ಬೀದರ: ಜಿಲ್ಲೆಯಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಎಫ್‌ಎಸ್‌ಎಲ್ ವರದಿ ಸೇರಿದಂತೆ ಇನ್ನಿತರ ಮಾಹಿತಿಯೊಂದಿಗೆ ಬಾಕಿ ಉಳಿದ 6 ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕಲ್ಪಿಸಲು ತೀವ್ರ ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಈವರೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದವರಿಗೆ ಹೆಲ್ತ್ ಕಾರ್ಡ್, ವಿಧವಾ ವೇತನ ಸೇರಿ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮುಂಗಾರಿನಲ್ಲೇ ಹೆಚ್ಚು ಮಳೆ ಬೀಳುತ್ತದೆ. ಈಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ರೈತರು ಬಿತ್ತನೆಗೆ ಭೂಮಿ ತಯಾರಿ ಮಾಡಿಕೊಂಡಿದ್ದು, ಹೆಸರು, ಉದ್ದು ಬಿತ್ತನೆ ನಡೆಯುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು. ಗಡಿ ಗ್ರಾಮಗಳಿಗೆ ಸೌಕರ್ಯ ತಲುಪಲಿ: ಗಡಿ ಜಿಲ್ಲೆ ಬೀದರನಲ್ಲಿ ಚೊಂಡಿಮುಖೇಡ ನಂತಹ ಗಡಿಭಾಗದ ಎಲ್ಲ ಹಳ್ಳಿಗಳಿಗೆ ಸೌಕರ್ಯ ತಲುಪಿಸಬೇಕು. ನಮ್ಮೂರಿಗೆ ಯಾರೂ ಬರುತ್ತಿಲ್ಲ ಎಂಬ ನೋವು ಗ್ರಾಮಸ್ಥರಲ್ಲಿ ಬಾರದ ಹಾಗೆ ಕೆಲಸ ನಿರ್ವಹಿಸಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.
ಪಶುಪಾಲನಾ ಇಲಾಖೆ ಉಪನಿರ್ದೇಶಕಡಾ| ಗೋವಿಂದ ಬಿ.ಎಚ್. ಮಾತನಾಡಿ, ಜಿಲ್ಲೆಯಲ್ಲಿ ಮೇವು ಸಂಗ್ರಹವಿದೆ. ಎಲ್ಲ ತಾಲೂಕುಗಳಲ್ಲಿ ಮೇವು ಮಾರಾಟ ಕೇಂದ್ರ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.ಮಳೆಯಾಗಲಿ, ಆಗದಿರಲಿ ಈ ಕೇಂದ್ರಗಳು ಸರಿಯಾಗಿ ನಿರ್ವಹಣೆಯಾಗಬೇಕು. ಖುದ್ದು ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಕುಡಿವ ನೀರಿನ ತೊಂದರೆಯಿದೆ ಎಂದು ಹಳ್ಳಿಗಳಿಗೆ ಬರೀ ಟ್ಯಾಂಕರ್ ಮೂಲಕ ನೀರು ಪೂರೈಸಿದರೆ ಸರ್ಕಾರದ ಹಣ ಅನವಶ್ಯಕ ಪೋಲಾಗುತ್ತದೆ. ಆದ್ದರಿಂದ ಆಯಾ ಹಳ್ಳಿಗಳಲ್ಲಿನ ಕೆರೆ, ಬಾವಿಗಳ ಹೂಳೆತ್ತುವ ಕೆಲಸವಾಗಬೇಕು. ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಯೋಜಿಸಬೇಕು ಎಲ್ಲ ತಹಶೀಲ್ದಾರ್ ಮತ್ತು ಗ್ರಾಮೀಣ ಕುಡಿವ ನೀರು ಇಲಾಖೆ ಅಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ ಶ್ರೀಧರ, ಭಂವರಸಿಂಗ್ ಮೀನಾ, ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.