ಹಾಸನ: ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ಗಾಂಧೀಜಿ ಅವರ ಸದೃಢ ಭಾರತದ ಕನಸು ಕನಸಾಗಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಿವಣ್ಣ ಹೇಳಿದರು. ನಗರದ ಬಿಇಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ, ಗಾಂಧೀಜಿ ಕುರಿತ ಕಿರುಚಿತ್ರ ಪ್ರದರ್ಶನ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸದೃಢ ದೇಶ ನಿರ್ಮಾಣ ಮಾಡಿ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಕೈಗಾರಿಕೆಗಳ ಅಭಿವೃದ್ಧಿಯಾಗಿ ಉದ್ಯೋಗ ಸೃಷ್ಟಿಯಾಗಬೇಕು. ಗ್ರಾಮಗಳು ಸ್ವಾವಲಂಬಿಗಳಾದರೆ ದೇಶವೂ ಪ್ರಗತಿಯತ್ತ ಸಾಗುತ್ತದೆ. ಭಾರತದ ಜೀವಾಳವಾದ ಹಳ್ಳಿಗಳ ಅಭಿವೃದ್ಧಿಯೇ ಸದೃಢ ದೇಶ ನಿರ್ಮಾಣದ ಗುರಿಯಾಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು ಎಂದರು. ಗಾಂಧೀಜಿಯವರು ಮಹಾತ್ಮ ಎನಿಸಿಕೊಳ್ಳಲು ಕಾರಣವಾದ ಸತ್ಯ, ಅಂಸೆ, ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ಸನ್ನಡತೆ ಇಡೀ ವಿಶ್ವವೇ ಪಾಲಿಸಬೇಕಾದ ತತ್ವಗಳಾಗಿವೆ ಎಂದು ಹೇಳಿದರು.
ಹೆಮ್ಮೆಯ ಸಂಗತಿ: ಮುಖ್ಯ ಅತಿಥಿಯಾಗಿದ್ದ ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್ ಮಾತನಾಡಿ, ಅಹಿಂಸಾ ಮಾರ್ಗದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ಮೂಲಕ ಗಾಂಧೀಜಿ ಜಗತ್ತಿಗೆ ಹೊಸ ಸಂದೇಶ ಸಾರಿದರು. ವಿಶ್ವದ ಸುಮಾರು 50 ದೇಶಗಳಲ್ಲಿ ಗಾಂಧೀಜಿ ಪ್ರತಿಮೆಗಳಿವೆ ಎಂಬುದು ಭಾರತೀಯರಿಗೆ ಹೆಮ್ಮೆಯ ಸಂಗತಿ ಎಂದರು.
ಅಧ್ಯಕ್ಷತೆ ವಸಿದ್ದ ಬಿಈಜಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಬಿ.ಈ.ಜಗದೀಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ದಿಕ್ಕೆಟ್ಟ ಸ್ಥಿತಿಯಲ್ಲಿರುವ ಯುವ ಸಮುದಾಯ ಗಾಂಧೀಜಿ ಅವರ ವಿಚಾರಧಾರೆ ಅರಿತು ಅನುಸರಿಸಬೇಕು. ಇಂದಿನ ಕಾರ್ಯಕ್ರಮದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ನ್ಯಾಯಾಧೀಶರು ಭಾಗವಹಿಸಿರುವುದು ನಮ್ಮ ವಿದ್ಯಾಸಂಸ್ಥೆಯ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರಾದ ಎನ್.ಆರ್.ಚನ್ನಕೇಶವ, ಡಿ.ವೈ.ಬಸಾಪುರ್, ಚಂದ್ರಶೇಖರ್ ಮರಗೂರ್, ವೀರೇಂದ್ರ ಹೆಗಡೆ, ನಾಗವೇಣಿ, ಸಿ.ಕೆ.ಬಸವರಾಜ್, ಎಸ್.ಬಿ.ಕೆಂಬಾ, ಎಂ.ಎಸ್. ಹರಿಣಿ, ಆರತಿ ಬಾಳಪ್ಪ ಕಮಟೆ, ಕೆ.ಆಫ್ತಾಬ್, ಜಿ.ಎಂ.ಲಕ್ಷ್ಮೀ, ಕೆ.ಲತಾ, ಬಿ.ಎಚ್.ಕಾವ್ಯಾ, ಟಿ.ಕೆ.ಪ್ರಿಯಾಂಕ, ನೇಮಚಂದ್ರ ಅತಿಥಿಗಳಾಗಿದ್ದರು. ಹಾಸನ ತಾಲೂಕು ಹೆಡ್ಡನಹಳ್ಳಿ ಗ್ರಾಮದಲ್ಲಿ 2018-19 ನೇ ಸಾಲಿನ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಆಯೋಜಿಸಲು ಸಹಕರಿಸಿದ ಮುಖಂಡರಾದ ಎಚ್.ಕೆ. ಹುಚ್ಚೇಗೌಡ, ಮಹೇಂದ್ರ, ಎಚ್.ಪಿ.ಮಂಜೇಗೌಡ ಅವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ವಕೀಲರ ಸಂಘದ ಕಾರ್ಯದರ್ಶಿ ಕಾರ್ಲೆ ಮೊಗಣ್ಣಗೌಡ, ಬಿಈಜಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾಂಶುಪಾಲೆ ಎಚ್.ಎ.ರೇಖಾ, ಬ್ರಹ್ಮಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಕಾನೂನು ಸಲಹೆಗಾರ ಬಿ.ಈ.ನಟೇಶ್ ಕುಮಾರ್, ಎನ್‌ಎಸ್‌ಎಸ್ ಅಧಿಕಾರಿ ಎಂ.ಎಸ್.ಆನಂದ ಕುಮಾರ್, ಪ್ರಾಧ್ಯಾಪಕರಾದ ಎಚ್.ಬಿ.ಅಜಿತ್ ಪ್ರಸಾದ್, ಎಂ.ಆರ್.ರಾಮಚಂದ್ರ, ಸ್ನಾತಕೋತ್ತರ ಕೇಂದ್ರ ಸಂಯೋಜನಾಧಿಕಾರಿ ಎಚ್.ಆರ್.ಧನಂಜಯ ಮತ್ತಿತರರು ಉಪಸ್ಥಿತರಿದ್ದರು.