Advertisement

ವೀರಶೈವರು ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಲಿ

02:18 PM Feb 02, 2020 | Suhan S |

ಕುಷ್ಟಗಿ: ವೀರಶೈವ ಧರ್ಮದಲ್ಲಿನ ಒಳಪಂಗಡಗಳ ಸಂಕುಚಿತ ಭಾವನೆ ತೊರೆದು, ಸಮಗ್ರ ವೀರಶೈವ ಧರ್ಮದ ವಿಶಾಲ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗರು ಡಾ| ಅಭಿನವ ಅನ್ನದಾನ ಮಹಾಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ಬುತ್ತಿ ಬಸವೇಶ್ವರ ಸಭಾಮಂಟಪದಲ್ಲಿ ಶ್ರೀ ಬುತ್ತಿ ಬಸವೇಶ್ವರ ಜಾತ್ರಾ ಮಹೋತ್ಸವ ಪ್ರಯುಕ್ತ ಅಧ್ಯಾತ್ಮ ಪ್ರವಚನದ ಸಾನೀಧ್ಯವಹಿಸಿ ಮಾತನಾಡಿದ ಅವರು, ವೀರಶೈವ ಧರ್ಮಿಯರಲ್ಲಿ ಮುಸ್ಲಿಂ ಸಮಾಜದವರು ಧರ್ಮ ಕಾರ್ಯಗಳಿಗೆ ಸೇರುವ ಹಾಗೆ, ವೀರಶೈವರೆಲ್ಲರೂ ಇಂತಹ ಧರ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಾಮರಸ್ಯ ಮೂಡಿಸಬೇಕು. ವೀರಶೈವರು ಎಲ್ಲಿಯವರೆಗೂ ಕೊರಳಲ್ಲಿ ಲಿಂಗ ಧರಿಸುವುದಿಲ್ಲವೋ ಅಲ್ಲಿಯವರೆಗೂ ವೀರಶೈವ ವಿಶಾಲ ಭಾವನೆ ಬರುವುದಿಲ್ಲ. ಲಿಂಗ ಧರಿಸಿ ಪೂಜಿಸುವುದರಿಂದ ನಮ್ಮ ಮನಸ್ಸು ಪವಿತ್ರವಾಗಲಿದೆ. ದೇವರಲ್ಲಿ ಭಕ್ತಿ, ಸಮಾಜದಲ್ಲಿ ಒಳ್ಳೆಯ ಕಾರ್ಯದ ಮೂಲಕ ಅಧ್ಯಾತ್ಮ ಶಕ್ತಿ ಒಲಿಸಿಕೊಳ್ಳಲು ಸಾಧ್ಯವಿದೆ ಎಂದರು.

ವಿಜ್ಞಾನ ಎಷ್ಟೇ ಮುಂದುವರಿದರು ವಿಜ್ಞಾನ ಹಾಗೂ ಅಧ್ಯಾತ್ಮ ಸಮನ್ವಯವಾದರೆ ಜೀವನಪರಿಪೂರ್ಣವಾಗಲು ಸಾಧ್ಯವಿದ್ದು, ಅಧ್ಯಾತ್ಮ ಶಕ್ತಿ ಒಲಿಸಿಕೊಳ್ಳಲು ಮನಸ್ಸನ್ನು ಪವಿತ್ರವನ್ನಾಗಿಸಬೇಕಿದೆ. ಎಲ್ಲರ ಕಲ್ಯಾಣದಿಂದ ತನ್ನ ಕಲ್ಯಾಣವಾಗುವುದು ಅಧ್ಯಾತ್ಮ ಶಕ್ತಿಯಿಂದ ಮಾತ್ರ ಸಾಧ್ಯವಿದ್ದು, ಎಲ್ಲರಲ್ಲೂ ಉತ್ತಮ ವಿಚಾರಗಳು ವ್ಯಕ್ತಗೊಳ್ಳಲು ಇಂತಹ ಅಧ್ಯಾತ್ಮ ಪ್ರವಚನದಿಂದ ಸಾಧ್ಯ. ಈ ಹಿನ್ನೆಲೆಯಲ್ಲಿ ಹಿರಿಯರು, ಯುವಕರು, ಮಾತೆಯರು ಆಸಕ್ತಿಯಿಂದ ಭಾಗವಹಿಸಬೇಕು. ನಾವು ವೀರಶೈವರು, ನಮ್ಮಲ್ಲಿ ಭಾವೈಕ್ಯತೆ, ಸಾಮರಸ್ಯ ಮೂಡಲು ಶ್ರೀ ಮಠದ ಇಂತಹ ಪ್ರವಚನದಲ್ಲಿ ತಪ್ಪದೇ ಭಾಗವಹಿಸಬೇಕು ಎಂದರು.

ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯ ಮನುಷ್ಯನಾಗಿಸಲು ಅಧ್ಯಾತ್ಮ ಪ್ರವಚನಗಳು ಪೂರಕವಾಗಿವೆ. ಸಮಾಜದಲ್ಲಿ ದುಡ್ಡಿಗಿಂತ ಮಾನಸಿಕ ನೆಮ್ಮದಿ ಮುಖ್ಯವಾಗಿದ್ದು, ಇಂತಹ ಅಧ್ಯಾತ್ಮ ಪ್ರವಚನಗಳ ಮೂಲಕ ಮಾನಸಿಕ, ನೆಮ್ಮದಿ, ಶಾಂತಿ ತಂದುಕೊಳ್ಳಬಹುದಾಗಿದೆ ಎಂದರು.

ಹಾಲಕೆರೆ ಸಂಸ್ಥಾನಮಠದ ಉತ್ತರಾಧಿಕಾರಿ, ಶ್ರೀ ಮುಪ್ಪಿನ ಬಸವಲಿಂಗದೇವರು ಮಾತನಾಡಿ, ಕುಷ್ಟಗಿಯಲ್ಲಿ ಹಾಲಕೆರೆ ಅನ್ನದಾನ ಸಂಸ್ಥಾನಮಠದ ಶಾಖಾ ಮಠದಿಂದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳು ನಿರಂತರವಾಗಿರಲು ಆಶಯ ವ್ಯಕ್ತಪಡಿಸಿದರು.

Advertisement

ಕೊಟ್ಟೂರು ದೇಶಿಕರು, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಸೋಮಶೇಖರ ವೈಜಾಪೂರ, ವಿಜಯಕುಮಾರ ಹಿರೇಮಠ, ವೀರಶೈವ ಲಿಂಗಾಯತ್‌ ಸಂಘಟನಾ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಮಸೂತಿ, ರವಿಕುಮಾರ ಹಿರೇಮಠ, ಬಾಪುಗೌಡ ಪಾಟೀಲ, ಡಾ| ಭೀಮನಗೌಡ್ರು, ದೊಡ್ಡಪ್ಪ ಕಂದಗಲ್‌, ವೀರಣ್ಣ ಬಳಿಗಾರ, ನಾಗಯ್ಯ ಹಿರೇಮಠ ಮತ್ತಿತರರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಶ್ರೀ ಜಗದ್ಗರು ಡಾ| ಅಭಿನವ ಅನ್ನದಾನ ಮಹಾಸ್ವಾಮಿಗಳ ಪುರ ಪ್ರವೇಶದ ಮೆರವಣಿಗೆ ಜರುಗಿತು.

Advertisement

Udayavani is now on Telegram. Click here to join our channel and stay updated with the latest news.

Next