ದೇವನಹಳ್ಳಿ: ಪ್ರಾಚೀನ ಜಾನಪದ ಕ್ರೀಡೆಗಳಲ್ಲಿ ಗಾಳಿಪಟವೂ ಒಂದಾಗಿತ್ತು. ಇಂದಿನ ಯುವ ಪೀಳಿಗೆ ಇತಂಹ ಗ್ರಾಮೀಣ ಕ್ರೀಡೆ ಉಳಿಸಿ ಬೆಳೆಸಬೇಕು ಎಂದು ಜೇಸಿಐ ರಾಷ್ಟ್ರೀಯ ನಿರ್ದೇಶಕ ಡಾ.ನವೀನ್ ಲಾಯ್ಡ ಮಿಸ್ಕಿತ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜು ಮೈದಾನದಲ್ಲಿ ಜೇಸಿಐ ಸಂಸ್ಥೆ ಹಮ್ಮಿಕೊಂಡಿದ್ದ 15ನೇ ವರ್ಷದ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ಪರಿಸ್ಥಿತಿಯಲ್ಲಿ ಗ್ರಾಮೀಣ ಕಲೆ ಮರೆಯುತ್ತಿದ್ದು, ಬೆಳೆಸಲು ಯುವಕರು ಹೆಚ್ಚಿನ ಶ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಜೇಸಿಐ ಉತ್ತಮ ಕೆಲಸ ಮಾಡುತ್ತಿದೆ. ಹಿಂದೆ ಆಷಾಡ ಬಂದರೆ ಸಾಕು ಬಣ್ಣ ಬಣ್ಣದ ವಿವಿಧ ಆಕೃತಿಯುಳ್ಳ ಗಾಳಿಪಟ ಬಾನಂಗಳಲ್ಲಿ ಹಾರಾಡುತ್ತಿದ್ದವು. ಆದರೆ, ಈಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಗಾಳಿಪಟ ಅನ್ನುವುದು ಮರೆಯಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸಂಘ ಸಂಸ್ಥೆಗಳು ಗಾಳಿಪಟದಂತಹ ಹಲವು ಜಾನಪದ ಕ್ರೀಡೆಗಳನ್ನು ಆಯೋಜಿಸುವುದರಿಂದ ಅದರ ವೈಶಿಷ್ಟತೆ ಜನರಿಗೆ ಅರಿವಾಗುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಇಂತಹ ಗಾಳಿಪಟ ಉತ್ಸವಗಳನ್ನು ಮರೆಯುವ ಸ್ಥಿತಿಗೆ ತಲುಪಿರುವುದು ವಿಷಾದನೀಯ ಎಂದು ಹೇಳಿದರು.
ಪುರಸಭೆ ಸದಸ್ಯ ಬಿ.ದೇವರಾಜ್ ಮಾತನಾಡಿ, ಕ್ರಿಕೆಟ್‌ಗೆ ಜೋತು ಬಿದ್ದಿರುವ ಯುವಕರು ಜಾನಪದ ಕ್ರೀಡೆ ಮರೆಯುವ ಸ್ಥಿತಿಗೆ ಹೋಗುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಲಗೋರಿ, ಗೋಲಿ, ಚಿನ್ನಿದಾಂಡು, ಗಾಳಿಪಟ ಸ್ಪರ್ಧೆಗಳು ಹೆಚ್ಚು ಆಡುತ್ತಿದ್ದೇವು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಕ್ರೀಡೆಗಳಲ್ಲಿ ಪ್ರೋತ್ಸಾಹವೇ ಇಲ್ಲದಂತೆ ಕ್ಷೀಣಿಸುತ್ತಿದೆ ಎಂದು ಹೇಳಿದರು.
ಆಗಸದಲ್ಲಿನ ಗಾಳಿಪಟಗಳ ಕಲರವ ನೆರದಿದ್ದ ಪ್ರೇಕ್ಷಕರ ಮನಸೋರೆಗೊಳಿಸಿತು. ಗಾಳಿಆಂಜನೇಯ, ಯಕ್ಷಗಾನ ಪಟ, ಸರಣಿ ಪಟ, ಮಹಿಳೆಯರಿಗೆ ಗೌರವ ಸೂಚನೆ, ಮಹಿಳಾ ದೌರ್ಜನ್ಯ ಖಂಡನೆ ಪಟ, ಮಿಕ್ಕಿಮೌಸ್, ಕಾಳಿಂಗ ಸರ್ಪ, ರಾಷ್ಟ್ರಧ್ವಜ, ಚಿಟ್ಟೆ, ಗಣಪ, ರೇಣುಕಾದೇವಿ, ವೆಂಕಟೇಶ್ವರ, ಆಪಲ್, ಮದ್ಯಪಾನ, ಧೂಮಪಾನ ನಿಷೇಧ ಕುರಿತ ಜನಜಾಗೃತಿಯುಳ್ಳ ಗಾಳಿಪಟಗಳು ಹಾರಾಡಿದವು.
ಈ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ, ದೇವನಹಳ್ಳಿ, ವಿಜಯಪುರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ವಿವಿಧಕಡೆಯಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅತ್ಯುತ್ತಮ ಮೂರು ಪ್ರಶಸ್ತಿಗಳಲ್ಲಿ ಮೊದಲ ಪ್ರಶಸ್ತಿ ಸುಹಾಸ್, 2ನೇ ಅತ್ಯುತ್ತಮ ಪ್ರಶಸ್ತಿ ಹರೀಶ್, ತೃತೀಯ ಪ್ರಶಸ್ತಿ ನರೇಶ್‌ಗೆ ನೀಡಲಾಯಿತು.
ಜೇಸಿಐ ದೇವನಹಳ್ಳಿ ಅಧ್ಯಕ್ಷ ಎಂ.ಬಾಬು ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಲಯನ್ಸ್ ಅಧ್ಯಕ್ಷ ಪಿ.ಗಂಗಾಧರ್, ಕಾರ್ಯದರ್ಶಿ ಕಿರಣ್‌ಯಾದವ್, ಯೋಜನಾ ನಿರ್ದೇಶಕ ಎ.ರಾಜೇಶ್, ನಿಕಟ ಪೂರ್ವಾಧ್ಯಕ್ಷ ನಾಗೇಂದ್ರ ಪ್ರಸಾದ್, ಎಂ.ಆನಂದ, ಎಸ್.ವಿ.ಮಂಜುನಾಥ್, ಡಿ.ಎನ್.ನಾರಾಯಣಸ್ವಾಮಿ, ಎಸ್.ವಿಜಯಕುಮಾರ್, ಎನ್.ರಮೇಶ್, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.