Advertisement

ಸಮಾಜ ರಾಜಕೀಯ ಕ್ರಾಂತಿಗೆ ಮುಂದಾಗಲಿ

10:43 AM Aug 27, 2019 | Suhan S |

ದಾವಣಗೆರೆ: ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಸೇರಿದಂತೆ ಹಲವಾರು ಬೇಡಿಕೆಗಳ ಧ್ವನಿಯನ್ನು ಸರ್ಕಾರಕ್ಕೆ ಸಮರ್ಥವಾಗಿ ಮುಟ್ಟಿಸುವ ನಿಟ್ಟಿನಲ್ಲಿ ಮಡಿವಾಳ ಸಮಾಜ ರಾಜಕೀಯ ಕ್ರಾಂತಿ ಮಾಡಬೇಕು ಎಂದು ಶ್ರೀಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ತಿಳಿಸಿದ್ದಾರೆ.

Advertisement

ಸೋಮವಾರ ವಿನೋಬ ನಗರದ 1ನೇ ಮುಖ್ಯ ರಸ್ತೆ 17ನೇ ಕ್ರಾಸ್‌ನಲ್ಲಿರುವ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂಬ ಬೇಡಿಕೆ ಈಡೇರಿಲ್ಲ. ರಾಜಕೀಯ ಶಕ್ತಿಯ ಕೊರತೆಯೇ ಹೋರಾಟ ಫಲಪ್ರದವಾಗದೇ ಇರುವ ಕಾರಣ ಎಂದರು.

12ನೇ ಶತಮಾನದಲ್ಲಿ ಬಿಜ್ಜಳನ ಆಡಳಿತದ ವಿರುದ್ಧ ಖಡ್ಗ ಹಿಡಿದು ಹೋರಾಟ ನಡೆಸಿದ ಮಡಿವಾಳ ಮಾಚಿದೇವ ಸಮಾಜ ಬಾಂಧವರು 21 ನೇ ಶತಮಾನದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗೆ, ಸಮಾಜದವರನ್ನು ಶಾಸಕರು, ಸಂಸದರನ್ನಾಗಿ ಮಾಡಲು ರಾಜಕೀಯ ಕ್ರಾಂತಿಗೆ ಮುಂದಾಗಬೇಕು ಎಂದು ಶ್ರೀಗಳು ಸಲಹೆ ನೀಡಿದರು.

ಮಡಿವಾಳ ಸಮಾಜ ಅತೀ ಹಿಂದುಳಿದ, ಶೋಷಿತ ಸಮಾಜ ಎಂಬ ಕೀಳರಿಮೆಯಿಂದ ಹೊರ ಬರಬೇಕು. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು. ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.

ಮಡಿವಾಳ ಮಾಚಿದೇವರು 12ನೇ ಶತಮಾನದ ಕ್ರಾಂತಿ ಪುರುಷರು. ಅರಸರ ವಿರುದ್ಧ ಮಾತನಾಡುವಂತೆಯೇ ಇರಲಿಲ್ಲ. ಮಾತನಾಡಿದರೆ ಶಿರಚ್ಛೇದನ ಮಾಡಲಾಗುತ್ತಿತ್ತು. ಅಂತಹ ಕಾಲದಲ್ಲೂ ಮಡಿವಾಳ ಮಾಚಿದೇವರು ಏಕಾಂಗಿಯಾಗಿಯೇ ಅರಸರ ಆಡಳಿತದ ವಿರುದ್ಧ ಹೋರಾಡಿ ಬಸವಾದಿ ಶರಣರು, ವಚನ ಸಾಹಿತ್ಯ ಸಂರಕ್ಷಣೆ ಮಾಡಿದವರು. ಅಂತಹ ಸಮಾಜದವರು ರಾಜಕೀಯ ಶಕ್ತಿ ಪಡೆಯುವಂತಾಗಬೇಕು ಎಂದು ಆಶಿಸಿದರು.

Advertisement

ಶ್ರೀ ಕೃಷ್ಣ ಹೇಳಿರುವಂತೆ ಕಲಿಯುಗೆ ಸಂಘ ಶಕ್ತಿ… ಎನ್ನುವಂತೆ. ಕಲಿಯುಗದಲ್ಲಿ ಸಂಘಟನೆಯೇ ಶಕ್ತಿ. ಸಂಘಟನೆ ಮೂಲಕ ಒಂದಾಗಿ, ರಾಜಕೀಯ ಕ್ರಾಂತಿ ಮಾಡಬೇಕು. ಎಲ್ಲಾ ಸಮಾಜದವರ ಗೌರವ, ಪ್ರೀತಿಗೆ ಪಾತ್ರವಾದ ಮಡಿವಾಳ ಸಮಾಜ ಬಾಂಧವರು ದ್ವೇಷ, ಅಸೂಯೆ ಬಿಡಬೇಕು. ಬಾಂಧವ್ಯ, ಬಂಧುತ್ವದ ಮೂಲಕ ಮುಂದೆ ಸಾಗಬೇಕು ಎಂದು ತಿಳಿಸಿದರು.

ಮಡಿವಾಳ ಮಾಚಿದೇವರು ಎಂದೆಂದಿಗೂ ಆಡಂಬರ ಮಾಡಿದವರಲ್ಲ, ಕಾಯಕ ಯೋಗಿಗಳು, ಶರಣ ತತ್ವ ಆಚರಣೆ ಮಾಡಿದವರು. ಹಾಗಾಗಿ ಮಡಿವಾಳ ಮಾಚಿದೇವ ಸಮಾಜ ಬಾಂಧವರು ಅವರ ತತ್ವ, ಆದರ್ಶ ಆಚರಿಸಬೇಕು ಎಂದು ಸಲಹೆ ನೀಡಿದರು. ಝಂಜುರವಾಡದ ಶ್ರೀ ಬಸವರಾಜೇಂದ್ರ ಶರಣರು ಮಾತನಾಡಿ, ಮಡಿವಾಳ ಮಾಚಿದೇವರು ಸಮಾಜವನ್ನ ತಂದೆ-ತಾಯಿ-ಬಂಧು ಎಂದೇ ಆರಾಧಿಸುತ್ತಿದ್ದರು. 12ನೇ ಶತಮಾನದ ಶರಣರಲ್ಲಿ ಮಹಾದೇವಿ ಅಕ್ಕ, ಬಸವಣ್ಣ ಭಕ್ತಿ ಭಂಡಾರಿ, ಮಾಚಿದೇವರು ತಂದೆಯಾಗಿದ್ದರು. ಬಸವಣ್ಣನವರೇ ಮಾಚಿದೇವರನ್ನು ತಂದೆ… ಎಂದೇ ಕರೆಯುತ್ತಿದ್ದರು. ಮಹಾನ್‌ ಧೈರ್ಯಶಾಲಿ ಮಾಚಿದೇವರು ಹಿಂಸೆಯನ್ನು ವಿರೋಧಿಸುತ್ತಿದ್ದರು. ಆದರೆ, ಸಂದರ್ಭಕ್ಕೆ ಅನುಗುಣವಾಗಿ ಖಡ್ಗವ ಹಿಡಿದು ಶರಣರು ಮತ್ತು ವಚನ ಸಾಹಿತ್ಯವನ್ನು ಕಾಪಾಡಿದವರು ಎಂದು ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ ಮಾತನಾಡಿ, ಮಡಿವಾಳ ಮಾಚಿದೇವರು ಸಮಾಜ ಬಾಂಧವರು ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ದಾವಣಗೆರೆಯಲ್ಲಿ ನಿರ್ಮಾಣ ಮಾಡುತ್ತಿರುವ ವಿದ್ಯಾರ್ಥಿ ನಿಲಯ ಕಾಮಗಾರಿ ಪೂರ್ಣ ಗೊಳ್ಳಲು ಅಗತ್ಯವಾದ ಅನುದಾನಕ್ಕೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಶ್ರೀ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಎಂ. ನಾಗೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ್‌, ಎಂ. ನಾಗರಾಜ್‌, ಹರಪನಹಳ್ಳಿ ಪುರಸಭೆ ಸದಸ್ಯ ಅಶೋಕ್‌ ಹರಾಳ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next