ವಿಜಯಪುರ: ಆಧುನಿಕ ಭಾರತಕ್ಕೆ ಯುವಕರೇ ಮಹಾನ್ ಶಕ್ತಿ, ಆಸ್ತಿ. ಹೀಗಾಗಿ ಯುವಜನತೆ ಭವಿಷ್ಯದ ಭಾರತ ಕಟ್ಟುವುದಕ್ಕಾಗಿ ಅನುಕರಣೀಯ ಕೆಲಸಗಳನ್ನು ಮಾಡಬೇಕು ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ಕರೆ ನೀಡಿದರು.
ಶನಿವಾರ ನಗರದಲ್ಲಿ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ. ಆರ್ಟ್ಸ್ ಮತ್ತು ಕೆಸಿಪಿ ಸೈನ್ಸ್ ಕಾಲೇಜ್ ಮತ್ತು ನೆಹರು ಯುವ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರದ ಪ್ರಗತಿಗಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮಾತನಾಡಿ, ಅಬ್ಬರದ ಸಂಗೀತದಿಂದ ಹಿಮ್ಮೇಳನ, ಸೂಕ್ಷ್ಮ ಧ್ವನಿಗಳು ಕೇಳುತ್ತಲೇ ಇಲ್ಲ, ಹೀಗಾಗಿ ಆ ಸಂಗೀತದ ಸವಿ ಧ್ವನಿ ಆಸ್ವಾದಿಸುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದೇವೆ ಎಂದು ವಿಷಾದಿಸಿದರು.
ಇನ್ನೊಂದೆಡೆ ಕರೋಕೆ ಸಂಸ್ಕೃತಿ ಹೆಚ್ಚಾಗುತ್ತಿದೆ, ಟ್ರಾಕರ್ ಆಧರಿಸಿ ಹಾಡುಗಳನ್ನು ಹಾಡುವುದರಿಂದ ಸಂಗೀತ ವಾದ್ಯ ಕಲಾವಿದರ ಕೊರತೆ ಎದುರಾಗುತ್ತಿದೆ. ಹೊಸ ತಲೆಮಾರಿನ ಯುವಕರು ಸಂಗೀತ ವಾದ್ಯಗಳ ನುಡಿಸುವ ವಿದ್ಯೆ ಕಲಿಕೆಯಿಂದ ವಿಮುಖರಾಗುತ್ತಿದ್ದಾರೆ. ಕರೋಕೆಯ ಜೊತೆಗೆ ನಮ್ಮ ನೆಲದ ಮೂಲ ಸಂಗೀತ ಆಲಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು.
ಯುವಜನರಲ್ಲಿ ಸಾಂಸ್ಕೃತಿಕ ಮನೋಭಾವನೆ, ರಾಷ್ಟ್ರಾಭಿಮಾನ ಮೊದಲಾದ ಉದಾತ್ತ ಸಂಸ್ಕಾರಗಳನ್ನು ಮೈಗೂಡಿಸುವಲ್ಲಿ ಯುವಜನೋತ್ಸವ ಪೂರಕವಾಗಿವೆ ಎಂದರು. ಅರವಿಂದ ಕೊಪ್ಪ, ಖೋತ, ಸಂತೋಷಕುಮಾರ ನಿಗಡಿ, ಜಾವೇದ ಜಮದಾರ, ಪ್ರಾಚಾರ್ಯ ಡಾ| ಎಸ್.ಜಿ. ಪೂಜಾರಿ, ಜಿ.ಆರ್. ಅಂಬಲಿ ಇದ್ದರು. ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ ಸ್ವಾಗತಿಸಿದರು. ಡಿ.ದಯಾನಂದ ವಂದಿಸಿದರು.