Advertisement

ಜಾಗತಿಕ ತಾಪಮಾನ ಕಡಿಮೆಗೊಳಿಸುವತ್ತ ಜಗತ್ತು ಗಮನಕೊಡಲಿ

10:10 PM Jul 28, 2023 | Team Udayavani |

ಇದು ಜಗತ್ತು ಬಿಸಿಯಾಗಿರುವ ಕಾಲವಲ್ಲ, ಬದಲಾಗಿ ಭೂಮಿಯೇ ಕುದಿಯುತ್ತಿರುವ ಕಾಲ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್‌ ಹೇಳಿದ್ದು, ಈ ಮೂಲಕ ಜಾಗತಿಕ ತಾಪಮಾನದ ಗಂಭೀರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಜಗತ್ತಿನಲ್ಲೇ ಜುಲೈ ಅತ್ಯಂತ ಬಿಸಿಯಾಗಿದ್ದ ಅಥವಾ ತಾಪದ ಮಾಸ ಎಂದು ದಾಖಲೆ ಬರೆದ ಹೊತ್ತಿನಲ್ಲೇ ಅವರು ಇಂಥ ಮಾತು ಹೇಳಿದ್ದು, ಆತಂಕ ಮೂಡುವ ಸ್ಥಿತಿ ಎದುರಾಗಿದೆ.

Advertisement

ಜಗತ್ತಿನ ತಾಪಮಾನ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ನಾವು ಜುಲೈ ಮಾಸವನ್ನು ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಪರಿಣಾಮವುಂಟು ಮಾಡಲಿದೆ ಎಂದಿರುವ ಗುಟೆರಸ್‌, ಕೈಗಾರಿಕಾ ಕ್ರಾಂತಿಯ ಪೂರ್ವ ಕಾಲದ ತಾಪಮಾನ ಕಾಪಿಟ್ಟುಕೊಳ್ಳುವ ಅನಿವಾರ್ಯತೆಯೂ ನಮ್ಮೆಲ್ಲರ ಮುಂದಿದೆ ಎಂದಿದ್ದಾರೆ. ಇದಕ್ಕೆ ನಾಟಕೀಯ, ತಕ್ಷಣದ ಕ್ರಮಗಳಾಗಬೇಕು ಎಂದು ಜಗತ್ತಿನ ಎಲ್ಲ ನಾಯಕರಿಗೂ ಕರೆ ನೀಡಿದ್ದು, ತಾಪಮಾನ ಏರಿಕೆಯ ಅಪಾಯದ ಬಗ್ಗೆ ಒತ್ತಿ ಹೇಳಿದ್ದಾರೆ.

ಜಾಗತಿಕ ವಿಜ್ಞಾನಿಗಳ ಪ್ರಕಾರ, ಜು.5 ಮತ್ತು ಜು.7ರಂದು ಭಾರೀ ತಾಪಮಾನ ದಾಖಲಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಪ್ರಮಾಣದ ತಾಪಮಾನ ದಾಖಲಾಗಿದೆ. ಅಂದರೆ 1940ರಲ್ಲಿ 13 ಸೆಲ್ಸಿಯಸ್‌ ಇದ್ದದ್ದು, ಈಗ ಜು.5ಕ್ಕೆ 17 ಸೆಲ್ಸಿಯಸ್‌ಗೆ ತಲುಪಿದೆ. 2016ರಲ್ಲಿ 15 ಸೆಲ್ಸಿಯಸ್‌ ಇತ್ತು. 2023ರ ಆರಂಭದಲ್ಲಿ 16 ಸೆಲ್ಸಿಯಸ್‌ಗೂ ತಲುಪಿತ್ತು. ಈಗ ಇದು 17 ಸೆಲ್ಸಿಯಸ್‌ಗೆ ಏರಿಕೆಯಾಗಿರುವುದು ಅಪಾಯಕಾರಿ ಸನ್ನಿವೇಶ ಎಂದು ವಿಶ್ವಸಂಸ್ಥೆ ಮತ್ತು ವಿಜ್ಞಾನಿಗಳು ಹೇಳಿದ್ದಾರೆ.

ಇತ್ತೀಚೆಗಷ್ಟೇ ವಿಜ್ಞಾನಿಗಳು, ಜಾಗತಿಕ ತಾಪಮಾನ ಕುರಿತ ಕಳವಳವನ್ನು ಬೇರೆ ರೀತಿಯಲ್ಲೇ ವ್ಯಕ್ತಪಡಿಸಿದ್ದರು. ಅಂದರೆ, ಗ್ರೀಸ್‌, ಇಟಲಿ ಸೇರಿದಂತೆ ಕೆಲವು ಐರೋಪ್ಯ ದೇಶಗಳಲ್ಲಿ ಭಾರೀ ಪ್ರಮಾಣದ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ಇದಕ್ಕೆ ಜಾಗತಿಕ ತಾಪಮಾನ ಏರಿಕೆಯೇ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಅಷ್ಟೇ ಅಲ್ಲ, ಗ್ರೀಸ್‌ನಲ್ಲಿ  ಕಳೆದ ಎರಡು ವಾರದ ಹಿಂದೆ ಆರಂಭವಾಗಿರುವ ಇನ್ನೂ ಕಾಳ್ಗಿಚ್ಚು ನಿಯಂತ್ರಣಕ್ಕೇ ಬಂದಿಲ್ಲ. ಇಟಲಿಯಲ್ಲೂ ಇದೇ ಸ್ಥಿತಿ ಇದೆ. ಇನ್ನು ಭಾರತವೂ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಭಾರೀ ಪ್ರಮಾಣದ ಪ್ರವಾಹವೂ ಕಾಣಿಸಿಕೊಂಡಿದೆ.

ಒಂದು ಕಡೆ ಕಾಳ್ಗಿಚ್ಚು, ಮತ್ತೂಂದು ಕಡೆಯಲ್ಲಿ ಪ್ರವಾಹ ಈ ಎರಡೂ ಸನ್ನಿವೇಶಗಳು ಭೂತಾಪಮಾನ ಏರಿಕೆಯಿಂದಲೇ ಆಗಿರುವಂಥದ್ದು ಎಂಬುದು ವಿಜ್ಞಾನಿಗಳ ಆತಂಕ. ಅಂದರೆ, ತಾಪಮಾನ ಏರಿಕೆಯಿಂದಾಗಿ ಸಮುದ್ರದ ನೀರು ಹೆಚ್ಚು ಆವಿಯಾಗಿ, ಅದು ಮೋಡವಾಗಿ ಶೇಖರಣೆಯಾಗುತ್ತಿದೆ. ಇದರಿಂದಾಗಿಯೇ ಹೆಚ್ಚು ಮಳೆ ಸುರಿಯುತ್ತಿದೆ ಎಂಬ ವಾದವೂ ಕೇಳಿಬರುತ್ತಿದೆ.

Advertisement

ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಪ್ರತಿಯೊಂದು ದೇಶವೂ ಮಾಲಿನ್ಯ ನಿಯಂತ್ರಣ, ಕೈಗಾರಿಕೀಕರಣ, ನಗರೀಕರಣದ ಬಗ್ಗೆ ಯೋಚನೆ ಮಾಡಲೇಬೇಕಾಗಿದೆ. ಕಲ್ಲಿದ್ದಲು ಬಳಕೆ ಪ್ರಮಾಣವೂ ಕಡಿಮೆಯಾಗಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ. ಅಲ್ಲದೆ, ಸೌರ ವಿದ್ಯುತ್‌ ಸೇರಿದಂತೆ, ನೈಸರ್ಗಿಕ ಮೂಲಗಳಿಂದ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಗಮನ ನೀಡಬೇಕು ಎಂಬ ಒತ್ತಾಯಗಳು ಎಲ್ಲೆಡೆಯಿಂದ ಕೇಳುತ್ತಿವೆ. ಆಗಷ್ಟೇ ನಾವು ಜಾಗತಿಕ ತಾಪಮಾನವನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಆಗ ಪ್ರಕೃತಿ ವಿಕೋಪಗಳನ್ನೂ ಕಡಿಮೆ ಮಾಡಬಹುದು ಎಂಬುದು ವಿಜ್ಞಾನಿಗಳ ಮತ್ತು ಪರಿಸರವಾದಿಗಳ ಮಾತಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಗಮನ ನೀಡಬೇಕು ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next