Advertisement

Vahical Riders: ಸಂಚಾರ ನಿಯಮ ಉಲ್ಲಂಘಿಸಿದರೆ ಲೈಸನ್ಸ್‌ ರದ್ದು: ಸಿಎಂ ಸಿದ್ದರಾಮಯ್ಯ

12:09 AM Sep 24, 2024 | Team Udayavani |

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತೀ ವೇಗವಾಗಿ ವಾಹನ ಚಲಾಯಿಸುವುದರ ಸಹಿತ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ’ ಅಡಿಯಲ್ಲಿ ನೂತನ 65 ಆ್ಯಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ ನಮ್ಮ ಸರಕಾರ ರಸ್ತೆ ಸುರಕ್ಷೆಗೆ ಆದ್ಯತೆ ನೀಡುತ್ತಿದ್ದು, ಅಪಘಾತ ಪ್ರಕರಣಗಳಲ್ಲಿ ಸಾವುನೋವು ತಡೆಯಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಆದರೆ ಸಂಚಾರ ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಹೀಗಾಗಿ ಗಂಭೀರ ಸ್ವರೂಪದಲ್ಲಿ ಸಂಚಾರ ನಿಯಮ ಉಲ್ಲಂ ಸುವವರ ವಾಹನ ಚಾಲನೆ ಪರವಾನಿಗೆ ರದ್ದು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸೂಚನೆ ನೀಡಿದರು.

ವಿದೇಶಗಳಲ್ಲಿ ರಸ್ತೆ ಸುರಕ್ಷೆಯ ನಿಯಮಗಳನ್ನು ಉಲ್ಲಂಘಿಸಿದ ತತ್‌ಕ್ಷಣ ಪರವಾನಿಗೆ ರದ್ದು ಮಾಡುತ್ತಾರೆ. ನಮ್ಮಲ್ಲೂ ಇದೇ ಕ್ರಮ ಅನುಸರಿಸಬೇಕು. ಬಳಿಕ ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ. ಸಾರಿಗೆ ಇಲಾಖೆ ಮತ್ತು ಪೊಲೀಸರು ಈ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕ್ರಮಗಳಿಂದ ಅಪಘಾತಗಳ ಸಂಖ್ಯೆ ತಗ್ಗಿಸಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ಸಾಗಿಸುವ ಉದ್ದೇಶದಿಂದ 65 ಆ್ಯಂಬುಲೆನ್ಸ್‌ಗಳನ್ನು ಆರೋಗ್ಯ ಇಲಾಖೆಯಿಂದ ಲೋಕಾರ್ಪಣೆ ಮಾಡುತ್ತಿದ್ದೇವೆ. ಈ ಸೇವೆಯನ್ನು ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೆ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳಿಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Advertisement

ರಾಜ್ಯದಲ್ಲಿ ಪ್ರತೀ ವರ್ಷ ಸರಾಸರಿ 40 ಸಾವಿರ ಅಪಘಾತಗಳು ಸಂಭವಿಸುತ್ತಿದ್ದು, ಪ್ರತೀ ವರ್ಷ ಸರಾಸರಿ ಹತ್ತು ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳಿಂದಾಗಿ ಅನೇಕರು ಜೀವಮಾನವಿಡೀ ನರಳಬೇಕಾಗುತ್ತದೆ. ಅಪಘಾತ ನಡೆದ ಒಂದು ತಾಸಿನ ಒಳಗೆ ಸರಿಯಾದ ಚಿಕಿತ್ಸೆ ಲಭಿಸಿದರೆ ಪ್ರಾಣ ಹಾನಿ ತಪ್ಪಿಸಬಹುದು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.


ದೀಪ ಉರಿಸಲು ಬಿಡದ ಗಾಳಿ!

ಕಾರ್ಯಕ್ರಮದ ಉದ್ಘಾಟನೆಗೆ ಮುಖ್ಯಮಂತ್ರಿಗಳು ದೀಪ ಬೆಳಗಲು ಮುಂದಾದಾಗ ಗಾಳಿ ಬೀಸುತ್ತಿದ್ದುದರಿಂದ ಮೋಂಬತ್ತಿ ಉರಿಸಲು ಹಲವು ಬಾರಿ ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ದೀಪದಲ್ಲಿದ್ದ ಹಲವು ಬತ್ತಿಗಳನ್ನು ಒಂದೆಡೆ ಕೂಡಿಸಿ, ರಾಮಲಿಂಗಾರೆಡ್ಡಿ ಮತ್ತು ದಿನೇಶ್‌ ಗುಂಡೂರಾವ್‌ ತಮ್ಮ ಕೈಗಳನ್ನು ಗಾಳಿ ಬೀಸುವ ದಿಕ್ಕಿಗೆ ಅಡ್ಡವಿಟ್ಟ ಬಳಿಕ ಮುಖ್ಯಮಂತ್ರಿಗಳಿಗೆ ದೀಪ ಬೆಳಗಲು ಸಾಧ್ಯವಾಯಿತು.

ಆ್ಯಂಬುಲೆನ್ಸ್‌ ಕಾರ್ಯಾಚರಣೆ ಹೇಗೆ?
ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಲಾಗಿದ್ದು, ಹತ್ತಿರದ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಿಗೆ ಆ್ಯಂಬುಲೆನ್ಸ್‌ ನೀಡಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಇದರ ಸೇವೆ ಲಭ್ಯವಾಗಲಿದೆ. ಇವು ಸುಸಜ್ಜಿತ ಉಪಕರಣ ಮತ್ತು ಔಷಧ ಇತ್ಯಾದಿ ಹೊಂದಿರಲಿವೆ. ಸದ್ಯ ರಾಜ್ಯದ 26 ಜಿಲ್ಲಾಸ್ಪತ್ರೆಗಳಿಗೆ ಸುಧಾರಿತ ಆ್ಯಂಬುಲೆನ್ಸ್‌ ಒದಗಿಸಲಾಗಿದ್ದು, ಉಳಿದ 39 ಪ್ರಾಥಮಿಕ ಆ್ಯಂಬುಲೆನ್ಸ್‌ಗಳನ್ನು 20 ಜಿಲ್ಲೆಗಳ 39 ತಾಲೂಕು ಆಸ್ಪತ್ರೆಗಳಿಗೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next