Advertisement

ಯುವಕರು ದುಶ್ಚಟಗಳಿಂದ ಮುಕ್ತರಾಗಲಿ

09:03 PM Feb 17, 2020 | Team Udayavani |

ಚಿಕ್ಕಬಳ್ಳಾಪುರ: ಆರೋಗ್ಯವಂತ ಯುವಕರಿಂದ ಮಾತ್ರ ಸಮೃದ್ಧಿ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಯುವಕರು ದುಶ್ಚಟಗಳಿಗೆ ಒಳಗಾಗದೇ ಉತ್ತಮ ಹವ್ಯಾಸಗಳನ್ನು ಜೀವನದಲ್ಲಿ ರೂಢಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ತಿಳಿಸಿದರು.

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಜಿಲ್ಲಾ ಆಯುಷ್‌ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2019-20ನೇ ಸಾಲಿನ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಯೋಜನೆಯಡಿ ಜಿಲ್ಲಾ ಮಟ್ಟದ ಎಸ್‌ಸಿಪಿ ಆಯುಷ್‌ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ತಿಳಿವಳಿಕೆ ಮೂಡಿಸಬೇಕು: ಪ್ರಸುತ್ತ ದಿನಗಳಲ್ಲಿ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಯುವಕರು ಪಣತೊಡಬೇಕಾಗಿದ್ದು, ಪರಿಸರಕ್ಕೆ ಹಾನಿಯುಂಟು ಮಾಡುವ ಹವ್ಯಾಸಗಳಿಂದ ದೂರವಿರಬೇಕಾದ ಅಗತ್ಯತೆ ಇದೆ. ವಾತಾರವಣದಲ್ಲಿ ಬಹುಬೇಗನೆ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ವಿದ್ಯಾರ್ಥಿಗಳು ಸಮಾಜಕ್ಕೆ ತಿಳಿವಳಿಕೆ ಮೂಡಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದರು.

ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ: ಯೋಗ ಹಾಗೂ ಆಯುರ್ವೇದದಿಂದ ಆರೋಗ್ಯಕರ ವಾತಾವರಣ ನಿರ್ಮಾಣಗೊಳ್ಳುತ್ತದೆ. ಯುವಕರು ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು. ಕಡಿಮೆ ಖರ್ಚಿನಲ್ಲಿ ಹಲವು ರೋಗಗಳಿಗೆ ಆರೋಗ್ಯ ಸೌಲಭ್ಯ ಪಡೆಯಲು ಆಯುರ್ವೇದ ಮತ್ತು ಹೋಮಿಯೊಪತಿ ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಮತ್ತಷ್ಟು ಜಾಗರೂಕತೆ ಮೂಡಿಸಬೇಕಾಗಿರುತ್ತದೆ ಎಂದರು.

ಸಾರ್ವಜನಿಕರಿಗೆ ತಿಳಿಸಿ: ಜಿಲ್ಲಾ ಆಯುಷ್‌ ಅಧಿಕಾರಿ ಡಾ.ಶಹಾಬುದ್ದೀನ್‌ ಮಾತನಾಡಿ, ಆಧುನಿಕ ಜಗತ್ತಿನ ಒತ್ತಡದ ಜೀವನಶೈಲಿಯಿಂದ ಜನರು ಬಹುಬೇಗನೆ ಹಲವು ರೋಗಗಳಿಗೆ ತುತ್ತಾಗುತ್ತಾರೆ. ದಿನನಿತ್ಯದ ಜೀವನ ಶೈಲಿ ಬದಲಿಸಿಕೊಂಡು ಸಮತೋಲನ ಆಹಾರ ಸೇವಿಸಿ ಸದೃಢರಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿ ಮಾಡುವ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವ ಅಗತ್ಯವಿದೆ.

Advertisement

ಈ ಕಾರ್ಯಕ್ರಮದ ಉಪಯೋಗವನ್ನು ಪ್ರತಿಯೊಬ್ಬ ನಾಗರಿಕನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಸಂಸ್ಥೆಯ ಅಧ್ಯಕ್ಷ ಗೋವಿಂದರಾಜು ಸೇರಿದಂತೆ ಜಿಲ್ಲಾ ಆಯುಷ್‌ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಯುರ್ವೇದ ಬಗ್ಗೆ ತಪ್ಪು ಕಲ್ಪನೆ: ಆಯುಷ್‌ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಣ, ಸಂವಹನ ಹಾಗೂ ಮಾಹಿತಿ ಕಾರ್ಯಾಗಾರದಲ್ಲಿ ಆಯುರ್ವೇದಿಕ್‌ ಔಷಧಿಗಳ ಬಳಕೆ, ಅದರ ಮಹತ್ವದ ಕುರಿತು ವಿಶೇಷವಾಗಿ ಆಯುರ್ವೇದಿಕ್‌ ಬಗ್ಗೆ ಜನರಲ್ಲಿರುವ ತಪ್ಪುಕಲ್ಪನೆಗಳ ಬಗ್ಗೆ ಹೋಗಲಾಡಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಪನ್ಯಾಸಕರಿಂದ ಹಾಗೂ ಆಯುಷ್‌ ಇಲಾಖೆ ನುರಿತ ತಜ್ಞರಿಂದ ವಿಶೇಷ ಉಪನ್ಯಾಸದ ಮೂಲಕ ಅರಿವು ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next