Advertisement

ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಸ್ಮರಿಸೋಣ: ಠವಳೆ

03:57 PM Nov 19, 2021 | Team Udayavani |

ನರಗುಂದ: ಎಲೆಮರೆ ಕಾಯಿಯಂತೆ ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ಪಣಕ್ಕಿಟ್ಟು ಹೋರಾಡಿದ ಅನೇಕ ಹುತಾತ್ಮರ ಹೆಸರನ್ನು ನಾವು ಸ್ಮರಿಸಲೇಬೇಕು. ಸಿಪಾಯಿ ದಂಗೆಗಿಂತಲೂ ಮೊದಲೇ 1824ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಹಚ್ಚಿದ ಕನ್ನಡಿಗರ ಹೆಮ್ಮೆಯ ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದು ಧಾರವಾಡ ಜೆಎಸ್‌ಎಸ್‌ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕ ಶಿವಾನಂದ ಠವಳೆ ಹೇಳಿದರು.

Advertisement

ಗುರುವಾರ ತಾಲೂಕಿನ ಶಿರೋಳದ ಸರ್ವೋದಯ ಶಿಕ್ಷಣ ಸಮಿತಿಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಾವು ಅಭಿಯಾನ, ಉಪನ್ಯಾಸ ಮಾಲೆ-2021ರ ಉಪನ್ಯಾಸ ಮಾಲೆ-1ರ ಕಾರ್ಯಕ್ರಮದಲ್ಲಿ “ಸ್ವಾತಂತ್ರ್ಯಕ್ಕೆ ಸಿಹಿ ನೀರೆರೆದವರು’ ಎಂಬ ವಿಷಯವಾಗಿ ಅವರು ಮಾತನಾಡಿದರು.

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲು ಹುತಾತ್ಮರಾದವರು ಕಿತ್ತೂರು ಸಂಸ್ಥಾನದ ಪ್ರಧಾನ ಮಂತ್ರಿ ಸರ್ದಾರ ಗುರುಸಿದ್ದಪ್ಪನವರು. ಅವರು ಸ್ವಾತಂತ್ರ್ಯಕ್ಕಾಗಿ ಹೆಜ್ಜೆಯನ್ನಿಟ್ಟ ಮೊದಲ ಹೋರಾಟಗಾರ. ಅವರನ್ನು ಪ್ರತಿಯೊಬ್ಬ ಕನ್ನಡಿಗರೂ ನೆನೆಯಲೇಬೇಕು. ಇಡೀ ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸ್ವಾತಂತ್ರ್ಯ ಹಳ್ಳಿ ಎಂದು ಘೋಷಣೆ ಮಾಡುವುದರ ಜೊತೆಗೆ ನಾಮಫಲಕ ಹಾಕಿದ ಕರ್ನಾಟಕದ ಪುಟ್ಟ ಹಳ್ಳಿ ಸ್ವಾತಂತ್ರ್ಯ ಅಭಿಮಾನದ ಈಸೂರು.
ಅದು ದೇಶದ ಇತಿಹಾಸದಲ್ಲಿ ಅಜರಾಮರ.

ಅಂತಹ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳಿಂದ ದೊರೆತ ಸ್ವಾತಂತ್ರ್ಯ ನಮಗೆ ಬಂದಿದೆಯಾ?, ಬಸವಣ್ಣನ ಸಮಾನತೆ ನಾವು ಅಳವಡಿಸಿಕೊಂಡಿದ್ದೇವಾ? ಎಂದು ಭಾರತೀಯರಾದ ನಾವೆಲ್ಲಾ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದರು. ಹರಪ್ಪ ಅನ್ನುವಂತಹ ಕನ್ನಡ ಶಬ್ಧವನ್ನು ಗಮನಿಸಿದಾಗ ಕನ್ನಡ ಪ್ರಾಚೀನತೆ ಬಗ್ಗೆ ನಮಗೆ ತಿಳಿಯುತ್ತದೆ. ಕರುನಾಡಿನಲ್ಲಿ ಅನೇಕ ನಾಯಕರು ಸ್ವಾತಂತ್ರ್ಯ ಚಳವಳಿಯಲ್ಲಿ ದುಮುಖೀ ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸಿದ್ದಾರೆ. ಅವರನ್ನು ಗುರುತಿಸಿ ಇಂದಿನ ಯುವ ಸಮುದಾಯಕ್ಕೆ ಮುಟ್ಟಿಸುವಂತ ಕಾರ್ಯವಾಗಬೇಕಿದೆ ಎಂದು ಶಿವಾನಂದ ಠವಳೆ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾತಂತ್ರ್ಯ ದೊರೆತು 74 ವರ್ಷ ಗತಿಸಿತು. ಏಕೀಕರಣವಾಗಿ 64 ವರ್ಷಗಳು ಕಳೆದವು. ಆದರೂ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಸರಕಾರ ಪಣ ತೊಡಬೇಕಿದೆ. 1824ರಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮೊದಲು ನಾಂದಿ ಹಾಡಿದ್ದು ಕಿತ್ತೂರು ಸಂಸ್ಥಾನ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಮಹಿಳೆಯರು ಚಪಾತಿ ಚಳವಳಿ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮದೇ ಕೊಡುಗೆ ನೀಡಿ ಪುಷ್ಠಿ ತುಂಬಿದ್ದರೆಂದು ಹೇಳಿದರು.

Advertisement

ಪ್ರಾಚಾರ್ಯ ಎಸ್‌.ಎಫ್‌.ನದಾಫ, ಮೋಹನ ಪಾಗಿ ಮಾತನಾಡಿದರು. ವೇದಿಕೆ ಮೇಲೆ ಪ್ರೊ|ಆರ್‌. ಕೆ.ಐನಾಪೂರ, ಪ್ರೊ|ಬನಪ್ಪಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ಪ್ರೊ|ಆರ್‌.ಬಿ.ಚಿನಿವಾಲರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next