ಅನುಮಾನಗಳೂ ಉದ್ಭವವಾಗಿವೆ.
Advertisement
ಪ್ರಜಾಪ್ರಭುತ್ವ ರಾಷ್ಟ್ರವೆಂದರೆ ಅಲ್ಲಿ ಪರ-ವಿರೋಧಕ್ಕೆ ಎಂದಿಗೂ ಮನ್ನಣೆ ಇದ್ದೇ ಇರುತ್ತದೆ. ಹಾಗೆಯೇ ಸರ್ಕಾರ ಮಾಡಿದ ಎಲ್ಲ ಕಾನೂನುಗಳನ್ನು ಜನ ಒಪ್ಪಲೇಬೇಕು ಎಂದೇನಿಲ್ಲ. ಇಂಥ ಸಂದರ್ಭಗಳಲ್ಲಿ ಸರ್ಕಾರದ ನಿರ್ಧಾರಗಳನ್ನು ಪ್ರಶ್ನಿಸುವ, ಅವುಗಳನ್ನು ವಿರೋಧಿಸಿ ಪ್ರತಿಭಟನೆ ಮಾಡುವ ವರ್ಗವೂ ಇರುತ್ತದೆ. ಇದು ಆಗಲೇಬೇಕು ಕೂಡ. ಆದರೆ, ಪ್ರತಿಭಟನೆ ಎಂದಾಕ್ಷಣ, ಅಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವ ಅಧಿಕಾರ ಸಿಕ್ಕಿದೆ ಎಂದರ್ಥವಲ್ಲ.
Related Articles
Advertisement
ಭಾರತದಲ್ಲಿ ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕಾಗಿದೆ. ಕಳೆದ ಎರಡು ತಿಂಗಳಿಂದ ಶಾಹಿನ್‌ಬಾಘ…ನಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಪ್ರತಿಭಟನಾಕಾರರು ಪ್ರಮುಖ ರಸ್ತೆಯೊಂದನ್ನು ತಡೆದಿದ್ದರೂ, ಕೇಂದ್ರ ಸರ್ಕಾರ ಇದುವರೆಗೆ ಅವರನ್ನು ತಡೆಯುವ ಕೆಲಸ ಮಾಡಿಲ್ಲ. ಆದರೆ, ಯಾವುದೇ ಪ್ರತಿಭಟನಾಕಾರರು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾದರೆ ಸರ್ಕಾರ ಸಹಿಸುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕಟ್ಟಿಟ್ಟ ಬುತ್ತಿ ಎಂಬ ಎಚ್ಚರಿಕೆಯನ್ನೂ ಕಿಶನ್ ರೆಡ್ಡಿ ನೀಡಿದ್ದಾರೆ.
ಹೌದು, ಕಿಶನ್ ರೆಡ್ಡಿ ಹೇಳಿದಂತೆ, ಶಾಂತಿಯುತ ಪ್ರತಿಭಟನೆ ಎಲ್ಲರ ಹಕ್ಕು. ಆದರೆ, ಸಮಾಜದಲ್ಲಿ ಅಶಾಂತಿ ನಿರ್ಮಿಸುವುದು ಸರಿಯಲ್ಲ. ಈ ಎರಡು ದಿನದ ಹಿಂಸಾಚಾರದಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ. ದೆಹಲಿಯ ಸಾಮಾನ್ಯ ಜನ ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ಪ್ರತಿಭಟನೆಯ ಹೆಸರಿನಲ್ಲಿ ಜನಸಾಮಾನ್ಯರನ್ನು ಗೋಳೊಯ್ದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ.
ಇನ್ನು ಟ್ರಂಪ್ ಆಗಮನದ ಹೊತ್ತಲ್ಲೇ ಇಂಥ ಹಿಂಸಾತ್ಮಕ ಕೆಲಸ ಮಾಡುವುದರಿಂದ ಅಮೆರಿಕ ಅಧ್ಯಕ್ಷರ ಗಮನ ಸೆಳೆಯಬಹುದು ಎಂಬುದು ತಪ್ಪು ಗ್ರಹಿಕೆ. ಏಕೆಂದರೆ, ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಟ್ರಂಪ್ ಉತ್ತರಿಸಿರುವುದು ಹೀಗೆ: ಸಿಎಎ ಸಂಬಂಧಿ ಹಿಂಸಾಚಾರದ ವಿಚಾರ ನನ್ನ ಕಿವಿಗೆ ಬಿದ್ದಿದೆ. ಆದರೆ, ಇದು ಭಾರತಕ್ಕೆ ಸಂಬಂಧಿಸಿದ ವಿಚಾರ. ಮೋದಿ ಅವರು ಎಲ್ಲರ ಧಾರ್ಮಿಕ ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಹೀಗಾಗಿ, ಟ್ರಂಪ್‌ರಿಂದ ಯಾವುದೋ ಪರಿಹಾರ ಸಿಗಬಹುದು ಎಂದು ಇಂಥ ಕ್ರಮಕ್ಕೆ ಮುಂದಾಗಿದ್ದರೆ ಅದು ಪ್ರತಿಭಟನಾಕಾರರ ದಡ್ಡತನವಾದೀತು.
ಇದೆಲ್ಲದರ ಜತೆಗೆ, ರಾಜಕಾರಣಿಗಳೂ ಅಷ್ಟೇ, ತಾವೇನು ಮಾತನಾಡುತ್ತಿದ್ದೇವೆ ಎಂಬುದರ ಅರಿವು ಇರಲೇಬೇಕು. ದೆಹಲಿಯ ಎರಡು ದಿನದ ಹಿಂಸಾಚಾರಕ್ಕೆ ಸ್ಥಳೀಯ ಬಿಜೆಪಿ ಮುಖಂಡ ಕಪಿಲ್ ಮಿಶ್ರಾರತ್ತ ಬೆರಳು ತೋರಲಾಗುತ್ತಿದೆ. ಮಿಶ್ರಾ ಹಾಕಿದ ಬೆದರಿಕೆಯಿಂದಲೇ ಈ ಪ್ರಮಾಣದ ಹಿಂಸಾಚಾರವಾಗಿದೆ ಎಂಬ ಆರೋಪವೂ ಇದೆ. ಈ ಬಗ್ಗೆ ದೆಹಲಿಯ ಸಂಸದ ಗೌತಮ್ ಗಂಭೀರ್ ಕೂಡ ಅಸಮಾಧಾನ ವ್ಯಕ್ತಪಡಿಸಿ, ಈ ಘಟನೆಗೆ ಕುಮ್ಮುಕ್ಕು ನೀಡಿದವರು ಯಾವುದೇ ಪಕ್ಷದವರಾದರೂ ಸರಿಯೇ, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೇಬೇಕು ಎಂದಿದ್ದಾರೆ. ಏನೇ ಆದರೂ, ಪರಿಸ್ಥಿತಿ ಬೇಗನೇ ಹತೋಟಿಗೆ ಬರುವಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರಗಳ ಹಾಗೂ ಸಮಾಜದ ಜವಾಬ್ದಾರಿ.