ಪಿರಿಯಾಪಟ್ಟಣ: ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್, ಸುಭಾಷ್ ಚಂದ್ರಬೋಸ್, ಸದಾರ್ ವಲ್ಲಭ ಭಾಯ್ ಪಟೇಲ್ ರಂತಹ ಅಸಂಖ್ಯಾತ ನಾಯಕರ ಹೋರಾಟ, ತ್ಯಾಗ ಬಲಿದಾನದ ಫಲವಾಗಿ ಪಡೆದ ಈ ಸ್ವಾತಂತ್ರವನ್ನು ಎಲ್ಲರೂ ಜವಾಬ್ದಾರಿಯಿಂದ ಕಾಪಾಡಿಕೊಂಡು ಮುನ್ನಡೆಯಬೇಕಿದೆ ಎಂದು ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ತಿಳಿಸಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯ ಜೂನಿಯರ್ ಕಾಲೇಜು ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಭಾನುವಾರ ಏಪರ್‌ಡಿಸಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ದೇಶದ ಪ್ರಜೆಗಳಾದ ನಾವೆಲ್ಲರೂ ಜಾತಿ, ಧರ್ಮ, ಭಾಷೆ, ಪಂಗಡಗಳೆಂಬ ಸಂಕುಚಿತ ಭಾವನೆಯಿಂದ ಹೊರಬಂದು ದೇಶದ ಒಗ್ಗಟ್ಟು ಮತ್ತು ಐಕ್ಯತೆ ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲ ಒಟ್ಟಾಗಿ ಶ್ರಮಿಸಬೇಕಿದೆ.
ದೇಶದ ಗಡಿಯಲ್ಲಿ ನಿಂತು ವರ್ಷದ ಪೂರ್ತಿ ಚಳಿ, ಮಳೆ, ಗಾಳಿ ಲೆಕ್ಕಿಸದೇ ನಮ್ಮನ್ನು ಕಾಯುವ ನಮ್ಮ ಸೈನಿಕರ ತ್ಯಾಗ, ಬಲಿದಾನಕ್ಕೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವೆಲ್ಲ ಅವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು. ಶಾಸಕ ಕೆ.ಮಹದೇವ್ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಬದುಕುತ್ತಿದ್ದಾನೆ ಎಂದರೆ, ಅದಕ್ಕೆ ಕಾರಣ ಸಂವಿಧಾನ.
ಪ್ರತಿಯೊಬ್ಬ ವ್ಯಕ್ತಿಯ ಬೆಳವಣಿಗೆಗೆ ಬೇಕಾದ ಶಿಕ್ಷಣ, ಸಮಾನತೆ, ಸ್ವಾತಂತ್ರ್ಯ, ಧರ್ಮ, ಸಂಸ್ಕೃತಿ, ಹಕ್ಕು ಮತ್ತು ಕರ್ತವ್ಯಗಳು ಹಾಗೂ ಸಮಾನ ಅವಕಾಶ ನೀಡಿರುವುದರ ಫಲವಾಗಿ ನಾವೆಲ್ಲರೂ ನೆಮ್ಮದಿಯಿಂದ ಬಾಳುತ್ತಿದ್ದೇವೆ ಎಂದರು. ವಿವಿಧ ಶಾಲಾ ಕಾಲೇಜಿನ ಮಕ್ಕಳು ಫಥ ಸಂಚಲನದಲ್ಲಿ ಪಾಲ್ಗೊಳ್ಳುವುದರೊಂದಿಗೆ ಸಾಂಸ್ಕೃತಿಕ ಕಾಯರ್‌ಕ್ರಮಗಳನ್ನು ನಡೆಸಿಕೊಟ್ಟರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ತಾಲೂಕಿನ ರಾವಂದೂರಿನ ಕಿರಣ, ಬುಡಕಟ್ಟು ಜನಾಂಗದ ಮಹಿಳೆ ಜಾನಕಮ್ಮ, ಸಿಸ್ಟರ್ ಸೋನೀಯಾ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಚಂದ್ರುಕುಮಾರ್, ತಾಪಂ ಇಒ ಶ್ರುತಿ, ಅಧ್ಯಕ್ಷೆ ಕೆ.ಆರ್.ನಿರೂಪಾ, ಸದಸ್ಯ ಎಸ್.ರಾಮು, ಪುರಸಭೆ ಸದಸ್ಯ ಪಿ.ಸಿ. ಕೃಷ್ಣ, ನಿರಂಜನ್, ನೂರ್‌ಜಾನ್, ಲೋಕೋಪಯೋಗಿ ಎಇಇ ನಾಗರಾಜು, ಬಿಇಒ ಚಿಕ್ಕಸ್ವಾಮಿ ಪಶುಪಾಲನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಂದೇಶ್, ಆರಕ್ಷಕ ಉಪ ನಿರೀಕ್ಷಕ ಜಿ.ಜೆ.ಗಣೇಶ್ ಮಹಿಲಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಸೇರಿ ಮತ್ತಿತರರು ಹಾಜರಿದರು.