ಯಾದಗಿರಿ: ಪ್ರಸ್ತುತ ಮಕ್ಕಳು ಹೆಚ್ಚು ಅಂಕ ಪಡೆಯಲು ಮಾತ್ರ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಇದರ ಜೊತೆಗೆ ಅನುಭವ ಹಾಗೂ ವಿಚಾರ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ನೀವು ಹೊರಗಿನ ಪ್ರಪಂಚದಲ್ಲಿ ಬಂದಾಗ ನಿಮ್ಮ ಅನುಭವ ಹಾಗೂ ಕಾರ್ಯದಕ್ಷತೆ ಪರಿಗಣನೆಗೆ ಬರುತ್ತದೆಯೇ ಹೊರತು ನಿಮ್ಮ ಅಂಕಗಳಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ವಡಗೇರಾ ಪಟ್ಟಣದ ಡಿ.ಡಿ.ಯು ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಸೈದಾಪುರದ ಡಿ. ದೇವರಾಜ ಅರಸು ಶಿಕ್ಷಣ ಸಂಸ್ಥೆ ಏರ್ಪಡಿಸಿದ್ದ ಶಹಾಪುರ ಡಿಡಿಯು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಕಾಲೇಜು ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಶಿಕ್ಷಣ ಕೊಡುವ ಮೂಲಕ ಮೇಟಿ ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಶಿಕ್ಷಣ ಕ್ರಾಂತಿಯನ್ನು ಕಾಣ್ಣಾರೆ ನೋಡಲು ಹಾಗೂ ಅವರ ಸಾಧನೆ ಅನುಸರಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.
ಸಮಾಜದಲ್ಲಿನ ಮೌಡ್ಯತೆ ಬಗ್ಗೆ ಈಗಿನ ಮಕ್ಕಳು ಅರಿತುಕೊಳ್ಳಬೇಕಾಗಿದೆ. ಯಾವುದೇ ಧಾರ್ಮಿಕ ಸ್ಥಳ ನಿರ್ಮಾಣ ಮಾಡುವುದು ಮಕ್ಕಳನ್ನು ಉನ್ನತ ಸ್ಥಾನಕ್ಕೆ ಒಯ್ಯಲಾರದು. ಮಕ್ಕಳು ವೈಚಾರಿಕ ಚಿಂತನೆ ಬೆಳೆಸಿಕೊಳ್ಳುವುದರ ಜೊತೆಗೆ ಶಿಸ್ತು ಹಾಗೂ ಸಮಯ ಪರಿಪಾಲನೆಗೆ ಒತ್ತು ನೀಡಬೇಕೆಂದು ಹೇಳಿದರು.
ಡಿಡಿಯು ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಾ| ಭೀಮಣ್ಣ ಮೇಟಿ ಮಾತನಾಡಿ, ಶಹಾಪುರದಲ್ಲಿ ಪಿಯು ಕಾಲೇಜು ಸ್ಥಾಪನೆ ಮಾಡಿ ಇಂದಿಗೆ ಹತ್ತು ವರ್ಷಗಳಾದವು. ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸಂಸ್ಥೆ ಶ್ರಮಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಹಲವಾರು ಭಾಗಗಳು ವಂಚಿತವಾಗಿವೆ. ಸಂಸ್ಥೆ ಅವಿರತ ಶ್ರಮ ವಹಿಸಿದ್ದರಿಂದ ಇಂದು ವಡಗೇರಾ, ದೋರನಹಳ್ಳಿ ಅಂತಹ ಗ್ರಾಮೀಣ ಭಾಗದಲ್ಲಿ ಶಾಲೆ ಸ್ಥಾಪಿಸಿದೆ ಎಂದರು.
ವೈಚಾರಿಕ ಚಿಂತಕ ಹಾಗೂ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಮತ್ತು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು. ರೇವಣಸಿದ್ದೇಶ್ವರ ಶಾಂತಮಲ್ಲ ಸ್ವಾಮೀಜಿ, ಹಾಲುಮತ ಗುರುಪೀಠ ಸರೂರ, ಅಗತೀರ್ಥ ಸಾನ್ನಿಧ್ಯ ವಹಿಸಿದ್ದರು. ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಸಂಸದ ಬಿ.ವಿ. ನಾಯಕ, ಡಾ| ಭೀಮಣ್ಣ ಮೇಟಿ, ಮಲ್ಲಿಕಾರ್ಜುನ ಮೇಟಿ, ಮಾಜಿ ಎಂಎಲ್‌ಸಿ, ಚನ್ನಾರೆಡ್ಡಿ ಪಾಟೀಲ ತುನ್ನೂರು, ಸುದರ್ಶನ್ ನಾಯಕ, ಹನುಮೇಗೌಡ ಮರಕಲ್, ಶ್ರೀನಿವಾಸರೆಡ್ಡಿ ಕಂದಕೂರು, ಬಸ್ಸುಗೌಡ ಬಿಳ್ನಾರ, ಮಲ್ಲಿಕಾರ್ಜುನ ಪೂಜಾರಿ, ಹನುಮೇಗೌಡ ಬೀರನಕಲ್, ಮೌಲಾಲಿ ಅನಪುರ, ಮರೆಪ್ಪ ಬಿಳ್ನಾರ, ವಿಶ್ವಾರಾಧ್ಯ ಸತ್ಯಂಪೇಟೆ, ನಿಕೇತ್ ರಾಜ್ ಮೌರ್ಯ, ಭಾಷುಮೀಯ ವಡಗೇರಾ, ಸುರೇಶ್ ಜೈನ್, ಮಲ್ಲಿಕಾರ್ಜುನ ಕರಕಳ್ಳಿ, ಮಲ್ಲಯ್ಯ ಮುಸ್ತಾಜಿರ್, ಬಸವರಾಜ ಇದ್ದರು.
ಡಿ. ದೇವರಾಜ ಅರಸು ಅವರ 20 ಅಂಶಗಳನ್ನು ಅನುಷ್ಠಾನ ಮಾಡಿದ ಐದು ವ್ಯಕ್ತಿಗಳಿಗೂ ಇದೇ ವೇಳೆ ಸನ್ಮಾನಿಸಲಾಯಿತು. ನೀಲಮ್ಮ ಗೌಡಶಾನಿ, ರತ್ನಾಭಾಯಿ, ಎ.ಸಿ. ಕಾಡೂರು, ಭೀಮನಗೌಡ ಮಳ್ಳಳ್ಳಿ, ಬಸಂತರಾಯ ಪೊಲೀಸ್ ಪಾಟೀಲ ಹಾಗೂ ದೇವಮ್ಮ ಅವರಿಗೆ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ರಾಜಶೇಖರ ಜೋಳದಡಿಗಿ, ಡಾ| ಜಗನ್ನಾಥ ರೆಡ್ಡಿ, ಫಕೀರ್ ಅಹಮ್ಮದ್ ಹಾಗೂ ಶಿವಬಸಪ್ಪ ಸಗರ ಅವರನ್ನು ಸನ್ಮಾನಿಸಲಾಯಿತು.
18 ಸಂಸ್ಥೆಗಳು ಮತ್ತು 6 ಸಾವಿರ ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಹಾಗೂ 1,500 ವಿದ್ಯಾರ್ಥಿಗಳು ಪಿಯು ಹಂತದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಜೊತೆಗೆ ಬೋಧಕ ಸಿಬ್ಬಂದಿ ಸೇರಿದಂತೆ ಒಟ್ಟು 500 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಶೋಷಿತ ಸಮುದಾಯಗಳಿಗೆ ಶಿಕ್ಷಣ ದೊರಕಿಸಿಕೊಡುವ ಸೌಭಾಗ್ಯ ತಮ್ಮದಾಗಿದೆ.
ಡಾ| ಭೀಮಣ್ಣ ಮೇಟಿ, ಡಿಡಿಯು ಶಿಕ್ಷಣ ಸಂಸ್ಥೆ ಸಂಸ್ಥಾಪಕರು, ಯಾದಗಿರಿ