Advertisement
ಕೋವಿಡ್ ಹಾವಳಿ ಆರಂಭವಾಗಿ ಲಾಕ್‌ಡೌನ್ ಘೋಷಣೆಯಾದಾಗ ನನ್ನ ಸಹಜ ದೈನಿಕ ಚಟುವಟಿಕೆಗಳಲ್ಲಿಯೂ ಏರುಪೇರು ಉಂಟಾಯಿತು. ವೈರಾಣುವಿನ ಪ್ರಸರಣ, ನನ್ನ ಉದ್ಯೋಗ ಭದ್ರತೆ, ಸಂಬಳ ಇತ್ಯಾದಿಯಾಗಿ ಕೆಲವು ಸಂಗತಿಗಳು ನನ್ನನ್ನು ಕಳವಳಕ್ಕೀಡು ಮಾಡಿದವು. ಮನೆಯಲ್ಲಿ ಕಳೆಯುವುದಕ್ಕೆ ಬೇಕಾದಷ್ಟು ಸಮಯ ಸಿಕ್ಕಿದ ಕಾರಣ ನಾನು ನನ್ನ ದೈನಿಕ ಚಟುವಟಿಕೆಗಳನ್ನು ಬೇರೆಯದೇ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಯಿತು. ವ್ಯಾಮಾಮ ಮಾಡುವುದು, ಹೊಸ ಭಾಷೆಯ ಕಲಿಕೆ, ಅಡುಗೆಯಲ್ಲಿ, ಮನೆಯನ್ನು ಶುಚಿಗೊಳಿಸುವುದರಲ್ಲಿ ಹೆಂಡತಿಗೆ ಸಹಕರಿಸುವುದು, ಮಕ್ಕಳಿಗೆ ಅಭ್ಯಾಸದಲ್ಲಿ ನೆರವಾಗುವುದರ ಮೂಲಕ ನನ್ನ ಸಮಯವನ್ನು ಮರು ಹೊಂದಿಸಿಕೊಂಡೆ. ಲಾಕ್‌ಡೌನ್‌ನ ಒಂದು ಪ್ರಯೋಜನ ಎಂದರೆ, ಅನಗತ್ಯವಾಗಿ ತಿರುಗಾಡುವುದನ್ನು ಅದು ತಪ್ಪಿಸಿತು. ಆದರೆ ಸಮಾಜದಿಂದ ದೂರವಾಗಿ ಪ್ರತ್ಯೇಕವಾಗಿರುವುದು ಬೇಸರ ಹುಟ್ಟಿಸಿತ್ತು.’
Related Articles
Advertisement
ಇವೆಲ್ಲವುಗಳಿಂದಾಗಿ ಜನರು ಗೃಹಬಂಧನಕ್ಕೆ ಒಳಗಾದ ಅನುಭವಕ್ಕೆ ಈಡಾಗಿದ್ದಾರೆ. ಮುಂಜಾಗ್ರತೆಯ ಕ್ರಮಗಳಾಗಿ ಸಾಮಾನ್ಯ ಜನತೆಯ ಮೇಲೆ ವಿಧಿಸಲ್ಪಟ್ಟ ಈ ಕ್ರಮಗಳಿಂದಾಗಿ ಎಲ್ಲ ವಯೋಮಾನದ ಜನರಲ್ಲಿ ಮಾನಸಿಕ ಮತ್ತು ಮನೋವೈಜ್ಞಾನಿಕ ಸವಾಲುಗಳು ಉಂಟಾಗುವ ಸಾಧ್ಯತೆ ಎದುರಾಗಿದೆ. ಕೆಲವು ಮಂದಿಗೆ ಇದರಿಂದಾಗಿ ಹತಾಶೆ ಮತ್ತು ಬೇಸರ ಕೂಡ ಉಂಟಾಗಿದೆ. ಉದ್ದೇಶಿತ ಮತ್ತು ಅರ್ಥವಂತಿಕೆಯ ಸಾಮಾಜಿಕ, ಸಾಮುದಾಯಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಕ್ಕೆ ಇರುವ ದೀರ್ಘಕಾಲಿಕ ನಿರ್ಬಂಧವು ಜನರಲ್ಲಿ ಹತಾಶೆ ಮತ್ತು ಬೇಗುದಿಯನ್ನು ಉಂಟುಮಾಡಿದೆ. ಇವೆಲ್ಲವೂ ಜತೆಯಾಗಿ ಜನರಲ್ಲಿ ತಾತ್ಕಾಲಿಕವಾಗಿಯಾದರೂ ಸಾಂದರ್ಭಿಕ ಏಕಾಂಗಿತನ, ಖನ್ನತೆ, ಒತ್ತಡ, ಆತಂಕ ಮತ್ತಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ. ಇಂತಹ ಸನ್ನಿವೇಶವು ಅತಿಯಾದ ಧೂಮಪಾನ, ಮದ್ಯ ಅವಲಂಬನೆಯಂತಹ ವರ್ತನಾತ್ಮಕ ಬದಲಾವಣೆಗಳಿಗೂ ಕಾರಣವಾಗಬಹುದಾಗಿದೆ. “ಭಾರತದ ಎಲ್ಲ ರಾಜ್ಯಗಳಲ್ಲಿ ಮಾನಸಿಕ ಅನಾರೋಗ್ಯಗಳ ಹೊರೆ: ಕಾಯಿಲೆಗಳ ಜಾಗತಿಕ ಹೊರೆಯ ಅಧ್ಯಯನ 1990-2017′ ಎಂಬ ಶೀರ್ಷಿಕೆಯಲ್ಲಿ 2020ರಲ್ಲಿ ಲ್ಯಾನ್ಸೆಟ್ ಸೈಟಿಯಾಟ್ರಿ ನಿಯತಕಾಲಿಕದಲ್ಲಿ ಐಸಿಎಂಆರ್ ಪ್ರಕಾಶಿತ ಅಧ್ಯಯನ ವರದಿಯ ಪ್ರಕಾರ, ಪ್ರತೀ ಏಳು ಮಂದಿ ಭಾರತೀಯರಲ್ಲಿ ಒಬ್ಬರು ಮಾನಸಿಕ ಅನಾರೋಗ್ಯಗಳನ್ನು ಹೊಂದಿರುತ್ತಾರೆ. ಕೊರೊನೋತ್ತರ ಸನ್ನಿವೇಶಗಳಲ್ಲಿ ಇದು ಅನಿವಾರ್ಯವಾಗಿ ಮುಂದುವರಿಯಲಿದೆ ಮತ್ತು ಹೆಚ್ಚಲಿದೆ.
ಗರಿಷ್ಠ ಫಲಿತಾಂಶವನ್ನು ಪಡೆಯಲು ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯವು ಹದಗೆಡುವುದನ್ನು ತಡೆಯಲು ಚಟುವಟಿಕೆಗಳ ಆಯ್ಕೆ ಬಹಳ ನಿರ್ಣಾಯಕವಾಗಿದೆ. ದೈನಿಕ ರೂಢಿಗತ ಚಟುವಟಿಕೆಗಳಾದ ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆ ಶುಚಿಗೊಳಿಸುವುದು, ಸ್ನಾನ ಮಾಡುವುದು ಇತ್ಯಾದಿಗಳು ಕಡ್ಡಾಯ ಎಂಬಂಥವಾಗಿವೆ. ಅಡುಗೆ ಮಾಡುವುದು ಒಂದು ಸಕ್ರಿಯವಾಗಬಲ್ಲ ಚಟುವಟಿಕೆಯಾಗಿದ್ದು, ಹೆಚ್ಚು ಮನೆಮಂದಿಯನ್ನು ಒಳಗೊಳ್ಳುವುದಕ್ಕೆ ಸಾಧ್ಯವಿದೆ. ತರಕಾರಿ ಹೆಚ್ಚುವುದು, ತೊಳೆದು ಶುಚಿಗೊಳಿಸುವುದು, ಮಸಾಲೆ ಸಿದ್ಧಪಡಿಸುವುದು, ನಿರ್ದಿಷ್ಟ ಖಾದ್ಯಗಳನ್ನು ತಯಾರಿಸುವುದು ಮತ್ತು ಎಲ್ಲರೂ ಜತೆಗೂಡಿ ಆಹಾರ ಸೇವಿಸುವಂತಹ ವಿವಿಧ ಚಟುವಟಿಕೆಗಳಲ್ಲಿ ಎಲ್ಲರೂ ಭಾಗಿಯಾಗಲು ಸಾಧ್ಯವಿದೆ.
ಇದೇರೀತಿಯಾಗಿ ಬಟ್ಟೆ ತೊಳೆಯುವುದು, ಮನೆ ಶುಚಿಗೊಳಿಸುವಂತಹ ಕೆಲಸಗಳನ್ನು ಸರಿಯಾಗಿ ಯೋಜಿಸಿ, ಜವಾಬ್ದಾರಿಗಳನ್ನು ಹಂಚಿಕೊಂಡಲ್ಲಿ ಎಲ್ಲರೂ ಜತೆ ಸೇರಿ ಸಕ್ರಿಯವಾಗಿ ನಡೆಸಲು ಸಾಧ್ಯವಿದೆ. ಇದೇರೀತಿಯಾಗಿ ಈಜುಕೊಳ ಅಥವಾ ಕೆರೆಯಂತಹ ಸೌಲಭ್ಯ ಇದ್ದಲ್ಲಿ ಸ್ನಾನ ಮಾಡುವುದನ್ನೂ ಮಕ್ಕಳನ್ನು ಜತೆ ಸೇರಿಸಿಕೊಂಡು ಮನೋರಂಜನೆಯಂತೆ ಮಾಡುವುದು ಸಾಧ್ಯ.
ಸೂಕ್ತವಾದ ಐಚ್ಛಿ ಚಟುವಟಿಕೆಗಳಲ್ಲಿ ಹವ್ಯಾಸಗಳು ಮತ್ತು ವಿರಾಮ ಚಟುವಟಿಕೆಗಳು ಉತ್ತಮ ಉದಾಹರಣೆಗಳಾಗಿವೆ. ಈ ಹಿಂದೆ ಸಮಯದ ಕೊರತೆಯಿಂದ ಮರೆಯಾದ ಅಥವಾ ಮರೆತುಹೋದ ಹವ್ಯಾಸಗಳನ್ನು ಮತ್ತೆ ಪುನಶ್ಚೇತನಗೊಳಿಸಬಹುದಾಗಿದೆ. ಚಿತ್ರ ಬಿಡಿಸುವುದು, ಹಾಡುವುದು, ಕರಕುಶಲ ವಸ್ತುಗಳನ್ನು ತಯಾರಿಸುವುದು ಮತ್ತಿತರ ಅನೇಕ ಹವ್ಯಾಸಗಳು ಈ ನಿಟ್ಟಿನಲ್ಲಿ ಚೇತೋಹಾರಿಯಾಗಬಲ್ಲವು. ಕೆಲವರು ಸಂಗೀತ ಕೇಳುವುದು ಅಥವಾ ಪುಸ್ತಕಗಳನ್ನು ಓದುವುದನ್ನು ಆನಂದಿಸಬಹುದು. ಇಂತಹ ಹಲವು ಚಟುವಟಿಕೆಗಳನ್ನು ಒಬ್ಬಂಟಿಯಾಗಿ ಅಥವಾ ಕೆಲವೇ ಜನರನ್ನು ಜತೆ ಸೇರಿಸಿಕೊಂಡು ನಡೆಸಬಹುದಾಗಿದೆ. ಇದು ನಮ್ಮನ್ನು ವ್ಯಸ್ತರಾಗಿ ಇರಿಸುವುದು ಮಾತ್ರವಲ್ಲದೆ ಜೀವನದ ಏಕತಾನತೆಯಿಂದ ಪಾರುಮಾಡುತ್ತವೆ.
ಯಾರು ಸಹಾಯ ಮಾಡಬಲ್ಲರು? :
ಸರಿಯಾದ ಚಟುವಟಿಕೆಗಳ ಆಯ್ಕೆಯು ವ್ಯಕ್ತಿಗತ ಸಾಮರ್ಥ್ಯಗಳ ಸರಿಯಾದ ವಿಶ್ಲೇಷಣೆ ಮತ್ತು ಮಿತಿಗಳನ್ನು ಆಧರಿಸಿ ನಡೆಯಬೇಕಾಗುತ್ತದೆ. ಕೆಲವು ಬಾರಿ ಸಂದರ್ಭ ಮತ್ತು ವ್ಯಕ್ತಿಯ ಅಗತ್ಯಗಳನ್ನು ಆಧರಿಸಿ ಚಟುವಟಿಕೆಗಳಲ್ಲಿ ಮಾರ್ಪಾಟು ಮಾಡಿಕೊಳ್ಳಬೇಕಾಗುತ್ತದೆ. ಚಟುವಟಿಕೆಗಳ ಆಯ್ಕೆ ಮತ್ತು ಸಮಾಲೋಚನೆಯಂತಹ ವಿಚಾರದಲ್ಲಿ ಆಕ್ಯುಪೇಶನಲ್ ಥೆರಪಿಸ್ಟ್‌ಗಳು ವಿಶೇಷ ಪರಿಣತಿಯನ್ನು ಹೊಂದಿರುತ್ತಾರೆ. ಅರ್ಥವತ್ತಾದ ಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಜನರಿಗೆ ಮಾರ್ಗದರ್ಶನ ಬೇಕಾಗುತ್ತದೆ. ಸರಿಯಾದ ಚಟುವಟಿಕೆಗಳ ಆಯ್ಕೆಯಿಂದ ಸಾಮಾಜಿಕ ಅಂತರವನ್ನೂ ಪುನರ್‌ವ್ಯಾಖ್ಯಾನಿಸುವುದು ಸಾಧ್ಯ. ಜನರು ಆಕ್ಯುಪೇಶನಲ್ ಥೆರಪಿಸ್ಟ್ ಗಳಿಂದ ಚಟುವಟಿಕೆಗಳ ಆಯ್ಕೆಯ ಬಗ್ಗೆ ಮಾರ್ಗದರ್ಶನ ಪಡೆಯಬಹುದಾಗಿದೆ.
– ದೀಪಾ
ಬಿಒಟಿ, ದ್ವಿತೀಯ ವರ್ಷ
ಕೌಶಿಕ್ ಸಾವು
ಅಸಿಸ್ಟೆಂಟ್ ಪ್ರೊಫೆಸರ್, ಹಿರಿಯ ಶ್ರೇಣಿ
ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ