ಕಾಳಗಿ: ಶೀಘ್ರದಲ್ಲೇ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು, ತಾಲೂಕಿನಲ್ಲಿ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿ ಮೀಸಲಿಟ್ಟ ಅನುದಾನ ಯಾವುದೇ ಕಾರಣಕ್ಕೂ ಕಡಿತಕೊಳ್ಳದಂತೆ ಸಂಬಂಧಿ ಸಿದ ಅಧಿ ಕಾರಿಗಳು ಗಮನಹರಿಸಬೇಕು ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಅನೀಲ ರಾಠೊಡ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ.ಪಂ ಅಧ್ಯಕ್ಷೆ ಪುಷ್ಪಾ ಜೀತೇಂದ್ರ ಚವ್ಹಾಣ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ತಾ.ಪಂ ಸಾಮಾನ್ಯ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾ.ಪಂನಲ್ಲಿ 50 ಬಚ್ಚಲು ಗುಂಡಿ ನಿರ್ಮಿಸುವ ಗುರಿ ಹೊಂದಲಾಗಿದೆ. 14 ಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಲ್ಲಿ ಶೇ.95 ಕೆಲಸ ಚಾಲ್ತಿಯಲಿದೆ ಎಂದರು. ತಾ.ಪಂ ಅಧ್ಯಕ್ಷೆ ಪುಷ್ಪಾ ಜೀತೇಂದ್ರ ಚವ್ಹಾಣ ಮಾತನಾಡಿ, ತಾಲೂಕಿನ ಎಲ್ಲ ಸದಸ್ಯರ ಸಮಸ್ಯೆಗಳನ್ನು ಗಂಭಿರವಾಗಿ ಪರಿಗಣಿಸಿ ಬಗೆಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ರಟಕಲ್ ತಾ.ಪಂ ಸದಸ್ಯ ದತ್ತಾತ್ರೇಯ ಕುಲಕರ್ಣಿ ಮಾತನಾಡಿ, ರಟಕಲ್ ಪಿಎಚ್‌ಸಿಯಲ್ಲಿ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಆರೋಗ್ಯ ರಕ್ಷಾ ಸಮಿತಿ ರಚಿಸಿಕೊಂಡು ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೇ ಔಷಧಗಳಿಲ್ಲ, ಗ್ರಾಮದಲ್ಲಿ ಕುಡಿಯುವ ನೀರಿನ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಕೂರ್ಗ್ ಬೆಡಗಿ ರಶ್ಮಿಕಾ ಅಡುಗೆ ವಿಡಿಯೋ ವೈರಲ್
ತಾಲೂಕಿಗೆ ಸಂಬಂಧ ಪಡುವ ಚಿತ್ತಾಪುರ ತಾಲೂಕಿನ ಬಹುತೇಕ ಅಧಿ ಕಾರಿಗಳು ಗೈರಾಗಿದ್ದರು. ತಾ.ಪಂ ಉಪಾಧ್ಯಕ್ಷ ಅಕ್ಕನಾಗಮ್ಮ ಶೀಲವಂತ, ಸದಸ್ಯರಾದ ಬಸವಣಪ್ಪ ಕುಡ್ಡಳ್ಳಿ, ದತ್ತಾತ್ರೇಯ ಕುಲಕರ್ಣಿ, ರತ್ನಮ್ಮ ಗುತ್ತೇದಾರ, ರೇವಣಸಿದ್ಧ ಮಡಕಿ, ನೀಲಾಬಾಯಿ ರಾಠೊಡ, ವಂದನಾ ಪೂಜಾರಿ, ಗೌರಮ್ಮ ಚೆಂಗಟಿ, ಬಸಮ್ಮ ಹಲಗೆನೋರ ಹಾಜರಿದ್ದರು. ಪಂಚಾಯತರಾಜ್, ಭೂ ಸೇನಾ, ಕೃಷಿ ಅಧಿಕಾರಿ, ತೋಟಗಾರಿಕೆ ಅಧಿಕಾರಿ, ಅರಣ್ಯಾಧಿಕಾರಿ, ಪಶುಸಂಗೋಪನಾ, ಸಮಾಜ ಕಲ್ಯಾಣ ಇಲಾಖೆ, ಜೆಸ್ಕಾಂ, ಬೆಣ್ಣೆತೋರಾ, ಅಕ್ಷರ ದಾಸೋಹ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.