Advertisement

ದುಶ್ಚಟಮುಕ್ತ ಜಿಲ್ಲೆಯಾಗಲಿ

10:46 AM Jan 28, 2019 | |

ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳಿದ್ದು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದು ಉದ್ಯಮಿ ಡಿ.ಎಸ್‌. ಅರುಣ್‌ ತಿಳಿಸಿದರು. ಸಹ್ಯಾದ್ರಿ ಉತ್ಸವದ ಅಂಗವಾಗಿ ಬಾನುವಾರ ಕುವೆಂಪು ರಂಗಮಂದಿರದಲ್ಲಿ ನಡೆದ ಉದ್ಯಮ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.

Advertisement

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟರೆ ಇಂದು ಬಹುದೊಡ್ಡ ಉದ್ಯಮವಾಗಿ ಬೆಳೆಯಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಆರೋಗ್ಯ ಮತ್ತು ಶಿಕ್ಷಣ ಸುಲಭವಾಗಿ ಜನರಿಗೆ ದಕ್ಕುವಂತೆ ಸರ್ಕಾರ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಅವೆರಡು ಉದ್ಯಮಗಳಾಗದಂತೆ ತಡೆದು ಸಾಮಾನ್ಯರಿಗೂ ತಲುಪುವಂತೆ ಮಾಡಬೇಕು. ಆಗ ಮಾತ್ರ ಪ್ರತಿಯೊಬ್ಬ ಮನುಷ್ಯನು ಪ್ರಗತಿಯ ಯೋಚನೆ ಹೊಂದಿ ಸಂಶೋಧನೆ ಹಾಗೂ ಉದ್ಯಮದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಉದ್ಯಮಗಳಿಗೆ ಸರ್ಕಾರಗಳಿಂದ ಇನ್ನಷ್ಟು ಉತ್ತೇಜನದ ಅಗತ್ಯವಿದೆ. ಸರ್ಕಾರ ಜನರನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ಯಬೇಕು. ಅದು ಲಾಭದ ನಿರೀಕ್ಷೆ ಮಾಡಬಾರದು. ಉದ್ಯಮಗಳಿಗೆ ಬೆಂಬಲ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವ ಅಗತ್ಯವಿದೆ ಎಂದರು.

ಮಹಿಳಾ ಉದ್ಯಮಗಳ ಬಗ್ಗೆ ಬಿ.ವಿ. ಲಕ್ಷ್ಮಿದೇವಿ ಮಾತನಾಡಿ, ಮಹಿಳೆ ನಾಲ್ಕು ಗೋಡೆಗಳ ಒಳಗಿಂದ ಸ್ವತಂತ್ರಳಾಗಿ ಉದ್ಯಮದೆಡೆಗೆ ಹೆಜ್ಜೆ ಹಾಕುವ ಅಗತ್ಯತೆಯಿದೆ. ಇದಕ್ಕೆ ಪೂರಕವಾಗಿ ಸಾಕಷ್ಟು ಯೋಜನೆಗಳಿವೆ. ಆ ಮಾಹಿತಿಗಳನ್ನು ಪಡೆದು ಬೆಳೆಯಬೇಕಿದೆ ಎಂದರು.

Advertisement

ಎರಡನೇ ಗೋಷ್ಠಿಯಲ್ಲಿ ಕೃಷಿ ಆಧಾರಿತ ಉದ್ಯಮಗಳು ಎಂಬ ವಿಷಯದ ಬಗ್ಗೆ ನಿವೇದನ್‌ ಮಂಡಗದ್ದೆ ಮಾತನಾಡಿ, ಕೃಷಿಯೆಡೆಗೆ ವಿದ್ಯಾವಂತರು ಹೆಜ್ಜೆ ಹಾಕಬೇಕಿದೆ. ಆಗ ಮಾತ್ರ ಕೃಷಿಯಲ್ಲಿ ಕ್ರಾಂತಿಯಾಗಲು ಸಾಧ್ಯ ಎಂದರು.

ರೈತರ ಸಮಸ್ಯೆಗಳನ್ನು ಅರಿಯಲು ಯುವಜನತೆ ಮುಂದಾಗಬೇಕು. ಆಗ ಕೃಷಿ ಬಗೆಗಿನ ಹೊಸ ಉದ್ಯಮಗಳ ಯೋಚನೆ ಬರಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಿ.ಎಸ್‌. ಚಂದ್ರಶೇಖರ ಮತ್ತು ಎರಡನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ| ಎಚ್.ವಿ. ಸುಬ್ರಹ್ಮಣ್ಯ ವಹಿಸಿದ್ದರು.

ಉಪನ್ಯಾಸಗಳಿಗೆ ಎಸ್‌.ವಿ. ಚಂದ್ರಕಲಾ, ಉಮೇಶ್‌ ಶಾಸ್ತ್ರಿ, ಎಂ.ಭಾರದ್ವಜ್‌ ಹಾಗೂ ಬೆನಕಪ್ಪ ಪ್ರತಿಕ್ರಿಯೆ ನೀಡಿದರು.

ಶಿವಮೊಗ್ಗ: ಜಿಲ್ಲೆಯು ಸಾಂಸ್ಕೃತಿಕ ನಗರವಾಗಿದೆ. ಆದರೆ, ಇಂತಹ ಜಿಲ್ಲೆಯ ಹಳ್ಳಿ- ಹಳ್ಳಿಗೆ ಗಾಂಜಾ, ಓಸಿ ಮುಟ್ಟುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಹಳೆಯ ಜೈಲು ಆವರಣದ ರಾಷ್ಟ್ರಕವಿ ಕುವೆಂಪು ವೇದಿಕೆಯಲ್ಲಿ ಆಯೋಜಿಸಿದ್ದ ಸಹ್ಯಾದ್ರಿ ಉತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಾಂಜಾ, ಓಸಿಯಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಗಾಂಜಾ ಸೇದಿ ಪೋಷಕರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಇವುಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಜಿಲ್ಲೆಯಿಂದ ಹೊರಗಟ್ಟುವ ಕೆಲಸವನ್ನು ಮಾಡಬೇಕು. ಇಲ್ಲವಾದರೆ ನಾವೇ ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಕಾನೂನು ಉಲ್ಲಂಘನೆಯನ್ನು ದುಷ್ಟರನ್ನು, ಸಮಾಜಘಾತುಕರು ಮಾಡಿದರೆ ನೋಡಿ ಕೂರುವ ರಾಜಕಾರಣಿಗಳು ಜಿಲ್ಲೆಯಲ್ಲಿಲ್ಲ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಂಡು ಇವುಗಳನ್ನು ಹೊರಗಟ್ಟುವ ಕೆಲಸವನ್ನು ಮಾಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ದೊಡ್ಡ ಸಾಂಸ್ಕೃತಿಕ ನಗರವಾಗಿದ್ದು, ಈ ಜೈಲು ಆವರಣ ಹೀಗೆ ಖಾಲಿ ಉಳಿಯಬೇಕು. ಸಾರ್ವಜನಿಕರ ಕಾರ್ಯಕ್ರಮಕ್ಕೆ ಉಪಯೋಗವಾಗಬೇಕಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಇದೇ ಸಮಯದಲ್ಲಿ ಸಿದ್ಧಗಂಗಾ ಶ್ರೀಗಳು ಅಗಲಿದರು. ಬರಗಾಲ ಎದುರಿಸಿದ್ದೇವೆ. ಅನೇಕ ಸಮಸ್ಯೆಗಳನ್ನು ಎದುರಿಸಿದ್ದೇವೆ. ಇಂತಹ ಸಂದರ್ಭದಲ್ಲೂ ಜಿಲ್ಲಾಡಳಿತ ಯಶಸ್ವಿಯಾಗಿ ಉತ್ಸವ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದರು.

ಜಿಲ್ಲೆಯಲ್ಲಿ ಟೂರಿಸಂಗೆ ಸಾಕಷ್ಟು ಅವಕಾಶವಿದೆ. ಜಿಲ್ಲಾಧಿಕಾರಿ ಹಾಗೂ ನಾವೆಲ್ಲರೂ ಒಟ್ಟಾಗಿ ಸೇರಿ ಶರಾವತಿ ಬ್ಯಾಕ್‌ವಾಟರ್‌, ಜೋಗ್‌ಫಾಲ್ಸ್‌ನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಮೂಲಕ ದೇಶದಲ್ಲಿ ಉತ್ತ ಪ್ರವಾಸಿ ಸ್ಥಳಗಳಾಗಿ ಮಾಡಬಹುದು ಎಂದರು.

ಶಿವಮೊಗ್ಗ, ಶೃಂಗೇರಿ, ಮಂಗಳೂರಿಗೆ ಹೊಸ ರೈಲ್ವೆ ಯೋಜನೆ ಮಾಡಲು ಅಧಿಕೃತ ಯೋಜನೆ ಮಾಡಿದ್ದೇವೆ. ಜಿಲ್ಲೆಯ ಅರಸಾಳು ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿಪಡಿಸುವ ಮೂಲಕ ಒಟ್ಟಾರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಒಂದು ಜಿಲ್ಲೆಯನ್ನು ಹೊರ ಜಗತ್ತಿಗೆ ಪರಿಚಯ ಮಾಡಿಕೊಡುವಂತಹ ಇಲ್ಲಿನ ಸಾಂಸ್ಕೃತಿಕ ವೈಭವಗಳನ್ನು, ಬೇರೆ ಬೇರೆ ಚಟುವಟಿಕೆಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ್ದು ಮಾತ್ರವಲ್ಲ. ಜಿಲ್ಲೆಯ ಒಳಗಡೆ ಇರುವ ನಮಗೂ ಕೂಡ ಜಿಲ್ಲೆಯ ಕುರಿತು ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಪರಿಚಯಿಸಿದ್ದು ಉಪಯುಕ್ತವಾಗಿದೆ ಎಂದರು.

ವಿಧಾನಪರಿಷತ್‌ ಸದಸ್ಯ ಆರ್‌. ಪ್ರಸನ್ನ ಕುಮಾರ್‌ ಮಾತನಾಡಿ, ಹತ್ತು ವರ್ಷದಿಂದ ಸಹ್ಯಾದ್ರಿ ಉತ್ಸವ ನಿಂತಿತ್ತು. ಜಿಲ್ಲಾಧಿಕಾರಿಗಳು ಉತ್ಸವ ಮಾಡಲು ತಯಾರಿ ಮಾಡಿದರು. 5 ದಿನದ ಕಾರ್ಯಕ್ರಮಗಳನ್ನು ಕಾರಣಾಂತರದಿಂದ 4 ದಿನಗಳಿಗೆ ಮಾಡಲಾಯಿತು. 5 ದಿನದ ಕಾರ್ಯಕ್ರಮಗಳನ್ನು ನಾಲ್ಕು ದಿನಗಳಲ್ಲಿ ಮಾಡಿದರು ಎಂದು ಶ್ಲಾಘಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ, ಉಪ ಮೇಯರ್‌ ಚನ್ನಬಸಪ್ಪ, ಮಂಗಳಾ ನಾಯ್ಕ, ಪ್ರಕಾಶ್‌, ಹನುಮಾ ನಾಯ್ಕ ಮತ್ತಿತರರು ಇದ್ದರು.

ಪ್ರವಾಸೋದ್ಯಮ ಅಭಿವೃದ್ಧಿ ಅಗತ್ಯ: ಅರುಣ್‌

Advertisement

Udayavani is now on Telegram. Click here to join our channel and stay updated with the latest news.

Next