ಇಂದಿನ ಆಧುನಿಕ ಯುಗದಲ್ಲಿ ಮೋಸ ಹೋಗುವ ಸಂಭವವೇ ಹೆಚ್ಚು. ಯಾವತ್ತೂ ಯೋಚಿಸಿ ಮಾತನಾಡುವುದನ್ನು ನಾವು ಕಲಿಯಬೇಕು. ವದಂತಿಗಳು, ಆರೋಪಗಳಿಗೆ ಕಿವಿಗೊಟ್ಟು ನಾವು ಹಾಗೆಯೇ ಮಾತನಾಡಲು ಆರಂಭಿಸಿಬಿಡುತ್ತೇವೆ. ಸರಿ ಯಾವುದು?, ತಪ್ಪು ಯಾವುದು? ಎಂದು ತೀರ್ಮಾನಿಸುವ, ವಿವೇಚಿಸುವ ಗೋಜಿಗೆ ಹೋಗುವುದಿಲ್ಲ. ಕ್ಷಣ ಮಾತ್ರದ ತೀರ್ಮಾನ ನಮ್ಮ ವಿವೇಚನೆಯನ್ನೇ ಸುಟ್ಟು ಹಾಕಿಬಿಡುತ್ತದೆ. ಆಮೇಲೆ ಪಶ್ಚಾತ್ತಾಪ ಪಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಪಶ್ಚಾತ್ತಾಪ ಪಟ್ಟರೂ ಕಳೆದು ಹೋದ ವಸ್ತುಗಳು, ವ್ಯಕ್ತಿಗಳು ಸಿಗಲಾರರು. “ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು’ ಅನ್ನುವ ಗಾದೆ ಮಾತೇ ಇದೆಯಲ್ಲ. ನಮ್ಮ ನಡವಳಿಕೆಯಲ್ಲಿ ಸಾಧ್ಯವಾದಷ್ಟು ತಪ್ಪುಗಳು ಸಂಭವಿಸದಂತೆ ಎಚ್ಚರ ವಹಿಸೋಣ.
ನಾವು ಕೇವಲ ಮಾತಿನ ಮೇಲೆ ಹಿಡಿತ ಅಥವಾ ನಿಯಂತ್ರಣ ಸಾಧಿಸಿದರೆ ಸಾಲದು. ನಮ್ಮ ಪ್ರತಿಯೊಂದೂ ನಡ ವಳಿಕೆ, ವರ್ತನೆಯ ಮೇಲೂ ನಿಗಾ ಇಡಲೇಬೇಕು. ಇವೆಲ್ಲವೂ ನಮ್ಮ ವ್ಯಕ್ತಿತ್ವ ವನ್ನು ಅಳೆಯುವ ಸಾಧನಗಳಾಗಿವೆ. ಆದರೆ ಇವೆಲ್ಲವುಗಳೂ ಸಂತುಲಿತವಾಗಿದ್ದಾಗ ನಾವು ಪಶ್ವಾತ್ತಾಪ ಪಡುವ ಪರಿಸ್ಥಿತಿಯಾಗಲಿ, ಇನ್ನೊಬ್ಬರ ದ್ವೇಷಕ್ಕೆ ಗುರಿ
ಯಾಗುವುದು ತಪ್ಪುತ್ತದೆ.
ನಮ್ಮ ಕನ್ನಡ ಅಧ್ಯಾಪಕರು ಒಂದು ಮಾತನ್ನು ಪ್ರತಿದಿನ ತರಗತಿಯಲ್ಲಿ ವಿದ್ಯಾ ರ್ಥಿಗಳಿಗೆ ಹೇಳುತ್ತಿದ್ದರು. ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದೇಳಬೇಕು. ಹಾಸಿಗೆಯಿಂದ ಏಳುವ ಮುಂಚೆಯೇ ನಮ್ಮ ಮನಸ್ಸಿನಲ್ಲಿ ದೃಢಸಂಕಲ್ಪ ಮಾಡಿ ಕೊಳ್ಳಬೇಕು. ಇಂದಿನ ದಿನ ನನ್ನಿಂದ ಯಾವುದೇ ತಪ್ಪುಗಳು ಸಂಭವಿಸದಿರಲಿ ಎಂದು! ಇಡೀ ದಿನ ಈ ದೃಢಸಂಕಲ್ಪಕ್ಕೆ ಬದ್ಧರಾಗಿ ಇರಬೇಕು. ರಾತ್ರಿ ಮಲಗುವ ವೇಳೆ ಇಡೀ ದಿನದ ನಮ್ಮ ದಿನಚರಿಯನ್ನು ನೆನಪು ಮಾಡಿಕೊಂಡು ಒಂದು ಹಾಳೆಯಲ್ಲಿ “ಈ ದಿನ ನನ್ನಿಂದ ನಡೆದ ತಪ್ಪುಗಳನ್ನು ಬರೆಯಬೇಕು’…. ಹೀಗೆ ಪ್ರತಿನಿತ್ಯ ಮಾಡುವುದರಿಂದ ನಮ್ಮ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.
ಅಂತ ಹೇಳುತ್ತಿದ್ದರು. ಹಾಗೆಯೇ ನಾವು ಬರೆದ ತಪ್ಪುಗಳ ಹಾಳೆಯನ್ನು ಪ್ರತಿನಿತ್ಯ ನೋಡುತ್ತಿದ್ದರು. ಆ ಮೂಲಕ ನಮ್ಮನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದರು.
ಗೊತ್ತಿದ್ದು ಮಾಡುವ ತಪ್ಪಿಗೂ, ಗೊತ್ತಿಲ್ಲದೆ ಮಾಡುವ ತಪ್ಪಿಗೂ ತುಂಬಾ ವ್ಯತ್ಯಾಸವಿರುತ್ತದೆ. ಗೊತ್ತಿದ್ದು ಮಾಡುವ ತಪ್ಪುಗಳು ಜೀವನ ಪರ್ಯಂತ ನಮ್ಮನ್ನು ಕಾಡುತ್ತಿರುತ್ತದೆ. ಇನ್ನೊಂದು ಮಾತು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಣ. “ಕೋಪದಲ್ಲಿ ಕೊಯ್ದ ಮೂಗು ಪುನಃ ಬರಲಾರದು’ ಎಂಬ ಗಾದೆ ಮಾತೇ ಇದೆ.
ನಮ್ಮಲ್ಲಿರುವ ಅರಿಷಡ್ ವೈರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೋಣ. ಪ್ರತಿಯೊಂದೂ ಹಿತಮಿತವಾಗಿದ್ದರೆ ಅಂದ. ಯಾವ ಗುಣ ಮಿತಿಮೀರುತ್ತದೆ ಎಂದು ನಮಗನಿಸಲಾರಂಭಿಸಿದಾಗ ಅದಕ್ಕೆ ಕಡಿವಾಣ ಹಾಕುವ ಪ್ರಯತ್ನವನ್ನು ಮಾಡೋಣ. “ಬದಲಾಗುತ್ತಿರುವ ಪ್ರಪಂಚದಲ್ಲಿ ನಾವು ಬದಲಾಗೋಣ’… ಆದರೆ ನಮ್ಮತನ ಕಳೆದುಕೊಳ್ಳುವಷ್ಟು ಬದಲಾಗಬಾರದು. ನಮ್ಮತನ, ನಮ್ಮದೇ ಆದ ವ್ಯಕ್ತಿತ್ವ, ನಮ್ಮೊಳಗಿನ ಆತ್ಮವಿಶ್ವಾಸ, ನಮ್ಮದೇ ಆದ ಶ್ರೇಷ್ಠತೆ ಇವೆಲ್ಲವೂ ನಮ್ಮದೇ ಆಗಿರಬೇಕು. ಯಾರೊಂದಿಗೂ ನಮ್ಮನ್ನು ಹೋಲಿಸಿಕೊಳ್ಳುವುದಾಗಲೀ ಯಾರನ್ನೋ ಅನುಸರಿಸುವುದಾಗಲಿ ಸಲ್ಲದು. ಇರುವುದೊಂದೇ ಜೀವನ. ಈ ಜೀವನದಲ್ಲಿ ಸುಳ್ಳು, ಮೋಸ, ವಂಚನೆಗಳಿಗೆ ಅವಕಾಶ ಕೊಡದೆ ನಾವು ನಾವಾಗಿಯೇ ಇರೋಣ. ಆದಷ್ಟು ನಮ್ಮದೇ ಆದ ವ್ಯಕ್ತಿತ್ವ ರೂಪಿಸಿಕೊಳ್ಳೋಣ. ಹೊಸ ಹೊಸ ಚಿಂತನೆಗಳನ್ನು ಅಳವಡಿಸಿಕೊಳ್ಳುತ್ತಾ ಕ್ರಿಯಾಶೀಲರಾಗಿರೋಣ, ಆಶಾವಾದಿ ಗಳಾಗಿರೋಣ.