ್ನು ಭವಿಷ್ಯಕ್ಕೆ ಸಜ್ಜುಗೊಳಿಸುವುದು.
ಹಣ ಉಳಿಸಿ, ಬೆಳೆಸಿ
ಈಗ ತಾನೇ ಕೆಲಸಕ್ಕೆ ಸೇರಿರುವ ಯುವಜನತೆ ಶುರುವಿನ ಉಳಿತಾಯದ ಸುವರ್ಣ ಸಮಯವನ್ನು ಕಳೆದುಕೊಳ್ಳಬಾರದು. ಈಗ ತಾನೇ ದುಡಿಯಲು ಶುರುಮಾಡಿದ್ದೇವೆ. ಇಷ್ಟು ಬೇಗ ಯಾಕೆ ಉಳಿತಾಯ ಎಂದು ನಿರ್ಲಕ್ಷ್ಯ ತೋರಬಾರದು. ಉಳಿತಾಯದ ಮೊತ್ತ ಚಿಕ್ಕದಿರಲಿ, ದೊಡ್ಡದಿರಲಿ, ಸಂಬಳದಲ್ಲಿ ಇಂತಿಷ್ಟು ಎಂದು ನಿಗದಿ ಪಡಿಸಿಬಿಟ್ಟರೆ ಭವಿಷ್ಯದಲ್ಲಿ ಕೋಟ್ಯಂತರ ರುಪಾಯಿಯಷ್ಟಾಗುತ್ತದೆ. ಅದೇ ವಯಸ್ಸಾದ ಅನಂತರ ಉಳಿತಾಯ ಶುರು ಮಾಡಿದರೆ ಚಿಕ್ಕ ಮೊತ್ತವಷ್ಟೇ ನಿಮ್ಮ ಭವಿಷ್ಯದ ಯೋಜನೆಗಳಿಗೆ ಸಿಗುತ್ತದೆ.
ಉದಾಹರಣೆಗೆ, 30ನೇ ವರ್ಷದಿಂದಲೇ ತಿಂಗಳಿಗೆ ಸುಮಾರು 10,000 ರೂ.ನಷ್ಟು ಉಳಿತಾಯ ಶುರು ಮಾಡಿದರೆ ನಿವೃತ್ತಿ ಹೊಂದುವ ವೇಳೆಗೆ 2.16 ಕೋಟಿ ರೂ. ಆಗುವ ಸಾಧ್ಯತೆ ಇದೆ. ಐದು ವರ್ಷ ತಡವಾಗಿ ಅಂದರೆ 35ನೇ ವಯಸ್ಸಿಗೆ ಉಳಿತಾಯ ಶುರುಮಾಡಿದರೆ ಕಡೆಯಲ್ಲಿ ಒಂದು ಕೋಟಿ ಜಮೆಯಾಗಿರುತ್ತದೆ. ಕೇವಲ 5 ವರ್ಷ ತಡ ಮಾಡಿದ್ದಕ್ಕೆ ಅರ್ಧಕ್ಕರ್ಧ ಲಾಭದಿಂದ ವಂಚಿತರಾಗಬೇಕಾಗುತ್ತದೆ ಎನ್ನುವ ಸಂಗತಿಯಿಂದಲೇ ಉಳಿತಾಯ ಮತ್ತು ಸಮಯದ ಮಹತ್ವವನ್ನು ನಾವು ತಿಳಿದುಕೊಳ್ಳಬಹುದು.
ಮನೆಯ ಸಮತೋಲನಕ್ಕೆ ಐದು ಸೂತ್ರಗಳು
1. ಮನೆ ಅಥವಾ ನಿವೇಶನ ಕೊಂಡು ತಿಂಗಳ ಕಂತು(ಇ.ಎಂ.ಐ) ತಿಂಗಳಆದಾಯದ ಶೇ. 25 ಮೀರಬಾರದು.
2. ಮನೆಯ ಬಾಡಿಗೆ ವೆಚ್ಚ ಇಲ್ಲದಿದ್ದರೆ ಮಾತ್ರ ಮಾಸಿಕ ಕಂತು ಶೇ. 35ರವರೆಗೆ ಇರಬಹುದು.
3. ಒಂದು ತಿಂಗಳ ಆದಾಯದಷ್ಟು ಹಣ ಯಾವಾಗಲೂ ಬ್ಯಾಂಕ್ ಖಾತೆಯಲ್ಲಿರಬೇಕು.
4. ಶೇ.25 ತಿಂಗಳ ಆದಾಯವನ್ನು ಉಳಿತಾಯ ಮಾಡುವುದು ಸುರಕ್ಷಿತ ಭವಿಷ್ಯದ ಮುನ್ನುಡಿ.
5. ಮನೆಯ ಬಾಡಿಗೆ ಆದಾಯದ ಶೇ. 15 ಮೀರದಂತಿದ್ದರೆ ಉತ್ತಮ.
ಆದರ್ಶ ಕೆ.ಎಸ್.