ಬೀದರ: ಪಶುವೈದ್ಯರು ತಮ್ಮ ಮೊಬೈಲ್ ಫೋನ್ ಸದಾ ಚಾಲ್ತಿಯಲ್ಲಿಟ್ಟುಕೊಳ್ಳಬೇಕು ಮತ್ತು ಪಶು ವೈದ್ಯಕೀಯ ಸೇವೆಗಳಿಗಾಗಿ ರೈತರಿಂದ ಬರುವ ಪ್ರತಿಯೊಂದು ಕರೆಗಳಿಗೆ ಸ್ಪಂದಿಸಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ ಪಶು ವೈದ್ಯರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಪಶು ಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಪಶು ವೈದ್ಯಕೀಯ ಚಿಕಿತ್ಸೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಸಹಾಯವಾಣಿ ತೆರೆಯಲಾಗಿದೆ. ಇದರ ಲಾಭ ರೈತರಿಗಾಗಬೇಕು. ತುರ್ತು ಕರೆಗಳು ಬಂದ ತಕ್ಷಣ ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಕಳುಹಿಸಿಕೊಡುವ ಮೂಲಕ ವೈದ್ಯಕೀಯ ಸೇವೆ ನೀಡಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಸಿದರು.
ಜಿಲ್ಲೆಯ ಪಶು ವೈದ್ಯಕೀಯ ಸಂಸ್ಥೆಗಳು, ಸಿಬ್ಬಂದಿ, ಆರ್‌ಕೆವಿವೈ ಯೋಜನೆ, ಗೋಶಾಲೆಗಳಿಗೆ ನೆರವು, ಮೇವಿನ ಸ್ಥಿತಿಗತಿ, ಔಷಧಿ ಲಭ್ಯತೆ, ಸಂಚಾರಿ ಪಶುಚಿಕಿತ್ಸಾ ವಾಹನಗಳ ಸೇವೆ, ರಾಷ್ಟ್ರೀಯ ಕೃತಕ ಗರ್ಭಧಾರಣಾ ಯೋಜನೆ, ಗೋಶಾಲೆ ನಿರ್ಮಾಣ, ಲಸಿಕಾ ಕಾರ್ಯಕ್ರಮ, ಔಷಧಿ ಲಭ್ಯತೆ ಸೇರಿದಂತೆ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಲಿ: ಗೋವುಗಳ ಹತ್ಯೆ ಮತ್ತು ಅಕ್ರಮ ಸಾಗಾಟ ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಕಾನೂನು ಬಾಹಿರವಾಗಿ ಜಿಲ್ಲೆಯಿಂದ ಯಾವೊಂದು ಹಸು ಬೇರೆಡೆಗೆ ಸಾಗಾಟವಾಗಬಾರದು. ಗೋವುಗಳ ಹತ್ಯೆ ನಡೆಯಬಾರದು. ಈ ದಿಶೆಯಲ್ಲಿ ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು. ಅಕ್ರಮ ಗೋಹತ್ಯೆ ನಡೆಸುವ ಸ್ಥಳಗಳನ್ನು ಗುರುತಿಸಿ ಪ್ರಕರಣ ದಾಖಲಿಸುವ ಕೆಲಸವಾಗಬೇಕು. ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ನಾನು ಸಚಿವನಾದ ನಂತರ ಇಲಾಖೆಯಲ್ಲಿ ಸಾಕಷ್ಟು ಯೋಜನೆ ಜಾರಿಗೆ ತರಲಾಗಿದೆ. ಎಲ್ಲ ಯೋಜನೆ ಜನತೆ ತಲುಪಿಸಲು ಪ್ರಮಾಣಿಕವಾಗಿ ಕೆಲಸ ಮಾಡಬೇಕು. ಇಲಾಖೆ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರವಾಗಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ರೈತರಿಂದ ಪ್ರತಿದಿನ ಎಷ್ಟು ಕರೆ ಸ್ವೀಕರಿಸಲಾಯಿತು. ಎಷ್ಟು ಕರೆಗಳಿಗೆ ಸ್ಪಂದಿಸಲಾಯಿತು. ಯಾವ ರೀತಿಯ ಚಿಕಿತ್ಸೆ ನೀಡಲಾಯಿತು ಎನ್ನುವ ಬಗ್ಗೆ ತಾಲೂಕುವಾರು ವರದಿ ತಯಾರಿಸಿ ಪ್ರತಿ ತಿಂಗಳು ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಇಲಾಖೆ ಅಧಿಕಾರಿಗಳಾದ ಡಾ| ಗೌತಮ ಅರಳಿ, ರವೀಂದ್ರ ಭೂರೆ ಸೇರಿದಂತೆ ತಾಲೂಕು ಸಹಾಯಕ ನಿರ್ದೇಶಕರು ಮತ್ತು ಪಶು ವೈದ್ಯಾ ಧಿಕಾರಿಗಳು ಇದ್ದರು.
ಗೈರಾದ ಪಶುವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಿ: ಸಭೆಗೆ ಉದ್ದೇಶಪೂರ್ವಕವಾಗಿ ಗೈರು ಹಾಜರಾದ ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸಚಿವ ಪ್ರಭು ಚವ್ಹಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ವೈದ್ಯರು ಕರ್ತವ್ಯದ ಅವಧಿಯಲ್ಲಿ ಕಚೇರಿಯಲ್ಲಿ ಲಭ್ಯವಿದ್ದು, ಆಸ್ಪತ್ರೆಗೆ ತರಲಾಗುವ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು. ವೈದ್ಯರ ಗೈರು ಹಾಜರಿ ಕುರಿತು ದೂರುಗಳು ಬಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.