Advertisement
ನಮ್ಮ ಹೃದಯದೊಳಗಡೆ ಪ್ರೀತಿಯಿದ್ದರೆ ಎಲ್ಲರಲ್ಲೂ ನಾವು ಪ್ರೀತಿಯನ್ನೇ ಕಾಣುತ್ತೇವೆ. ದ್ವೇಷ, ಅಸೂಯೆಗಳು ಮನುಷ್ಯನಲ್ಲಿರುವ ಅನುಕಂಪ, ಮಾನವೀಯತೆಗಳನ್ನು ಕೊಲ್ಲುತ್ತವೆ. ಆ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಾಣಲು ಸಾಧ್ಯವೇ ಇಲ್ಲ. ದ್ವೇಷದಿಂದ ಏನನ್ನೂ ಸಾಧಿಸಲು ಏನು ಸಾಧ್ಯವಿಲ್ಲ. ಮನೆ ಪಕ್ಕದಲ್ಲಿ ಇದ್ದ ಒಬ್ಬ ವ್ಯಕ್ತಿ ದ್ವೇಷ ದ್ವೇಷ ಎನ್ನುತ್ತಾ ತನ್ನ ಜೀವನವನ್ನೀಡಿ ದ್ವೇಷ ಸಾಧನೆಗೆ ಮೀಸಲಿರಿಸಿದ. ತನ್ನೊಂದಿಗಿದ್ದವರನ್ನೂ ಪ್ರೀತಿಸದೇ, ಅವರೊಂದಿಗೆ ಸಮಯ ಕಳೆಯದೆ ತನ್ನ ಜೀವನದ ಖುಷಿಯನ್ನೂ ಅನುಭವಿಸದೆ ದ್ವೇಷದ ಹಿಂದೆ ಹೊರಟ. ಆದರೆ ದ್ವೇಷ ಸಾಧನೆಯಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಒಂದು ದಿನ ಅಪಘಾತವಾಗಿ ಆಸ್ಪತ್ರೆ ಸೇರಿದ.ಆತನೊಂದಿಗಿದ್ದದ್ದು ಆತನ ದ್ವೇಷವೇ ಹೊರತು ಯಾರೂ ಜತೆಗಿರಲಿಲ್ಲ. ಆತನಿಗೇನೋ ತಾನು ಮತ್ತೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ಕಿತು. ಆದರೆ ಇನ್ನು ಎಷ್ಟೋ ಮಂದಿಗೆ ಆ ಅವಕಾಶವೇ ಸಿಗುವುದಿಲ್ಲ. ತಾನು ಕಳೆದುಕೊಂಡಿರುವುದು ಏನು ಎನ್ನುವುದನ್ನು ತಿಳಿಯುವಾಗಲೇ ಜೀವನದ ಕೊನೆಯ ಹಂತದಲ್ಲಿರುತ್ತಾರೆ.
ಜೀವನದಲ್ಲಿ ಎಷ್ಟೇ ಸಂಪತ್ತು, ಸೌಂದರ್ಯ ಇದ್ದರೂ ಅದಾವುದೂ ಶಾಶ್ವತವಲ್ಲ ಎನ್ನುವುದು ಗೊತ್ತಿದ್ದರೂ ನಾವು ಅವುಗಳ ಬೆನ್ನತ್ತಿ ಸಂಬಂಧಗಳನ್ನು ಕಡೆಗಣಿಸುತ್ತೇವೆ. ಎಷ್ಟೇ ಬಡವನಾದರೂ ಆತ ಜೀವನದಲ್ಲಿ ಖುಷಿಯಲ್ಲಿರುತ್ತಾನೆ. ಯಾಕೆಂದರೆ ಆತನ ಖುಷಿಯ ಮಾಪನ ಹಣ, ಸೌಂದರ್ಯವಲ್ಲ. ಬದಲಾಗಿ ಜೀವನದ ಖುಷಿಯನ್ನು ಆತ ತನ್ನ ಜತೆಗಿದ್ದವರು, ತನ್ನ ಕೆಲಸ, ತನ್ನ ಸ್ವಾಭಿಮಾನದಲ್ಲೇ ಕಂಡಿರುತ್ತಾನೆ.
Related Articles
Advertisement
- ರಂಜಿನಿ ಮಿತ್ತಡ್ಕ