ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಜೋಗೇಶ್ವರಿ ಸ್ಥಳೀಯ ಸಮಿತಿಯ ನೂತನ ಕಚೇರಿಯು ಜೋಗೇಶ್ವರಿ ಪೂರ್ವ ರೈಲ್ವೇ ನಿಲ್ದಾಣ ಸಮೀಪದ ಪ್ರೇಮ್‌ಸನ್ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿ ಖರೀದಿಸಿದ ಸ್ವಂತ ಜಾಗದಲ್ಲಿ ಮಾ. 28ರಂದು ಉದ್ಘಾಟನೆಗೊಂಡಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ. ಅಮೀನ್ ನೂತನ ಕಚೇರಿಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿ, ಸಮಾಜ ಬಾಂಧವರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಲು ಜೋಗೇಶ್ವರಿ ಸ್ಥಳೀಯ ಕಚೇರಿಯ ಸ್ವಂತ ಕಟ್ಟಡದ ಬಹಳ ಅಗತ್ಯವಿತ್ತು. ಈ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಸತತವಾಗಿ ಪ್ರಯತ್ನಿಸಲಾಗುತ್ತಿತ್ತು. ಎಲ್ಲರೂ ಒಟ್ಟಾಗಿ ಶ್ರಮಿಸಿದ ಫಲವಾಗಿ ಇಂದು ಒಳ್ಳೆಯ ಕಟ್ಟಡವನ್ನು ಜೋಗೇಶ್ವರಿ ಸ್ಥಳೀಯ ಕಚೇರಿಯು ಹೊಂದಲು ಸಾಧ್ಯವಾಗಿದೆ. ನಾರಾಯಣಗುರುಗಳ ತತ್ತÌ-ಸಂದೇಶದಂತೆ ಸಮಾಜದ ಜನರ ಆಶೋತ್ತರಗಳಿಗೆ ನಾವು ಸ್ಪಂದಿಸಬೇಕು. ನಿಮ್ಮೊಂದಿಗೆ ಕೇಂದ್ರ ಕಚೇರಿ ಸದಾ ಸಹಕಾರಕ್ಕೆ ನಿಲ್ಲುತ್ತದೆ. ನಾವೆಲ್ಲರೂ ಸಂಘಟಿತರಾಗಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಸಮಾರಂಭವನ್ನು ಉದ್ಘಾಟಿಸಿ, ಬಂಟರ ಸಂಘದ ಸಮನ್ವಯ ಸಮಿತಿಯ ಜವಾಬ್ದಾರಿ ನನ್ನ ಪಾಲಿಗೆ ಬಂದಿದ್ದಾಗ ದಿ| ಜಯ ಸಿ. ಸುವರ್ಣ ಅವರಲ್ಲಿ ಮಾರ್ಗದರ್ಶನ ಪಡೆದಿದ್ದೆ. ಸಮನ್ವಯ ಸಮಿತಿ, ಸ್ಥಳೀಯ ಕಚೇರಿಗಳ ಉದ್ದೇಶ ಹಾಗೂ ಅದರಿಂದ ಸಮಾಜ ಬಾಂಧವರಿಗೆ ಆಗುವ ಪ್ರಯೋಜನದ ಬಗ್ಗೆ ಜಯ ಸಿ. ಸುವರ್ಣ ಅವರು ನನಗೆ ಮನದಟ್ಟು ಮಾಡಿದ್ದರು. ಅವರ ಪ್ರೇರಣೆ, ಮಾರ್ಗದರ್ಶನ ಪಡೆದು ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಶೀಲನಾಗಿದ್ದೆ. ಇಂದು ಬಂಟ ಸಮಾಜದ ಮಹಾನ್ ಸಂಸ್ಥೆಯ ಅಧ್ಯಕ್ಷನಾದ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪ ಪ್ರಜ್ವಲಿಸುವ ಅವಕಾಶ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ. ನಾವೆಲ್ಲರೂ ಒಂದಾಗಿ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯೋಣ. ಆರ್ಥಿಕ ವಾಗಿ ಹಿಂದುಳಿದವರ ಬಗ್ಗೆ ಕಾಳಜಿ ವಹಿಸೋಣ. ಸಮಾಜದ ಏಳ್ಗೆ ನಮ್ಮೆಲ್ಲರ ಮುಖ್ಯ ಧ್ಯೇಯವಾಗಿರಬೇಕು ಎಂದು ತಿಳಿಸಿ ಶುಭ ಹಾರೈಸಿದರು.
ಜೋಗೇಶ್ವರಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ನಾರಾಯಣ ಕೆ. ಪೂಜಾರಿ ಮಾತನಾಡಿ, 2018-2021ರ ನಡುವೆ ಕೇಂದ್ರ ಕಾರ್ಯಕಾರಿ ಸಮಿತಿ ನಮಗೆ ಸ್ವಂತ ಕಚೇರಿ ಮಾಡಲು ಜವಾಬ್ದಾರಿ ನೀಡಿತ್ತು. ದಿ| ಜಯ ಸುವರ್ಣ ಅವರು ಆಗಾಗ ಸ್ವಂತ ಸ್ಥಳೀಯ ಕಚೇರಿ ಬಗ್ಗೆ ವಿಚಾರಿಸುತ್ತಿದ್ದರು. ಇಂದು ಮಾರ್ಗದರ್ಶಕರಾದ ಜಯ ಸುವರ್ಣರು ನಮ್ಮೊಂದಿಗಿಲ್ಲದಿದ್ದರೂ ಅವರಿಗೆ ನೀಡಿದ ಭರವಸೆಯನ್ನು ನಾವು ಈಡೇರಿಸಿದ್ದೇವೆ. ನಮ್ಮ ಸಮಿತಿಯ ಎಲ್ಲರ ಶ್ರಮ, ಸಹಕಾರ ತೃಪ್ತಿ ನೀಡಿದೆ ಎಂದರು.
ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಹಾಗೂ ಸಹಕರಿಸಿದ ದಾನಿಗಳನ್ನು ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜಿ. ಅಮೀನ್ ಹಾಗೂ ಜೋಗೇಶ್ವರಿ ಸ್ಥಳೀಯ ಕಚೇರಿಯ ಪದಾಧಿಕಾರಿಗಳು ಸಮ್ಮಾನಿಸಿದರು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಉಪಾ ಧ್ಯಕ್ಷ ಶಂಕರ ಡಿ. ಪೂಜಾರಿ, ಶ್ರೀನಿವಾಸ ಕರ್ಕೇರ, ಕೇಂದ್ರ ಕಚೇರಿಯ ಪ್ರತಿನಿಧಿ ಹರೀಶ್ ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಕೇಶವ ಕೋಟ್ಯಾನ್, ಅಕ್ಷಯ್ ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ. ಬಂಗೇರ, ಜತೆ ಕೋಶಾಧಿಕಾರಿಗಳಾದ ಶಿವರಾಮ ಪೂಜಾರಿ, ಮೋಹನ್ ಡಿ. ಪೂಜಾರಿ, ಸದಾಶಿವ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಂತಿ ಉಳ್ಳಾಲ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನಾಗೇಶ್ ಎಂ. ಕೋಟ್ಯಾನ್, ಸದಸ್ಯರಾದ ಕೇಶವ ಪೂಜಾರಿ, ನಿಲೇಶ್ ಪೂಜಾರಿ ಪಲಿಮಾರು, ಶಕುಂತಳಾ ಕೋಟ್ಯಾನ್, ಬಬಿತಾ ಕೋಟ್ಯಾನ್, ಜೋಗೇಶ್ವರಿ ಸ್ಥಳೀಯ ಕಚೇರಿಯ ಉಪ ಕಾರ್ಯಾಧ್ಯಕ್ಷೆ ಸುಶೀಲಾ ಪೂಜಾರಿ, ಕೋಶಾಧಿಕಾರಿ ಪ್ರಶಾಂತ್ ಸುವರ್ಣ, ಮಾಜಿ ಕಾರ್ಯಾಧ್ಯಕ್ಷ ಮುದ್ದು ಸಿ. ಸುವರ್ಣ, ಕೇಂದ್ರ ಕಚೇರಿಯ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಅಂಚನ್ ಉಪಸ್ಥಿತರಿದ್ದರು.
ಸಮಾಜ ಸೇವಕರಾದ ಶಂಕರ್ ಸುವರ್ಣ ಖಾರ್, ಗಣೇಶ್ ಪೂಜಾರಿ, ದಾನಿಗಳಾದ ಸಂತೋಷ್, ಗೋಪಾಲ್ ಪೂಜಾರಿ, ಸಿಎ ಗಣೇಶ್ ಪೂಜಾರಿ, ಉದ್ಯಮಿ ಉಮೇಶ್ ಕಾಪು, ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ, ಶ್ರೀ ಶನಿಮಹಾತ್ಮ ಪೂಜಾ ಸಮಿತಿ, ಮೇಘವಾಡಿ ಮಹಾಕಾಳಿ ಮಂದಿರ ಇದರ ಪದಾಧಿಕಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.
ಧಾರ್ಮಿಕ ಕಾರ್ಯಕ್ರಮವಾಗಿ ಉಳ್ಳೂರು ಶೇಖರ್ ಶಾಂತಿ ಅವರ ಪೌರೋಹಿತ್ಯದಲ್ಲಿ ಮಾ. 27ರಂದು ವಾಸ್ತುಪೂಜೆ, ವಾಸ್ತುಹೋಮ ಹಾಗೂ ಮಾ. 28ರಂದು ಮುಂಜಾನೆ 6ರಿಂದ ಗಣಪತಿ ಹೋಮ, ಗುರುಪೂಜೆ ಹಾಗೂ ಶ್ರೀ ಸತ್ಯನಾರಾಯಣ ಪೂಜೆ, ಬೆಳಗ್ಗೆ 9.30ರಿಂದ ಮಂಗಳಾರತಿ ಜರಗಿತು. ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ನಾರಾಯಣ ಕೆ. ಪೂಜಾರಿ ದಂಪತಿ ಪೂಜಾ ವ್ರತದಲ್ಲಿ ಸಹಕರಿಸಿದರು. ಕೇಂದ್ರ ಕಚೇರಿಯ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಶಾಂತಿ ಕಾರ್ಯಕ್ರಮ ನಿರ್ವಹಿಸಿದರು. ಜೋಗೇಶ್ವರಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಚಂದ್ರೇಶ್ ಸುವರ್ಣ ವಂದಿಸಿದರು. ಕೊರೊನಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆಯಿತು.