Advertisement

ಸಂಪುಟ ವಿಸ್ತರಣೆ ಆಡಳಿತಕ್ಕೆ ಅಡ್ಡಿಯಾಗದಿರಲಿ

12:48 AM Aug 21, 2019 | Team Udayavani |

ರಾಜ್ಯ ಬಿಜೆಪಿ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಾಗಿದೆ. ಇದರ ಬೆನ್ನಲ್ಲೇ ಆಕಾಂಕ್ಷಿಗಳ ಅಸಮಾಧಾನವೂ ಸ್ಫೋಟಗೊಂಡಿದೆ. ಸದ್ಯಕ್ಕೆ ಸರ್ಕಾರಕ್ಕೆ ಅಪಾಯ ತಂದೊಡ್ಡುವ ಅಥವಾ ಪಕ್ಷಕ್ಕೆ ಸವಾಲು ಹಾಕುವ ಮಟ್ಟದಲ್ಲಿ ಭಿನ್ನಮತ ಭುಗಿಲೇಳುವುದು ಆನುಮಾನ. ಏಕೆಂದರೆ, ಈ ಹಂತದಲ್ಲಿ ಅತೃಪ್ತರ ನಾಯಕತ್ವ ವಹಿಸಿಕೊಳ್ಳುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ.

Advertisement

ಆದರೆ, ಮುಂದಿನ ದಿನಗಳಲ್ಲಿ ಸಮಸ್ಯೆಯಂತೂ ಶುರುವಾಗಬಹುದು. ಏಕೆಂದರೆ ಮುಖ್ಯಮಂತ್ರಿ ಸೇರಿದಂತೆ ಒಟ್ಟಾರೆ ಸಚಿವ ಸಂಪುಟದ ಸಂಖ್ಯಾಬಲದ 18ರಲ್ಲಿ ಎಂಟು ಲಿಂಗಾಯತರಿಗೆ ಅವಕಾಶ ನೀಡಲಾಗಿದೆ. ಆದರೂ, 16 ಮಂದಿ ಪಂಚಮಸಾಲಿ ಲಿಂಗಾಯತರು ಗೆದ್ದಿದ್ದರೂ ಯಾರಿಗೂ ಅವಕಾಶ ಕೊಟ್ಟಿಲ್ಲ ಎಂಬ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ ಆ ಸಮುದಾಯದ ಶಾಸಕರೊಬ್ಬರು.

ರಾಜ್ಯದ ಲಿಂಗಾಯತ ಸಮುದಾಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವುದು ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿ ರುವುದು ಪಂಚಮಸಾಲಿ ಲಿಂಗಾಯತರೇ. ಹೀಗಾಗಿ, ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತೆ ಇದ್ದಂತಿದೆ.ಇನ್ನು, ಮೊದಲಿನಿಂದಲೂ ತಮ್ಮ ಭಾಗವನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಕರಾವಳಿ ಭಾಗದ ಜನರಿಗೆ ಈಗ ಬಿಜೆಪಿಯ ಆಡಳಿತದಲ್ಲೂ ಅಸಮಾಧಾನವೇ ಎದುರಾಗಿದೆ. ಹದಿನೆಂಟು ಬಿಜೆಪಿ ಶಾಸಕರಿದ್ದರೂ ಏಕೆ ಈ ತಾರತಮ್ಯ ಎಂದವರು ಪ್ರಶ್ನಿಸುತ್ತಿದ್ದಾರೆ. ಉಡುಪಿ ಜಿಲ್ಲೆಯಿಂದ ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸಪೂಜಾರಿ ಅವರಿಗೆ ಮಾತ್ರ ಅವಕಾಶ ನೀಡಲಾಗಿದೆ. ದ.ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಂಪುಟದ ಬಗ್ಗೆ ತೀವ್ರ ಬೇಸರ ವ್ಯಕ್ತವಾಗುತ್ತಿದೆ. ಅತ್ತ ಕೊಡಗನ್ನೂ ಕಡೆಗಣಿಸಲಾಗಿದೆ.

ಹಳೇ ಮೈಸೂರು ಭಾಗದಲ್ಲೂ ಬೆಂಗಳೂರು ನಗರ ಬಿಟ್ಟರೆ ಬೇರೆ ಜಿಲ್ಲೆಗಳಿಗೆ ಅವಕಾಶ ಕಲ್ಪಿಸಿಲ್ಲ. ಹದಿನೇಳು ಜಿಲ್ಲೆಗಳಿಗೆ ಒಂದೇ ಒಂದು ಸಚಿವ ಸ್ಥಾನವೂ ಸಿಕ್ಕಿಲ್ಲ. ಹೈದ್ರಾಬಾದ್‌ ಕರ್ನಾಟಕಕ್ಕೂ ಒಂದೇ ಒಂದು ಸ್ಥಾನವೂ ದೊರೆತಿಲ್ಲ. ಎರಡನೇ ಹಂತದ ವಿಸ್ತರಣೆ ಬಾಕಿ ಇದ್ದು ನಿಮಗೇ ಅವಕಾಶ ಎಂದು ಆಕಾಂಕ್ಷಿಗಳು, ಅಸಮಾಧಾನಿತರನ್ನು ಸಮಾಧಾನ ಪಡಿಸಬಹುದಾದರೂ ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಕಾದು ನೋಡಬೇಕಾಗಿದೆ.

ಏಕೆಂದರೆ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯವರೇ 105 ಶಾಸಕರಿದ್ದಾರೆ. ಇವರ ಜತೆ ಹದಿನೇಳು ಅನರ್ಹಗೊಂಡಿರುವ ಶಾಸಕರು ಪರೋಕ್ಷವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿದ್ದು ಅವರೂ ಮುಂದಿನ ದಿನಗಳಲ್ಲಿ ತಮ್ಮ ಪ್ರಕರಣ ಇತ್ಯರ್ಥಗೊಂಡ ನಂತರ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ, ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾದಿ ಅವರಂದುಕೊಂಡಷ್ಟು ಸುಲಭವಾಗಿಲ್ಲ ಎಂದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

Advertisement

ಈಗಿನ ಸನ್ನಿವೇಶದಲ್ಲಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ನಾಯಕರು ಅಸಮಾಧಾನಿತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರೆ ಸರ್ಕಾರಕ್ಕೆ ಯಾವುದೇ ತೊಂದರೆ ಇರದು. ಇಲ್ಲದಿದ್ದರೆ ಅಸಮಾಧಾನಿತರ ಸಭೆ, ರಹಸ್ಯ ಚರ್ಚೆ, ಹೋಟೆಲ್-ರೆಸಾರ್ಟ್‌ಗೆ ಸ್ಥಳಾಂತರ ವಿದ್ಯಮಾನಗಳು ನಡೆದರೆ ಈ ಹಿಂದೆ ಇದ್ದ ಬಿಜೆಪಿ ಸರ್ಕಾರದ ಕಥೆಯಾದಂತಾಗುತ್ತದೆ. ಅಂತಹ ಘಟನೆಗಳು ಮರುಕಳಿಸಲು ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದುಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ.

ರಾಜ್ಯದ ಜನತೆಯೂ ಬಿಜೆಪಿ ಸರ್ಕಾರದ ಬಗ್ಗೆ ತುಂಬಾ ನಿರೀಕ್ಷೆಯಲ್ಲಿದ್ದಾರೆ. ರಾಜ್ಯದಲ್ಲಿ ಒಂದೆಡೆ ಪ್ರವಾಹ, ಮತ್ತೂಂದೆಡೆ ಬರ ಪರಿಸ್ಥಿತಿ ಇದೆ. ಜನರು ಸಂಕಷ್ಟದಲ್ಲಿದ್ದಾರೆ. ಆಡಳಿತ ಯಂತ್ರ ಚುರುಕುಗೊಳಿಸಿ ಜನರ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕಾಗಿದೆ. ಭಿನ್ನಮತಕ್ಕೆ ಅವಕಾಶ ಮಾಡಿಕೊಡದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಎಲ್ಲ ಶಾಸಕರು ಕೈಜೋಡಿಸುವುದು ಅಗತ್ಯ.

Advertisement

Udayavani is now on Telegram. Click here to join our channel and stay updated with the latest news.

Next