Advertisement
ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿವಾಸಕ್ಕೆ ಆಗಮಿಸಿ ಮಾತನಾಡಿದ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕರ ವರ್ತನೆ ಬಗ್ಗೆಯೇ ತೀವ್ರ ಅಸಮಾಧಾನ ಹೊರಹಾಕಿದ ದೇವೇಗೌಡರು, ಪರಿಸ್ಥಿತಿ ಕೈ ಮೀರುವವರೆಗೂ ಎಲ್ಲರೂ ಮೌನ ವಹಿಸಿದ್ದು ಯಾಕೆ ಎಂದು ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.
Related Articles
Advertisement
ಸಿಎಂ ಬದಲಾವಣೆ ಮಾತು: ಅತೃಪ್ತ ಶಾಸಕರ ಬೇಡಿಕೆ ವಿಚಾರ ಪ್ರಸ್ತಾಪ ಸಂದರ್ಭದಲ್ಲಿ ಕೆಲವು ನಾಯಕತ್ವ ಬದಲಾವಣೆ ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ, ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲಿ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಅದಕ್ಕೆ ದೇವೇಗೌಡರು, ಅದೆಲ್ಲಾ ಮಾತುಗಳು ಈಗ ಅಪ್ರಸ್ತುತ. ಸದ್ಯಕ್ಕೆ ಸರ್ಕಾರ ಉಳಿಯಬೇಕಾ? ಬೇಡವಾ? ಎಂಬುದರ ಬಗ್ಗೆ ಗಮನಹರಿಸಿ. ಹೈಕಮಾಂಡ್ ಜತೆ ಚರ್ಚಿಸಿ, ನಾಯಕತ್ವ ಬದಲಾವಣೆ ವಿಚಾರ ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರ ಒಪ್ಪಂದವಾದ ಸಂದರ್ಭದಲ್ಲಿ ಆಗಲಿಲ್ಲ. ತೀರಾ ಅನಿವಾರ್ಯವಾದರೆ ಆಮೇಲೆ ನೋಡೋಣ ಎಂದು ಹೇಳಿದರು. ನಂತರ ಅಲ್ಲಿಂದಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ದೇವೇಗೌಡರು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದರು ಎಂದು ತಿಳಿದು ಬಂದಿದೆ. ಆದರೆ, ಈ ಕುರಿತು ಮಾಧ್ಯಮದವರಿಗೆ ದೇವೇಗೌಡರು ಪ್ರತಿಕ್ರಿಯಿಸಿ, ಎಲ್ಲಾ ನಿಮ್ಮ ಊಹಾಪೋಹ. ಸಿದ್ದರಾಮಯ್ಯ ಅವರ ಬಗ್ಗೆಯಾಗಲಿ, ಖರ್ಗೆಯವರ ಬಗ್ಗೆಯಾಗಲಿ ನಾವು ಮಾತನಾಡಲೇ ಇಲ್ಲ ಎಂದು ನಿರಾಕರಿಸಿದರು.
ಸಿಎಂ ಬದಲಾವಣೆಗೆ ಜೆಡಿಎಸ್ ವಿರೋಧ
ಪ್ರಸಕ್ತ ರಾಜಕೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರಲು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಿರ್ಣಯ ಕೈಗೊಂಡಿದೆ. ಜತೆಗೆ, ಸಮ್ಮಿಶ್ರ ಸರ್ಕಾರ ಮುಂದುವರಿಯುವುದಾದರೆ ಎಚ್.ಡಿ.ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು. ನಾಯಕತ್ವ ಬದಲಾವಣೆಗೆ ಒಪ್ಪಬಾರದು. ಅನಿವಾರ್ಯವಾದರೆ ಮಧ್ಯಂತರ ಚುನಾವಣೆಗೆ ಹೋಗೋಣ ಎಂದು ಕೆಲವು ಶಾಸಕರು ಸಭೆಯಲ್ಲಿ ಆಗ್ರಹಿಸಿದರು.
ಖರ್ಗೆ ಸಿಎಂ ದಾಳ
ಹದಿಮೂರು ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುವ ಹೊತ್ತಿನಲ್ಲೇ, ದೇವೇಗೌಡರು ಈಗ ಖರ್ಗೆ ಸಿಎಂ ದಾಳ ಉರುಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ರಾಜೀನಾಮೆ ನೀಡಿ ಹೋದವರಲ್ಲಿ ಹೆಚ್ಚಿನವರು ಸಿದ್ದರಾಮಯ್ಯ ಬೆಂಬಲಿಗರೇ ಆಗಿದ್ದು, ಅವರನ್ನು ಸಿಎಂ ಮಾಡುವ ನಿರ್ಧಾರ ತಳೆದರೆ ಅವರು ವಾಪಸ್ ಬರಬಹುದು. ಈ ಹಿನ್ನೆಲೆಯಲ್ಲಿ ದೇವೇಗೌಡರು, ಚಾಣಾಕ್ಷತೆಯಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ತೇಲಿ ಬಿಟ್ಟಿದ್ದಾರೆ ಎನ್ನಲಾಗಿದೆ. ಇದು ಕಾಂಗ್ರೆಸ್‌ನಲ್ಲೇ ಸಿಎಂ ಸ್ಥಾನಕ್ಕೆ ಗೊಂದಲ ಉಂಟಾಗುವಂತೆ ಮಾಡಿದೆ. ಅಷ್ಟೇ ಅಲ್ಲ, ಇದೇ ವಿಷಯಕ್ಕೆ ಕಾಂಗ್ರೆಸ್‌ನಲ್ಲೇ ಎರಡು ಬಣಗಳಾಗಿವೆ ಎನ್ನಲಾಗುತ್ತಿದೆ.