ದಾವಣಗೆರೆ: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳುವಾಗ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ನಿಯಮಾನುಸಾರ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘ ಸೋಮವಾರ ಸಾಂಕೇತಿಕ ಧರಣಿ ಮೂಲಕ ಒತ್ತಾಯಿಸಿದೆ.
ಉದ್ಯೋಗ ಖಾತರಿ ಯೋಜನೆ ಪ್ರಾರಂಭವಾದ ದಿನದಿಂದ ಸರ್ಕಾರದ ನಿರ್ದೇಶನ, ಅಧಿಕಾರಿಗಳ ಮೌಖೀಕ ಆದೇಶ, ಜನಪ್ರತಿನಿಧಿಗಳ ಆಶಯದಂತೆ ಕೆಲಸ ಮಾಡಲಾಗುತ್ತಿದೆ. ಇದರಿಂದ ಅಧಿಕಾರಿಗಳು ವಿನಾ ಕಾರಣ ನಿಯಮ ಉಲ್ಲಂಘನೆ ಆರೋಪ ಎದುರಿಸಬೇಕಾದ ಸ್ಥಿತಿ ಬಂದಿದೆ ಎಂದು ದೂರಿದ ಸಂಘದ ಪದಾಧಿಕಾರಿಗಳು, ಈ ಕುರಿತು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆ ಪುರಸ್ಕರಿಸಲು ಕೋರಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ. ಸಂಗಮೇಶ್, ಉದ್ಯೋಗ ಖಾತ್ರಿ ನಿಯಮ ಉಲ್ಲಂಘಿಸುತ್ತಿರುವುದರಿಂದ ವಿನಾಕಾರಣ ಪಿಡಿಪಗಳು, ಇತರೆ ಅಧಿಕಾರಿಗಳು ಇಲಾಖಾ ವಿಚಾರಣೆಗೆ ಒಳಪಡಬೇಕಾಗುತ್ತಿದೆ.
ಸಾಮಾಜಿಕ ಲೆಕ್ಕ ಪರಿಶೋಧನೆಯ ಅವೈಜ್ಞಾನಿಕ ನಿರ್ಧಾರದಿಂದ ನೌಕರರ ಸೇವೆ, ಪದೋನ್ನತಿಗೆ ತೊದರೆ ಆಗುತ್ತಿದೆ. ಅಮಾನತು ಶಿಕ್ಷೆಗೂ ಸಹ ಗುರಿಯಾಗಬೇಕಾದ ಸ್ಥಿತಿ ಇದೆ. ಕೆಲ ಪ್ರಕರಣಗಳಲ್ಲಿ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಅನಿವಾರ್ಯತೆ ಸಹ ಬಂದಿವೆ ಎಂದು ತಮ್ಮ ಅಳಲು ತೋಡಿಕೊಂಡರು.
ನೌಕರರು, ಅಭಿಯಂತರರು, ಅಧಿಕಾರಿಗಳ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಜರುಗುತ್ತಿವೆ. ಕರ್ತವ್ಯ ನಿರ್ವಹಿಸಲು ಆಗದಂತಹ ಸ್ಥಿತಿ ಇದೆ. ಇಡೀ ಯೋಜನೆ ನೋಡಿಕೊಳ್ಳುವುದೇ ನಮ್ಮ ನಿತ್ಯ ಕೆಲಸವಾಗಿ ಹೋಗಿದೆ. ಇದನ್ನು ಅಧಿಕಾರಿಗಳು, ಸರ್ಕಾರ ಅರ್ಥಮಾಡಿಕೊಳ್ಳಬೇಕಿದೆ ಎಂದು ಅವರು ಕೋರಿದರು.
ಕಡ್ಡಾಯ ಮಾನವ ದಿನ ಸೃಜಿಸುವುದು ಸಾಧ್ಯವಿಲ್ಲ. ಕೂಲಿ ಕೋರಿ ಬಂದ ಎಲ್ಲಾ ಕೂಲಿಕಾರರಿಗೆ ನಿಯಮಾನುಸಾರ ಕೂಲಿ ಪಾವತಿಸಿ, ಕಾಮಗಾರಿ ನಿರ್ವಹಿಸಲಾಗುವುದು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ವಿವೇಕಾನಂದ, ಖಜಾಂಚಿ ಎಂ.ಆರ್. ಸಿದ್ಧಪ್ಪ, ಉಪಾಧ್ಯಕ್ಷರಾದ ಪ್ರೇಮ, ಕೆ.ಎಸ್. ರಮೇಶ್, ಉಮೇಶ್, ಶ್ರೀನಿವಾಸ, ಸಹ ಕಾರ್ಯದರ್ಶಿ ಮಂಜುನಾಥ, ಸಂಘಟನಾ ಕಾರ್ಯದರ್ಶಿಗಳಾದ ರಂಗಸ್ವಾಮಿ, ಜಯ್ಯಣ್ಣ, ಮಂಜುನಾಥ ಧರಣಿ ನೇತೃತ್ವ ವಹಿಸಿದ್ದರು.