Advertisement
ಹುಬ್ಬಳ್ಳಿ ನೂತನ ನ್ಯಾಯಾಲಯ ಸಂಕೀರ್ಣವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕೋರ್ಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹಣಕಾಸಿನ ಕೊರತೆ ಇದೆ ಎಂಬುದನ್ನು ಸಹಿಸಲಾಗದು. ಕೋರ್ಟ್‌ಗಳಿಗೆ ಮುಖ್ಯವಾಗಿ ಉತ್ತಮ ಮೂಲಸೌಕರ್ಯ ಅವಶ್ಯ. ನ್ಯಾಯಾನುದಾನಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಕರ್ನಾಟಕದಲ್ಲಿ ಬಹುತೇಕ ಕೋರ್ಟ್ ಕಟ್ಟಡಗಳು ಸ್ವಂತ ಕಟ್ಟಡ ಹೊಂದಿವೆ ಎಂಬುದನ್ನು ಕೇಳಿ ಸಂತಸವಾಯಿತು. ಈ ನಿಟ್ಟಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುವೆ. ಜತೆಗೆ ಉತ್ತಮ ಮೂಲಸೌಕರ್ಯ ನೀಡಿಕೆ ಕಾರ್ಯ ಮುಂದುವರಿಯಲಿ ಎಂದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ ಎಂ.ಶಾಂತನಗೌಡರ ಮಾತನಾಡಿ, ಈ ನೂತನ ನ್ಯಾಯಾಲಯ ಸಂಕೀರ್ಣದ ಮೂಲಕ ಹುಬ್ಬಳ್ಳಿ ಬಾರ್ ಅಸೋಸಿಯೇಷನ್‌ನ ಋಣ ತೀರಿಸುವ ಕೆಲಸ ಮಾಡಿದ್ದೇನೆ ಎಂದರು. ಹುಬ್ಬಳ್ಳಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದನ್ನು ಅವರು ಸ್ಮರಿಸಿಕೊಂಡರು. ಕೋರ್ಟ್‌ನ ಹಳೇ ಕಟ್ಟಡ ನ್ಯಾಯಾಂಗ ಇಲಾಖೆಯಲ್ಲೆ ಇರಲಿ, ಅದನ್ನು ಬಿಟ್ಟು ಕೊಡುವುದು ಬೇಡ. ಅದು ಕಾರ್ಮಿಕ ಕೋರ್ಟ್, ಗ್ರಾಹಕರ ಕೋರ್ಟ್‌ಗೆ ಬಳಕೆ ಆಗುವಂತಾಗಲಿ. ಕಟ್ಟಡ ಕಟ್ಟುವುದಷ್ಟೇ ಅಲ್ಲ, ಅದರ ಉತ್ತಮ ನಿರ್ವಹಣೆ ಅವಶ್ಯ. ಕೋರ್ಟ್‌ನಲ್ಲಿ ಯಾರಾದರೂ ಎಲೆ, ಅಡಕೆ, ತಂಬಾಕು ತಿಂದು ಉಗಿದರೆ ಅಂತಹವರಿಗೆ 500 ರೂ. ದಂಡ ವಿಧಿಸಿ ಎಂದರು.
Related Articles
Advertisement
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ ಮಾಹೇಶ್ವರಿ ಮಾತನಾಡಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸೂಚನೆಯಂತೆ ಕೆಳ ಹಂತದ ಕೋರ್ಟ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತಾಗಿ ಕರ್ನಾಟಕದಲ್ಲಿ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ರಾಜ್ಯ ಕಮಿಟಿ ರಚಿಸಲಾಗಿದೆ. ಪರ್ಯಾಯ ನ್ಯಾಯಾನುದಾನ ವ್ಯವಸ್ಥೆಯಡಿ ಪ್ರತಿ ಜಿಲ್ಲೆಯಲ್ಲಿ ಮಧ್ಯಸ್ಥಿಕೆದಾರರ ಕೇಂದ್ರ ಆರಂಭಿಸಲಾಗಿದೆ. 2017-18ರಲ್ಲಿ ಶೇ.20ರಷ್ಟು ಪ್ರಕರಣಗಳು ಪರ್ಯಾಯ ನ್ಯಾಯಾನುದಾನ ವ್ಯವಸ್ಥೆಯಡಿ ಇತ್ಯರ್ಥಗೊಂಡಿವೆ ಎಂದರು.
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಹೈಕೋರ್ಟ್ ನ್ಯಾಯಾಮೂರ್ತಿಗಳಾದ ರವಿ ಮಳಿಮಠ, ಬೂದಿಹಾಳ ಆರ್.ಬಿ., ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಡಿ.ರೇವಣ್ಣ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಇನ್ನಿತರರಿದ್ದರು.
ನ್ಯಾಯಾಂಗ ಇಲಾಖೆಗೆ ಅನುದಾನ ಕಡಿತವಿಲ್ಲಹುಬ್ಬಳ್ಳಿ: ನ್ಯಾಯಾಂಗ ಇಲಾಖೆಗೆ ಮೂಲಸೌಕರ್ಯ ಹಾಗೂ ಇನ್ನಿತರ ಕಾರ್ಯಕ್ಕೆ ಯಾವುದೇ ರೀತಿಯಿಂದ ಅನುದಾನ ಕಡಿತವಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಇಲ್ಲಿನ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 230-240 ಕೋರ್ಟ್ ಸಂಕೀರ್ಣಗಳಿದ್ದು, ಇದರಲ್ಲಿ ಸುಮಾರು 14-15 ಮಾತ್ರ ಬಾಡಿಗೆ ಕಟ್ಟಡದಲ್ಲಿದ್ದರೆ, ಉಳಿದೆಲ್ಲವೂ ಸ್ವಂತ ಕಟ್ಟಡ ಹೊಂದಿವೆ. ಮುಂದಿನ ದಿನಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ನ್ಯಾಯಾಲಯಗಳಿಗೂ ಸ್ವಂತ ಕಟ್ಟಡ ನಿರ್ಮಿಸಲಾಗುವುದು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸುಸಜ್ಜಿತ ಕೋರ್ಟ್ ಸಂಕೀರ್ಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನಲ್ಲಿ ಫ್ಲೆಕ್ಸ್‌ಗಳ ತೆರವಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕಠಿಣ ನಿಲುವು ತಾಳಿದ್ದರಿಂದ ಸಮರ್ಪಕ ಕ್ರಮ ಜಾರಿಯಾಗುತ್ತಿದೆ. ಅದೇ ರೀತಿ ಹೈಕೋರ್ಟ್ ಇಂತಹ ಹಲವು ಕಠಿಣ ನಿಲುವುಗಳನ್ನು ತಾಳಿದಷ್ಟು ನಮ್ಮ ಆಡಳಿತ ಸುಲಭವಾಗಲಿದೆ ಎಂದರು. ಇದೊಂದು ಕೌಟುಂಬಿಕ ಸಮಾರಂಭವಾಗಿದೆ. ಈ ಕೋರ್ಟ್ ಸಂಕೀರ್ಣ ದೇಶಕ್ಕೇ ಮಾದರಿಯಾಗಿದೆ. ಕೋರ್ಟ್‌ಗಳು ಮಾಡುವ ಕಾರ್ಯ ಯಾರಿಂದಲೂ ಮಾಡಲಾಗದು. ನ್ಯಾಯಾಂಗ ಇಲಾಖೆಗೆ ಮಾನಸಿಕ ನೆಮ್ಮದಿಯ ವಾತಾವರಣ ಸೃಷ್ಟಿಸಬೇಕಾಗಿದೆ.
– ಬಸವರಾಜ ಹೊರಟ್ಟಿ, ವಿಧಾನ ಪರಿಷತ್ತು ಸಭಾಪತಿ. ನ್ಯಾಯಾಂಗದ ಸಕ್ರಿಯತೆ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ಫ್ಲೆಕ್ಸ್‌ಗಳ ತೆರವು ಯಾವುದೇ ಸರ್ಕಾರದಿಂದ ಆಗಿರಲಿಲ್ಲ. ಆದರೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಆದೇಶದಿಂದಾಗಿ ಇಂದು ಫ್ಲೆಕ್ಸ್ ಮುಕ್ತ ಬೆಂಗಳೂರು ನೋಡುವಂತಾಗಿದೆ.
-ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿ. ನ್ಯಾಯಾಂಗ ಇಲಾಖೆಯ ಕಟ್ಟಡಗಳ ನಿರ್ಮಾಣ ಹಾಗೂ ಮೂಲಸೌಲಭ್ಯ ನೀಡಿಕೆ ವಿಷಯದಲ್ಲಿ ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು.
– ಎಚ್.ಡಿ.ರೇವಣ್ಣ, ಲೋಕೋಪಯೋಗಿ ಸಚಿವ. ನಮ್ಮದು ವಿಶ್ವದಲ್ಲೇ ಬಲಿಷ್ಠ ಪ್ರಜಾಪ್ರಭುತ್ವ. ಇದಕ್ಕೆ ಇನ್ನಷ್ಟು ಶಕ್ತಿ ತುಂಬುವ ಕೆಲಸ ಆಗಬೇಕು. ದೇಶದಲ್ಲಿ ನ್ಯಾಯಪೀಠಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕಾಗಿದ್ದು, ಸುಪ್ರೀಂಕೋರ್ಟ್‌ನ ಪೀಠ ರಚನೆ ಬಗ್ಗೆಯೂ ಚಿಂತನೆ ನಡೆಯಬೇಕಾಗಿದೆ.
– ಪ್ರಹ್ಲಾದ ಜೋಶಿ, ಸಂಸದ.