ವಿಜಯಪುರ: ಪಿಎಸೈ ನೇಮಕದಲ್ಲಿ ನಡೆದಿರುವ ಅಕ್ರಮ ಹಗರಣ ಹೊರ ಬಿದ್ದಿರುವುದು ರಾಜ್ಯದ ಮಟ್ಟಿಗೆ, ಆರೋಗ್ಯಕರ ಸಮಾಜ ಕಟ್ಡುವಲ್ಲಿ ಇಂಥ ಬೆಳವಣಿಗೆ ಒಳ್ಳೆಯದಲ್ಲ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಥ ಘಟನೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ಅಕ್ರಮದ ತನಿಖೆ ನಡೆದಿದ್ದು, ತಪ್ಪಿತಸ್ಥರು ಯಾರು, ಪ್ರಕರಣದಲ್ಲಿ ನೈಜವಾಗಿ ನಡೆದಿರುವುದು ಏನು ಎಂಬುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿ, ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು.
ನಾಗರಿಕ ಸಮಾಜಕ್ಕೆ ಇದು ಅಪಮಾನ. ಇದೊಂದೇ ಅಲ್ಲ ಇಂಥ ಯಾವುದೇ ಘಟನೆ ಒಪ್ಪಿತವಲ್ಲ. ದೇಶದ ಕಾನೂನು, ಈ ನೆಲದ ಕಾನೂನನ್ನು ಗೌರವಿಸದರವಿಗೆ ಶಿಕ್ಷೆಯಾಗಬೇಕು. ಆಗಲೇ ಈ ದೇಶ, ದೇಶದ ಸಂವಿಧಾನಕ್ಕೆ ಗೌರವ ಎಂದು ಆಗ್ರಹಿಸಿದರು.
ದೇಶ ಮುನ್ನಡೆಸಲು ದೇಶವಾಸಿಗಳಿಗೆ ಸೇರಿದ ಸಂವಿಧಾನ ಎಂಬುದೊಂದಿದೆ. ಯಾವುದೇ ವಿಚಾರದಲ್ಲಿ ಸಂವಿಧಾನ, ಕಾನೂನನ್ನು ಗೌರಿವಿಸದವರಿಗೆ ಶಿಕ್ಷೆಯಾಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗದಿದ್ದರೆ ಸಂವಿಧಾನಕ್ಕೆ, ಕಾನೂನಿಗೆ ಏನು ಗೌರವ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಲೌಡ್ ಸ್ಪೀಕರ್ ವಿವಾದ: ಮಹಾರಾಷ್ಟ್ರದಲ್ಲಿ ಯೋಗಿಯಂತವರಿಲ್ಲ, ಭೋಗಿಗಳಿದ್ದಾರೆ: ರಾಜ್ ಠಾಕ್ರೆ
ಈ ನೆಲದಲ್ಲಿ ಎಲ್ಲರಿಗೂ ಒಂದೇ ಕಾನೂನು. ಬಡವರಿಗೊಂದು, ಶ್ರೀಮಂತರಿಗೊಂದು ಕಾನೂನು ಎಂಬುದಿಲ್ಲ. ಬಲಾಢ್ಯರಿಗೊಂದು ದುರ್ಬಲರಿಗೊಂದು ಕಾನೂನು ಇದೆಯೇ. ಸಂವಿಧಾನ, ಕಾನೂನು ಎಲ್ಲಕ್ಕಿಂತ ಸರ್ವ ಶ್ರೇಷ್ಠತೆ ಎಂಬುದು ದೇಶದ ಜನರಿಗೆ ವಿಶ್ವಾಸ ಮೂಡಿಸಲು ಯಾರೇ ಇದ್ದರೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸಂವಿಧಾನ ಎಂಬುದು ಅಂತಿಮವಾಗಬೇಕು ಎಂದು ಹೇಳಿದರು.