Advertisement

ವಾಸ್ತವ ಬದುಕಾಗಲಿ

01:00 AM Aug 12, 2019 | sudhir |

ಭೂಮಿಯ ಸಕಲ ಜೀವರಾಶಿಗಳಲ್ಲಿ ಯೋಚಿಸಿ ಕಾರ್ಯರೂಪಿಸುವ ವರ ಮನುಷ್ಯನಿಗೆ ಮಾತ್ರವಂತೆ, ಆದರೆ ಅದರ ಬೆನ್ನಲ್ಲೆ ಚಿಂತೆ ಎಂಬ ಶಾಪವು ಅಂಟಿಕೊಂಡಿದೆ. ಯೋಚನೆ ಮತ್ತು ಚಿಂತೆ ಒಂದೇ ಅನಿಸಿದರು ಅವುಗಳ ಪರಿಣಾಮ ಬೆರೆಯದ್ದೆ ಆಗಿರುತ್ತದೆ. ಇಲ್ಲಿ ಯಾವುದೇ ಒಂದು ಕಾರ್ಯದ ಬಗ್ಗೆ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಯೋಚನೆ ಎಂದರೆ, ಹಿಂದೆ ಘಟಿಸಿಹೋದ ಯಾವುದೋ ಒಂದು ನೋವು ವಿಫ‌ಲತೆಗಳನ್ನು ಸದಾ ಯೋಚನೆ ಮಾಡಿ ಕೊರಗುವುದನ್ನು ಚಿಂತೆ ಎಂದು ಹೇಳಬಹುದು.

Advertisement

ಯಾವುದೋ ಒಂದು ಮೂಲೆಯಲ್ಲಿ ಚಿಂತಿಸುತ್ತಾ ಕೂರುವುದನ್ನು ಬಿಟ್ಟು ಸುತ್ತಮುತ್ತಲಿನ ಜನರ ನಡುವೆ ಪ್ರಕೃತಿಯ ಸೊಬಗಿನ ಮಧ್ಯೆ ಬೆರೆತು ವಾಸ್ತವದಲ್ಲಿ ಜೀವಿಸಿದಾಗ ಮನಸ್ಸು, ದೇಹ ಎರಡೂ ಆರೋಗ್ಯವಾಗಿರುತ್ತವೆ.ಕಾಲಚಕ್ರದಲ್ಲಿ ಘಟಿಸಿಹೋದ ಘಟನೆಗಳನ್ನು ಪುನಃ ಹೋಗಿ ಸರಿಪಡಿಸಲು ಸಾಧ್ಯವಿಲ್ಲವೆಂದಾಗ ಅದನ್ನು ಚಿಂತಿಸುವುದಕ್ಕಿಂತ ಮುಂದಿನ ಜೀವನವನ್ನು ಯೋಚಿಸುವುದು ಒಳಿತು. ಏಕೆಂದರೆ ಈ ನೋವುಗಳು ಯಾರಿಗೆ ಇಲ್ಲ ಹೇಳಿ. ಕುಚೇಲನಿಂದ ಹಿಡಿದು ಕುಬೇರನವರೆಗೆ ಎಲ್ಲರೂ ಒಂದಲ್ಲ ಒಂದು ಕೊರಗಿನಲ್ಲಿ ಇರುವವರೇ, ಹಾಗೆಂದ ಮಾತ್ರಕ್ಕೆ ಜೀವನವೇ ಮುಗಿದು ಹೋಯಿತು ಎಂದು ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ.

ಒಬ್ಬ ಬಸ್‌ ಚಾಲಕನನ್ನು ನೋಡಿ ಅವನು ಎಷ್ಟೇ ಚಿಂತೆಗಳಿದ್ದರೂ ವಾಸ್ತವದಲ್ಲೇ ವಾಹನ ಚಲಾಯಿಸುತ್ತಿರುತ್ತಾನೆ. ಏಕೆಂದರೆ ಅವನಿಗೆ ಚಲಿಸಿದ ದಾರಿಗಿಂತ ಮುಂದಿನ ದಾರಿಯಲ್ಲಿ ಯಾವುದೇ ಅನಾಹುತ ಆಗದಂತೆ ಚಲಿಸಿ ಪ್ರಯಾಣಿಕರನ್ನು ಅವರ ಸ್ಥಳಗಳಿಗೆ ತಲುಪಿಸುವುದೇ ಮುಖ್ಯವಾಗಿರುತ್ತದೆ. ನಮ್ಮ ನಿತ್ಯ ಜೀವನವು ಅಷ್ಟೆ ಕಳೆದು ಹೋದ ನೋವುಗಳಲ್ಲಿ ಜೀವನ ನಡೆಸುವುದಕ್ಕಿಂತ ಮುಂಬರುವ ಸನ್ನಿವೇಶಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಯಾಕೆಂದರೆ ಸಾಧಿಸುವವನಿಗೆ ಆಯಸ್ಸು ತುಂಬಾ ಕಡಿಮೆ. ಮನುಷ್ಯ ಎಷ್ಟು ವರ್ಷ ಬದುಕಿದ ಎನ್ನುವುದಕ್ಕಿಂತ ಏನು ಮಾಡಿದ ಎನ್ನುವುದೇ ಇತಿಹಾಸ ಪುಟದಲ್ಲಿ ದಾಖಲಾಗುತ್ತದೆ. ಆದ್ದರಿಂದ ಸದಾ ಚಿಂತಿಸುವುದನ್ನು ಬಿಟ್ಟು ವಾಸ್ತವದಲ್ಲಿ ಜೀವಿಸಿ.

ಕೊನೆಯದಾಗಿ ಒಂದು ಮಾತು, ಚಿಂತೆ ಮತ್ತು ಚಿತೆಗಳೆರಡರ ಮಧ್ಯೆ ತುಂಬಾ ವ್ಯತ್ಯಾಸವೇನಿಲ್ಲ. ಚಿತೆ ಸತ್ತ ದೇಹವನ್ನು ಸುಟ್ಟರೆ ಚಿಂತೆ ಜೀವ ಇರುವ ಮನುಷ್ಯನನ್ನು ಸುಡುತ್ತದೆ.

– ಮೋಹನ್‌ ಕೋಟ್ಯಾನ್‌ ಪಡ್ಡಂದಡ್ಕ

Advertisement
Advertisement

Udayavani is now on Telegram. Click here to join our channel and stay updated with the latest news.

Next