Advertisement

ಮನೆಯಲ್ಲಿ ಕಲಿಕೆ ವಾತಾವರಣ ಇರಲಿ

08:49 PM Jan 11, 2020 | Lakshmi GovindaRaj |

ಚಿಕ್ಕಬಳ್ಳಾಪುರ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಕರಿಗಿಂತ ಪೋಷಕರ ಕಾಳಜಿ ಬಹಳ ಮುಖ್ಯ. ಪೋಷಕರು ಮಕ್ಕಳಿಗೆ ಮನೆಯಲ್ಲಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕಿದೆ ಎಂದು ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.

Advertisement

ನಗರದ ಹೊರ ವಲಯದ ಎಸ್‌ಜೆಸಿಐಟಿ ಕ್ಯಾಂಪಸ್‌ನಲ್ಲಿ ಶನಿವಾರ ಬಿಜಿಎಸ್‌ ವರ್ಲ್ಡ್ ಸ್ಕೂಲ್‌ನ ಐಸಿಎಸ್‌ಸಿ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪದವಿ ಪ್ರದಾನ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಜ್ಞಾನ ಅನಾವರಣಗೊಳಿಸಿ: ಪೋಷಕರ ನಡವಳಿಕೆಗಳು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವುದರಿಂದ ಮನೆಗಳಲ್ಲಿ ಮಕ್ಕಳ ಮುಂದೆ ಉತ್ತಮ ನಡವಳಿಕೆಗಳಿಂದ ಇರಬೇಕು. ವಿದ್ಯಾರ್ಥಿಗಳಲ್ಲಿರುವ ಅಂತರಂಗದ ಜ್ಞಾನವನ್ನು ಹೊರ ತರುವ ಕೆಲಸ ಶಿಕ್ಷಕರು ಮಾಡಬೇಕಂದರು.

ಪೋಷಕರ ಕಾಳಜಿ ಮುಖ್ಯ: ವಿದ್ಯಾರ್ಥಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸುವ ಕೆಲಸ ಆಗಬಾರದು. ಕಲಿಕೆಗೆ ಮುಕ್ತ ವಾತಾವರಣ ಕಲ್ಪಿಸಬೇಕು. ಬಹಳಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿದರೆ ಸಾಕು ನಮ್ಮ ಜವಾಬ್ದಾರಿ ಮುಗಿದಿದೆ ಎಂದು ಭಾವಿಸುತ್ತಾರೆ. ಇದು ತಪ್ಪು ಕಲ್ಪನೆ. ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರಷ್ಟೇ ಪೋಷಕರ ಕಾಳಜಿ ಮುಖ್ಯ ಎಂದರು.

ಉತ್ತಮ ಭವಿಷ್ಯ: ಮುಖ್ಯ ಅತಿಥಿಗಳಾಗಿದ್ದ ಏರ್‌ವೈಸ್‌ ಮಾರ್ಷಲ್‌ ಮ್ಯಾಥುಜಾರ್ಜ್‌ ಮಾತನಾಡಿ, ಮಕ್ಕಳು ಕಲಿಕೆ ಸಂದರ್ಭದಲ್ಲಿ ಶಿಸ್ತು ಮೂಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಮೊದಲು ಗುರಿ ಇರಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆಗಳಿಗೆ ಸಾಕಷ್ಟು ಅವಕಾಶಗಳು ಇವೆ ಎಂದರು. ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಡಾ.ಎನ್‌.ಶಿವರಾಮರೆಡ್ಡಿ ಮಾತನಾಡಿ, ಪೋಷಕರು ಮಕ್ಕಳಿಗೆ ಮನೆಯಲ್ಲಿಯೇ ಉತ್ತಮ ಶಿಕ್ಷಣ ಕೊಡುವ ವ್ಯವಸ್ಥೆ ಮಾಡಬೇಕು.

Advertisement

ನಮ್ಮ ಮಕ್ಕಳು ಮುಂದೆ ಡಾಕ್ಟರ್‌, ಎಂಜಿನಿಯರ್‌ ಆಗಬೇಕು ಎಂದು ಮಕ್ಕಳನ್ನು ಒತ್ತಾಯಿಸುವುದು ತಪ್ಪು. ಮಕ್ಕಳಿಗೆ ಅವರ ಆಸೆಯಂತೆ ಶಿಕ್ಷಣವನ್ನು ಕೊಡುವುದು ಉತ್ತಮ ಎಂದು ಪೋಷಕರಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ್‌ ಖರೆ, ಶಾಲೆಯ ಪ್ರಾಂಶುಪಾಲ ರಂಜಿತ್‌ ಮಂಡಕಲ್‌ ಸೇರಿದಂತೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪದವಿ ಪ್ರದಾನ ಸಮಾರಂಭದಲ್ಲಿ ಶಾಲೆಯ 10ನೇ ತರಗತಿಯ ಎಲ್ಲಾ ಮಕ್ಕಳಿಗೂ ನೆನಪಿನ ಕಾಣಿಕೆ ವಿತರಿಸಲಾಯಿತು. 2018-19ನೇ ಸಾಲಿನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿ ಚಾವ್ಲ ಆರ್‌.ರೆಡ್ಡಿಗೆ 20,000 ರೂ. ನಗದು ಬಹುಮಾನ ವಿತರಿಸಲಾಯಿತು. ಉಳಿದ ಎಂಟು ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಸಮಾರಂಭದಲ್ಲಿ 2000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕಾರ್ಯ ಶಿಕ್ಷಕರಿಂದ ಪ್ರಾಮಾಣಿಕವಾಗಿ ಆಗಬೇಕು. ಸ್ವಯಂ ಪರಿಶ್ರಮ ಇಲ್ಲದೇ ಯಾವ ವಿದ್ಯಾರ್ಥಿಯು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ. ವಿದ್ಯಾರ್ಥಿ ಜೀವನವೇ ಇಡೀ ಬದುಕಿಗೆ ಅಡಿಪಾಯ.
-ಅಭಿನವ ಖರೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next