ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಅದಕ್ಕೆ ತಕ್ಕಂತೆಯೇ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಹೆಚ್ಚಳವಾಗುತ್ತಿರುವ ವಾಹನಗಳ ಸಂಖ್ಯೆ ಮತ್ತು ಪಬ್ಲಿಕ್ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದೇ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡಬೇಕಾದ ಅನಿವಾರ್ಯತೆಗೆ ಕಾರಣ.
ನಗರದ ನವಭಾರತ ಸರ್ಕಲ್‌ನಿಂದ ಪಿವಿಎಸ್ ಸರ್ಕಲ್ ಕಡೆಗೆ ಬರುವ ರಸ್ತೆಯಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ನಿತ್ಯದ ಗೋಳಾಗಿದೆ. ಇದು ಅತ್ಯಂತ ವಾಹನದಟ್ಟಣೆ ಇರುವ ರಸ್ತೆಯಾಗಿದ್ದು, ಫುಟ್‌ಪಾತ್ ವ್ಯವಸ್ಥೆಯೂ ಇಲ್ಲದಿರುವುದರಿಂದ ಒಂದೆಡೆ ವಾಹನ ಸಂಚಾರ, ಇನ್ನೊಂದೆಡೆ ರಸ್ತೆಯಲ್ಲೇ ನಿಂತಿರುವ ವಾಹನಗಳ ನಡುವೆ ಜೀವ ಕೈಯಲ್ಲಿ ಹಿಡಿದುಕೊಂಡು ನಡೆದಾಡಬೇಕಾದ ಪರಿಸ್ಥಿತಿ ಪಾದಚಾರಿಗಳದ್ದಾಗಿದೆ. ವಾಹನಗಳು ಕೂಡಾ ಅತಿ ವೇಗದಲ್ಲಿ ಚಲಿಸುವುದರಿಂದ ಈ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಿದೆ.
ನಗರದ ಬಹುತೇಕ ಅಂಗಡಿಗಳು, ಖಾಸಗಿ ಕಟ್ಟಡಗಳು ರಸ್ತೆಗೆ ತಾಗಿಕೊಂಡೇ ಇರುತ್ತವೆ. ಕೆಲವು ಖಾಸಗಿ ಕಟ್ಟಡಗಳು ತಮ್ಮದೇ ಆದ ಪಾರ್ಕಿಂಗ್ ಜಾಗವನ್ನು ಹೊಂದಿದ್ದರೂ, ಅಲ್ಲಿ ತಮ್ಮದೇ ಉದ್ಯೋಗಿಗಳಿಗೆ ಮತ್ತು ಗ್ರಾಹಕರಿಗೆ ಮಾತ್ರ ಪಾರ್ಕಿಂಗ್ ಎಂಬುದಾಗಿ ಫಲಕ ಹಾಕಲಾಗುತ್ತದೆ. ಸಣ್ಣ ಪುಟ್ಟ ಅಂಗಡಿಗಳಿಗೆ ಸ್ವಂತ ಪಾರ್ಕಿಂಗ್ ಏರಿಯಾ ಇಲ್ಲ. ಇದರಿಂದ ಅಲ್ಲಿಗೆ ಆಗಮಿಸುವ ಗ್ರಾಹಕರು ರಸ್ತೆಯಲ್ಲೇ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಕೆಲವೆಡೆ ನೋ ಪಾರ್ಕಿಂಗ್ ಬೋರ್ಡ್ ಇದ್ದರೂ, ಬೋರ್ಡ್ ಬದಿಯಲ್ಲೇ ಪಾರ್ಕ್ ಮಾಡುವುದನ್ನೂ ಕಾಣಬಹುದು.
ಇತ್ತೀಚೆಗೆ ಮಂಗಳೂರು ನಗರದಲ್ಲಿ ಟೋಯಿಂಗ್ ವಾಹನ ಬಂದಿದ್ದು, ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ ವಾಹನ ಕೊಂಡೊಯ್ದು ದಂಡ ವಿಧಿಸಲಾಗುತ್ತಿದೆ. ನಗರದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸದೆ ದಂಡ ವಿಧಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
- ನವೀನ್ ಭಟ್ ಇಳಂತಿಲ