ಬೀದರ : ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಮಹಿಳೆಯರಲ್ಲಿದ್ದು, ಆಕೆಗೂ ಪುರುಷರಷ್ಟೇ ಸಮಾನ ಅವಕಾಶ ಸಿಗಬೇಕು. ಆಗ ಮಾತ್ರ ಲಿಂಗ ತಾರತಮ್ಯ, ಅಸಮಾನತೆ ದೂರವಾಗಲು ಸಾಧ್ಯ ಎಂದು ಕದಂಬ ಕನ್ನಡ ಸಂಘದ ಗೌರವಾಧ್ಯಕ್ಷ ಪ್ರೊ| ಸಿದ್ರಾಮಪ್ಪ ಮಾಸಿಮಾಡೆ ಹೇಳಿದರು. ನಗರದ ಖಾಸಗಿ ಹೋಟೆಲ್ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಾಟ್ಯಶ್ರೀ ನೃತ್ಯಾಲಯ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಲ್ಲಿ ಸುಮಾರು 65 ಕೋಟಿ ಮಹಿಳೆಯರಿದ್ದು, ಅದರಲ್ಲಿ ಕೇವಲ 15 ಕೋಟಿ ಮಹಿಳೆಯರಿಗೆ ಮಾತ್ರ ಅವಕಾಶ ದೊರೆಯುತ್ತಿವೆ. ಶೇ. 90 ಮಹಿಳೆಯರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಎಲ್ಲ ಸಮುದಾಯಗಳು ಸೂಕ್ತ ಸ್ಥಾನಮಾನ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು. ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ ಮಾತನಾಡಿ, ಇಂದು ಮಹಿಳೆ ಉನ್ನತ ಸ್ಥಾನಕ್ಕೇರಲು ಆಕೆಯ ತಂದೆ ಅಥವಾ ಗಂಡನ ಪ್ರೋತ್ಸಾಹವೇ ಕಾರಣ. ಮಹಿಳೆಯರಿಗೆ ದೊರೆತ ಎಲ್ಲ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ನೂರು ವರ್ಷಗಳ ಹಿಂದೆ ಸರ್ಕಾರಿ ನೌಕರರ ಸಂಘ ಹುಟ್ಟು ಹಾಕಿದವ ಮೇರಾ ದೇವಾಷಿ ಓರ್ವ ಮಹಿಳೆ. ಸ್ತ್ರೀ ಮತ್ತು ಪುರುಷ ಇಬ್ಬರು ಸೇರಿ ಮಾಡುವ ಕಾರ್ಯ ಸಂಪೂರ್ಣ ಯಶಸ್ಸಿಗೆ ಕಾರಣವಾಗಬಲ್ಲದೆಂದು ತಿಳಿಸಿದರು. ಬೀದರಿ ವೇದಿಕೆ ಮುಖ್ಯಸ್ಥೆ ರೇಖಾ ಸೌದಿ ಮಾತನಾಡಿ, ನಾಟ್ಯಶ್ರೀ ನೃತ್ಯಾಲಯವು ಭರತ ನಾಟ್ಯದ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆ ಉತ್ತು ಬಿತ್ತುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ನಾಟ್ಯಶ್ರೀ ನೃತ್ಯಾಲಯ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಸ್ ನಿರ್ವಾಹಕಿ ಅರ್ಚನಾ ಕುಂಬಾರ, ಉದ್ಯಮಿ ಮಹಾದೇವಿ ಪಾಟೀಲ, ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಹಾಗೂ ಸ್ಕೌಟ್ಸ್- ಗೈಡ್ಸ್ ರಾಷ್ಟ್ರೀಯ ಸ್ಪರ್ಧೆಯಲ್ಲಿ ಕರ್ನಾಟಕ ಪ್ರತಿನಿಧಿ ಸಿದ ಪ್ರಾಪ್ತಿ ಅರಳಿ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರಾಧ್ಯಾಪಕ ವೀರಶೆಟ್ಟಿ ಮೈಲೂರಕರ್ ಪ್ರಾಸ್ತಾವಿಕ ಮಾತನಾಡಿದರು. ಕೆ. ಸತ್ಯಮೂರ್ತಿ ಸ್ವಾಗತಿಸಿದರು. ದೇವಿದಾಸ ಜೋಶಿ ಸಾಧಕಿಯರ ಪರಿಚಯ ಮಾಡಿದರು. ರಾಘವೇಂದ್ರ ಅಡಿಗ್ ನಿರೂಪಿಸಿದರು. ಉಮಾಕಾಂತ ಮೀಸೆ ವಂದಿಸಿದರು