Advertisement

Shivamogga; ಯತ್ನಾಳ್ ಅವರು ಬಸ್ ಸ್ಟ್ಯಾಂಡಲ್ಲಿ ಗಿಣಿ ಶಾಸ್ತ್ರ ಹೇಳಲಿ…: ಮಧು ಬಂಗಾರಪ್ಪ

03:07 PM Aug 15, 2023 | Team Udayavani |

ಶಿವಮೊಗ್ಗ: ಅರು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಹೇಳುವ ಬಿಜೆಪಿ ಶಾಸಕ ಯತ್ನಾಳ್ ಅವರಿಗೆ ಈ ಬಸ್ ಸ್ಟ್ಯಾಂಡ್ ನಲ್ಲಿ ಜಾಗ ಖಾಲಿಯಿದೆ. ಅಲ್ಲಿ ಗಿಣಿ ಶಾಸ್ತ್ರ ಹೇಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಲೇವಡಿ ಮಾಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಸಾಕ್ಷ್ಯಾಧಾರ ನೀಡಲಿ. ಸುಮ್ಮನೆ ಆರೋಪ ಮಾಡುವುದು ಬೇಡ. ಸಿಎಂ ಸಹ ಇದನ್ನೇ ಹೇಳಿದ್ದಾರೆ ಎಂದರು.

ಹೊಸ ಸರ್ಕಾರ ಬಂದ ನಂತರ ಗ್ಯಾರಂಟಿ ಮೂಲಕ ಯೋಜನೆ ಜಾರಿಗೊಳಿಸುತ್ತಿದೆ.  ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೊಸ ಸರ್ಕಾರ ಬಂದಾಗ ಆಸೆ ಹಾಗೂ ಕಾರ್ಯಕ್ರಮದ ನಿರೀಕ್ಷೆ ಇರುತ್ತದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಶೀಘ್ರವಾಗಿ ಈಡೇರಿಸುತ್ತಿದ್ದೇವೆ. ಆಗ ಮಾತ್ರ ಜನರು ನಮ್ಮ ಮೇಲಿಟ್ಟಿರುವ ನಂಬಿಕೆಗೆ ಬೆಲೆ ಬರುತ್ತದೆ ಎಂದರು.

ಐದು ಗ್ಯಾರಂಟಿ ಪೈಕಿ ನನಗೆ ಗೃಹ ಜ್ಯೋತಿ ಹಾಗೂ ಗೃಹ ಲಕ್ಷ್ಮಿ ಯೋಜನೆ ಹೆಚ್ಚು ಹತ್ತಿರವಾಗಿದೆ. ಹಾಗೆಯೇ ಶಕ್ತಿ ಮತ್ತು ನಿರುದ್ಯೋಗ ಭತ್ಯೆ ಸಹ ಹೆಚ್ಚು ಅರ್ಥಪೂರ್ಣವಾಗಿದೆ ಎಂದರು.

ಜಿಲ್ಲೆಯ ಶರಾವತಿ ಸಂತ್ರಸ್ತರಿಗೆ ಶೀಘ್ರ ನ್ಯಾಯ ಸಿಗಲಿದೆ. ಕೋರ್ಟ್ ವಿಚಾರ ಬಂದಾಗ ಅಧಿಕಾರಿಗಳು ನಿಭಾಯಿಸುತ್ತಾರೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದ್ದು ಸಭೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

Advertisement

ಮೊಟ್ಟೆ ಕಾರ್ಯಕ್ರಮಕ್ಕೆ ಚಾಲನೆ: ಇದೇ 18 ರಂದು ಮಂಡ್ಯದಲ್ಲಿ ವಾರಕ್ಕೆ ಎರಡು ಸಲ ಮೊಟ್ಟೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಇದರಿಂದ 60 ಲಕ್ಷ ಮಕ್ಕಳಿಗೆ ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದ ಸಚಿವರು, ದೇಶದಲ್ಲಿ ಮೊದಲ ಬಾರಿಗೆ 2 ನೇ ಸಲ ಪೂರಕ ಪರೀಕ್ಷೆ ನಡೆಸಲಾಗುತ್ತದೆ. ಅವರನ್ನು ಫೇಲ್ ಮಾಡಿದರೆ ಒಂದು ವರ್ಷ ಕಾಯಬೇಕು. ಹಾಗಾಗಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ ಎಂದರು.

ಪಠ್ಯ ಪುಸ್ತಕ ಬದಲಾಗಿದೆ. ಎನ್ ಇಪಿ ಬದಲು ಎಸ್ ಇಪಿ ಜಾರಿಗೊಳಿಸಲಾಗುತ್ತದೆ. ಪಠ್ಯ ಪುಸ್ತಕದಲ್ಲೂ ಕೆಲ ಬದಲಾವಣೆ ತರಬೇಕಿದೆ ಎಂದರು.

ಡಿಜಿಟಲ್ ಲೈಬ್ರರಿಯಲ್ಲಿ 40 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಲಭ್ಯವಿದೆ. ಇದನ್ನು ಶಿಕ್ಷಕರ ದಿನಾಚರಣೆ ದಿನ ರಿ ಲಾಂಚ್ ಮಾಡಲಾಗುವುದು. ಈಗಾಗಲೇ 3.40 ಕೋಟಿ ಜನ ಇದಕ್ಕೆ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಲೈಬ್ರರಿಗೆ ಹೆಚ್ಚು ಒತ್ತು ನೀಡಲಾಗುವುದು. ಕರ್ನಾಟಕ ಪಬ್ಲಿಕ್ ಸ್ಕೂಲ್ ಹೆಚ್ಚಿನ ಬೇಡಿಕೆಯಿದ್ದು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿ ಆರಂಭಿಸಲಾಗುವುದು. ಅನುದಾನ ಪಡೆಯದ 1600 ಶಾಲೆಗಳಿವೆ ಕೆಲವೊಂದು ನಿಯಮಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದರು.

ಲೋಡ್ ಶೆಡ್ಡಿಂಗ್ ಬಗ್ಗೆ ಮಾತನಾಡಿದ ಮಧು ಬಂಗಾರಪ್ಪ, ಅಘೋಷಿತ ವಿದ್ಯುತ್ ಕಡಿತದ ಬಗ್ಗೆ ಸಾಕಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಲ ವಿದ್ಯುತ್ ಕೇಂದ್ರಗಳಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಕೆಲವೆಡೆ ವಿದ್ಯುತ್‌ ಕಡಿತವಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next