ಮೈಸೂರು: ಟಿಪ್ಪು ಮುಸಲ್ಮಾನರಿಗೆ ಮಾತ್ರವಲ್ಲ, ಆತ ಸರ್ವಜನಾಂಗದ ಆಸ್ತಿ. ಕೋಮುವಾದಿಗಳು ಎಷ್ಟೇ ಬೊಬ್ಬೆ ಹೊಡೆದರೂ ಟಿಪ್ಪುವನ್ನು ಹಿಮ್ಮೆಟ್ಟಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎ.ಕೆ. ಸುಬ್ಬಯ್ಯ ಹೇಳಿದರು. ಕರ್ನಾಟಕ ಕೋಮುಸೌಹಾರ್ದ ವೇದಿಕೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ನಗರದ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ನೆನಪಿನ ಸಮಾವೇಶದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳು ಟಿಪ್ಪುವನ್ನು ಸಮಾಜ ಒಡೆಯುವ ವಿಚಾರಕ್ಕೆ ಬಳಸಿ ಕೊಳ್ಳುತ್ತಿವೆ. ಟಿಪ್ಪು ಮತ್ತು ಕೊಡವರ ನಡುವೆ ದ್ವೇಷದ ವಿಷಬೀಜ ಬಿತ್ತಲಾಗಿದ್ದು, ಆ ಮೂಲಕ ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಭಾರೀ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
ಆದರೆ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಸಂಶೋಧನೆ ನಡೆಸಿದರೆ ಟಿಪ್ಪು ಹಾಗೂ ಕೊಡವರ ನಡುವೆ ಯಾವುದೇ ದ್ವೇಷವಿರಲಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕೊಡಗಿನಲ್ಲಿ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಟಿಪ್ಪು ಹೆಸರನ್ನು ಇಟ್ಟಿದ್ದಾರೆ. ಹೀಗಿದ್ದರೂ ಕೆಲವು ಕೋಮುವಾದಿಗಳ ಕುತಂತ್ರಕ್ಕೆ ಸಿಲುಕಿದ ಕೊಡವರು ಟಿಪ್ಪು ಜಯಂತಿ ಆಚರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂಬ ಒಂದೇ ಕಾರಣಕ್ಕೆ ಕೋಮುವಾದಿಗಳು ಟಿಪ್ಪು$ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಟಿಪ್ಪು$ ಸುಲ್ತಾನ್ ಕೇವಲ ಮುಸಲ್ಮಾನರ ಆಸ್ತಿಯಲ್ಲ, ಬದಲಿಗೆ ಆತ ಸರ್ವಜನಾಂಗದ ಆಸ್ತಿ. ಟಿಪ್ಪು$ವಿನಂತಹ ವ್ಯಕ್ತಿಯನ್ನು ಇಸ್ಲಾಂ ಧರ್ಮ ನೀಡಿದೆ ಎಂದು ಇಸ್ಲಾಂ ಧರ್ಮೀಯರು ಹೆಮ್ಮೆಪಡಬೇಕಿದೆ ಎಂದರು.
ಬೇಲಿಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಕನ್ನಡಿಗರ ಆತ್ಮಸ್ಥೈರ್ಯ ಮತ್ತು ವಿಶಿಷ್ಟ ಹಿನ್ನೆಲೆ ಜಗತ್ತಿಗೆ ಪರಿಚಯಿಸುವ ಮೂಲಕ ಭಾರತೀಯರ ಆತ್ಮಪ್ರಜ್ಞೆಯನ್ನು ಜಾಗೃತಗೊಳಿಸಿದ ಅಪರೂಪದ ದೊರೆ ಟಿಪ್ಪು. ಸ್ವಾರ್ಥ ಮತ್ತು ವೈಭವದ ಅನುಸಂಧಾನಕ್ಕೆ ಸಿಲುಕದ ಟಿಪ್ಪು$ ಸುಲ್ತಾನ್ ಹಾಗೂ ಹೈದರಾಲಿ ಮೈಸೂರು ಸಂಸ್ಥಾನದ ಉಳಿವಿಗಾಗಿ ಸದಾಕಾಲ ಶ್ರಮಿಸುತ್ತಿದ್ದರು.
ಆದರೆ ರಾಜ್ಯ, ನೆಲ, ಬದುಕನ್ನು ಉಳಿಸಿಕೊಳ್ಳುವ ಸಲುವಾಗಿ ಮಾಡಿದ ಹೋರಾಟಕ್ಕೆ ಧಾರ್ಮಿಕ ಬಣ್ಣ ಹಚ್ಚುವುದು ವಿಕೃತ ಮನಸ್ಸಿನ ಕಲ್ಪನೆಯಾಗಿದೆ. ರಾಷ್ಟ್ರಗಳ ನಡುವಿನ ಹೋರಾಟದಲ್ಲಿ ಧರ್ಮವನ್ನು ತರುವುದು ಇತಿಹಾಸಕ್ಕೆ ಮಾಡಿದ ಅಪಮಾನವಾಗಲಿದೆ ಎಂದು ತಿಳಿಸಿದರು. ಟಿಪ್ಪು ನೆನಪಿನ ಸಮಾವೇಶದ ಅಂಗವಾಗಿ ನಗರದ ಪುರಭವನದಿಂದ ವಸ್ತು ಪ್ರದರ್ಶನ ಆವರಣದವರೆಗೆ ರ್ಯಾಲಿ ನಡೆಸಲಾಯಿತು.
ಟಿಪ್ಪು ಕುರಿತ ಚಿತ್ರ ಪ್ರದರ್ಶನಕ್ಕೆ ಹಿರಿಯ ಸಾಹಿತಿ ದೇವನೂರು ಮಹಾದೇವ ಚಾಲನೆ ನೀಡಿದರು. ಮಾಜಿ ಸಂಸದ ಎಚ್.ವಿಶ್ವನಾಥ್, ಶಾಸಕ ವಾಸು, ರೈತ ಮುಖಂಡರಾದ ಸುನಂದಾ ಜಯರಾಂ, ವೇದಿಕೆ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್, ಡಿ.ಎಂ. ತ್ರಿಮೂರ್ತಿ, ಆಲಗೂಡು ಶಿವಕುಮಾರ್ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.