ಬೆಂಗಳೂರು: ಗಣ್ಯರ ವಾಹನಗಳ ಮೇಲಿನ ಕೆಂಪು ದೀಪ ತೆಗೆಸಲು ರಾತ್ರೋರಾತ್ರಿ ತೀರ್ಮಾನ ತೆಗೆದುಕೊಂಡ ಕೇಂದ್ರ ಸರ್ಕಾರ, ರೈತರ ಸಾಲಮನ್ನಾ ವಿಚಾರದಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಾಲ ಮನ್ನಾ ಬಗ್ಗೆ ರಾಷ್ಟ್ರೀಯ ನೀತಿ ಪ್ರಕಟಿಸುವಂತೆ ಒತ್ತಾಯಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾದ ಬಗ್ಗೆ ರಾಷ್ಟ್ರೀಯ
ನೀತಿ ಪ್ರಕಟಿಸಲಿ ಇಲ್ಲವೇ ರೈತರ ಸಾಲ ಮನ್ನಾ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಲಿ ಎಂದು ಸವಾಲು ಹಾಕಿದರು.
ರೈತರ ಸಾಲಮನ್ನಾ ಬಗ್ಗೆ ಕೇಂದ್ರ ಸರ್ಕಾರದ ಸ್ಪಷ್ಟ ನಿಲುವು ಇಲ್ಲ. ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದ ಸಾಲ ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರಿ ಸಂಘಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಒಂದು ವೇಳೆ ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಮನ್ನಾ ಮಾಡದಿದ್ದರೆ, ರಾಜ್ಯ ಸರ್ಕಾರ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದರೆ ರೈತರಿಗೆ ತಾರತಮ್ಯ ಮಾಡಿದಂತಾಗುತ್ತದೆ. ಈ ಹಿಂದೆ ಯುಪಿಎ ಸರ್ಕಾರದಲ್ಲಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ರೈತರ ಸಾಲ ಮನ್ನಾ ಮಾಡಿದ ಉದಾಹರಣೆ ಇದೆ. ಅದನ್ನೇ ಈಗಿನ ಪ್ರಧಾನಿ ನರೇಂದ್ರ ಮೋದಿ ಮಾಡಲಿ. ಇಲ್ಲದಿದ್ದರೆ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದಾದರೂ ಹೇಳಿ ಬಿಡಲಿ, ಆಗ ಮುಂದೇನು ಮಾಡಬೇಕು ಎಂದು ರಾಜ್ಯ ಸರ್ಕಾರ ಆಲೋಚಿಸುತ್ತದೆ ಎಂದು ಹೇಳಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ವಕ್ತಾರ ವಿ. ಆರ್. ಸುದರ್ಶನ್ ಇದ್ದರು.
ಕೇಂದ್ರ ಒಪ್ಪಿದರೆ ರಾಜ್ಯವೂ ಸಿದ್ಧ: ಸಿಎಂ ಸಿದ್ದರಾಮಯ್ಯ
ವಿಜಯಪುರ: ರಾಜ್ಯದ ರೈತರು ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಮಾಡಿರುವ ಸುಮಾರು 40 ಸಾವಿರ ಕೋಟಿ ರೂ. ಸಾಲ ವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದರೆ, ಸಹಕಾರಿ ವಲಯದಲ್ಲಿ ಕೃಷಿಗಾಗಿ ರೈತರು ಮಾಡಿರುವ ಸುಮಾರು 10,500 ಕೋಟಿ ರೂ. ಸಾಲಮನ್ನಾ ಮಾಡುವ ನನ್ನ ನಿರ್ಧಾರ ಅಚಲ ಎಂದು ಸಿಎಂ ಸಿದ್ದರಾಮಯ್ಯ
ಪುನರುಚ್ಚರಿಸಿದ್ದಾರೆ. ಸಾಲಮನ್ನಾ ಮಾಡುವ ವಿಷಯದಲ್ಲಿ ನನ್ನ ವಿರೋಧವಿಲ್ಲ, ನಾನು ರೈತರ ಪರವಾಗಿದ್ದೇನೆ ಎಂದರು.
ರಾಷ್ಟ್ರಪಿತ ಮಹಾತ್ಮಗಾಂಧಿ ಅವರನ್ನು “ಚತುರ ಬನಿಯಾ’ ಎಂದು ಹೇಳುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಡೀ ರಾಷ್ಟ್ರಕ್ಕೆ ಅವಮಾನ ಮಾಡಿದ್ದಾರೆ. ಇದು ಅವರು ಮತ್ತು ಬಿಜೆಪಿಯ ಮನಸ್ಥಿತಿ ತೋರಿಸುತ್ತಿದೆ. ಅದೇ ರೀತಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ ನೆಹರು ಬಗ್ಗೆ ಆಡಿರುವ ಮಾತು ವಾಪಸ್ ಪಡೆಯಬೇಕು. ಗಾಂಧಿ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ.
– ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ