Advertisement
ಚಿಂತಕರ ಚಾವಡಿಯಾಗಿದ್ದ ಮೇಲ್ಮನೆ ಈಗ ದುಡ್ಡಿದ್ದವರ ಮನೆಯಾಗಿದೆ ಎಂಬಂತಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳಲ್ಲೂ ಪರಿಷತ್‌ನ ಬಗ್ಗೆ ಭಿನ್ನ ಧ್ವನಿ ಎದ್ದಿದೆ. ಒಂದು ಕಾಲ ದಲ್ಲಿ ಮುತ್ಸದ್ಧಿಗಳು, ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಪರಿಷತ್ ಇಂದು ಅದಕ್ಕೆ ವಿರುದ್ಧವಾಗಿದ್ದು, ಗುಣಮಟ್ಟವೂ ಕುಸಿಯುತ್ತಿದೆ. ಚರ್ಚೆಗಳು ಕೂಡ ಕೆಲವೇ ವಿಷಯಗಳಿಗೆ ಸೀಮಿತವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂತು. ಈ ಬಗ್ಗೆ ಅವಲೋಕನ ಮಾಡಬೇಕಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಹೇಳಿದ್ದಾರೆ.
ಬೇರೆ ರಾಜ್ಯಗಳಿಗೆ ಹೋಲಿಸಿ ಕರ್ನಾಟಕ ಪರಿಷತ್ ವ್ಯವಸ್ಥೆ ವಿಸರ್ಜನೆ ಮಾಡಬೇಕು ಎಂಬುದು ಸರಿಯಲ್ಲ. 1907ರಿಂದಲೂ ಈ ವ್ಯವಸ್ಥೆ ಜಾರಿಯಲ್ಲಿದೆ. ಚಿಂತಕರ ಚಾವಡಿಯಾಗಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದೆ. ಇತ್ತೀಚಿನ ವರ್ಷಗಳಲ್ಲಿ ಪಕ್ಷಗಳು ಆಯ್ಕೆ ಮಾಡುವ ಸದಸ್ಯರಿಂದ ಗುಣಮಟ್ಟದಲ್ಲಿ ಕುಸಿತವಾಗುತ್ತಿರಬಹುದು. ಆದರೆ, ಪರಿಷತ್ ವ್ಯವಸ್ಥೆ ಬೇಕು. ಗುಣಮಟ್ಟ ಸುಧಾರಿಸುವ ಕಾರ್ಯವೂ ಆಗಬೇಕು. ಗುಣಮಟ್ಟ ಸುಧಾರಣೆ ಮೂಲಕ ಪರಿಷತ್ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೆ ಏರಿಸಬೇಕೇ ವಿನಃ ವಿಸರ್ಜನೆ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ ಎಂಬುದು ಹಲವರ ಅಭಿಪ್ರಾಯ. ಇದನ್ನೂ ಓದಿ:ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಯ್ತು; ಯತ್ನಾಳ್ ಕಿಡಿ
Related Articles
ಗುಣಮಟ್ಟದ ವಿಷಯವಾಗಿ ಎಲ್ಲ ಮುಖಂ ಡರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಸೋತಿದ್ದಾಗ ವಿಧಾನ ಪರಿಷತ್ ಅವರಿಗೆ ಆಶ್ರಯ ಕೊಟ್ಟಿತ್ತು. ಅಲ್ಲಿಯವರೆಗೆ ಪರಿಷತ್ ಚೆನ್ನಾಗಿತ್ತು, ಡಿಸಿಎಂ ಪದವಿ ಹೋಗುತ್ತಿದ್ದಂತೆ ಪರಿಷತ್ ಬೇಡವಾಯಿತೇ? ಹಣದ ಹೊಳೆ ಹರಿಸುವುದು ಸರಿಯಲ್ಲ. ನೆಗಡಿ ಬಂದಿದೆ ಎಂದು ಮೂಗು ಕತ್ತರಿಸುವುದು ಸರಿಯಲ್ಲ. ದ್ರಾಕ್ಷಿ ಸಿಗದಿದ್ದಾಗ ಹುಳಿ ಎನ್ನಬಾರದು. ದುಡ್ಡಿರುವವರಿಗೆ ಟಿಕೆಟ್ ನೀಡುವುದು ಏಕೆ? ಎಲ್ಲ ಪಕ್ಷದವರು ಅದನ್ನೇ ಮಾಡುವುದು ಏಕೆ ಎಂದು ಜೆಡಿಎಸ್ ಸದಸ್ಯ ಭೋಜೇಗೌಡ ಅವರು ಹೇಳಿದರು.
Advertisement
ವಿಧಾನ ಪರಿಷತ್‌ಗೆ ಘನ ಪರಂಪರೆಯಿದೆ. ಪರಿಷತ್ ಗುಣಮಟ್ಟ ಸುಧಾರಿಸಿ ಮೇಲ್ದರ್ಜೆಗೇರಿಸಬೇಕು.-ಕೋಟ ಶ್ರೀನಿವಾಸ ಪೂಜಾರಿ, ಸಚಿವ ವಿಧಾನ ಪರಿಷತ್ ಅನ್ನು ಮೈಸೂರು ಮಹಾರಾಜರು ಆರಂಭಿಸಿದ್ದು, ಇದನ್ನು ಬೇರೆ ರಾಜ್ಯಗಳಿಗೆ ಹೋಲಿಸಿ ಪರಿಷತ್ ಬೇಕೇ ಬೇಡವೇ ಎಂದು ಚರ್ಚೆ ಮಾಡುವುದೇ ಸರಿಯಲ್ಲ. ಪರಿಷತ್ ವ್ಯವಸ್ಥೆ ಮುಂದುವರಿಯಬೇಕು.
– ತೇಜಸ್ವಿನಿ ಗೌಡ, ಬಿಜೆಪಿ ಸದಸ್ಯೆ ಪರಿಷತ್ ಬೇಡ ಅನ್ನುವುದೇ ಸರಿಯಲ್ಲ. ಎಲ್ಲರಿಗೂ ಶಾಸಕರಾಗಲು ಸಾಧ್ಯವಿಲ್ಲ. ಹೀಗಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸಲು, ಧ್ವನಿಯಾಗಲು ಅವಕಾಶವಿದೆ. ಹೀಗಾಗಿ ಪರಿಷತ್ ವ್ಯವಸ್ಥೆ ಇರಬೇಕು.
– ನಾರಾಯಣ ಸ್ವಾಮಿ, ವಿಪಕ್ಷ ಸಚೇತಕ