Advertisement
ಗ್ರಾಮದಲ್ಲಿನ ಜನಸಂಖ್ಯೆ 4,926. ಗ್ರಾಮಕ್ಕೆ ಒದಗಬೇಕಾದ ಮೂಲ ಸೌಕರ್ಯಗಳ ಪಟ್ಟಿ ದೊಡ್ಡದಿದೆ. ಮುಖ್ಯವಾಗಿ ಗ್ರಾಮದ ಗ್ರಾಮ ಕರಣಿಕರ ಕಚೇರಿ. ಅದು ಐವತ್ತು ವರ್ಷಕ್ಕೂ ಹಳೆಯದು. ಓಬಿರಾಯನ ಕಾಲದ ಕಚೇರಿಯಂತಿದ್ದು, ವಿದ್ಯುತ್ ಸಂಪರ್ಕ ಇಲ್ಲ, ಕಟ್ಟಡಕ್ಕೆ ಸಾರಣೆ ಮಾಡಿಲ್ಲ, ಕೆಂಪು ಕಲ್ಲಿನಿಂದ ಕಟ್ಟಿದ ಕಟ್ಟಡದಲ್ಲಿ ಕಲ್ಲಿನ ತುಣಕು ಬೀಳಲಾರಂಭಿಸಿದೆ. ವಿದ್ಯುತ್ ಇಲ್ಲದ ಮೇಲೆ ಕಂಪ್ಯೂಟರ್ ವ್ಯವಸ್ಥೆ ಹೇಗೆ ಬಂದೀತು? ಆದ್ದರಿಂದ ಎಲ್ಲದಕ್ಕೂ 25 ಕಿ.ಮೀ. ದೂರ ಗ್ರಾಮಸ್ಥರು ಅಲೆದಾಡಬೇಕಿದೆ. ಹಾಗಾಗಿ ಹೊಸ ವಿ.ಎ. ಕಚೇರಿ ಸ್ಥಾಪಿಸಬೇಕಿದೆ.
Related Articles
Advertisement
ಗ್ರಾಮದಲ್ಲಿ ಸುಮಾರು 35 ವರ್ಷಗಳ ಹಿಂದೆ 10 ವರ್ಷಗಳ ಕಾಲ ಗ್ರಾಮೀಣ ಬ್ಯಾಂಕೊಂದು ಕಾರ್ಯ ನಿರ್ವಹಿಸುತ್ತಿತ್ತು. ಆ ಬಳಿಕ ಅದೂ ಸಹ ಪಟ್ಟಣ ಭಾಗಕ್ಕೆ ಸ್ಥಳಾಂತರಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಸ್ವಸಹಾಯ ಸಂಘಗಳ ಕಾರ್ಯ ಚಟುವಟಿಕೆ ಸೇರಿದಂತೆ ಹಲವಾರು ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್ ಒಂದರ ಶಾಖೆ ಅಗತ್ಯವಿದೆ. ಈ ಹಿಂದೆ ಗ್ರಾಮ ಸಭೆಯಲ್ಲಿಯೂ ಸಾರ್ವಜನಿಕರು ಆಗ್ರಹಿಸಿದ್ದರು. ಇದಲ್ಲದೆ ಗ್ರಾಮದಲ್ಲಿ ಎರಡು ಸರಕಾರಿ ಶಾಲೆ ಹಾಗೂ ಒಂದು ಖಾಸಗಿ ವಿದ್ಯಾಸಂಸ್ಥೆ ಇದೆ.
ಶಾಲೆಗೆ ಕೊಠಡಿ ಅಗತ್ಯ
ಬಡನ್ನೂರು ಸ.ಹಿ.ಉ.ಪ್ರಾ.ಶಾಲೆ ಶತಮಾನದ ಅಂಚಿ ನಲ್ಲಿದೆ. ಇಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೂರು ಕೊಠಡಿಗಳು ಅಗತ್ಯ ವಿದೆ. ಈಗಿನ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಮೇಲ್ಛಾ ವಣಿ ಗೆದ್ದಲು ಹಿಡಿದು ಬೀಳುವ ಹಂತದಲ್ಲಿದೆ.
ಹೊಸ ಸುಸಜ್ಜಿತ ಕಟ್ಟಡ ಅಗತ್ಯವಿದೆ. ಮೂರು ವರ್ಷಗಳಿಂದ ಸರಕಾರಕ್ಕೆ, ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿದರೂ ಇನ್ನೂ ಈಡೇರಿಲ್ಲ. ಹಾಗಾಗಿ ಈ ಶಾಲೆಗೆ ಹೊಸ ಕಟ್ಟಡ ಆಗಬೇಕಿದೆ. ಈ ಶಾಲೆಯಲ್ಲಿ ಪ್ರಸ್ತುತ 1ರಿಂದ 8ನೇ ತರಗತಿವರೆಗೆ ಕಲಿಕೆಗೆ ಅವಕಾಶವಿದೆ. ಮುಂದೆ ಇದನ್ನು ಕರ್ನಾಟಕ ಪಬ್ಲಿಕ್ ಸ್ಕೂಲಾಗಿ ಪರಿವರ್ತಿಸಬೇಕು ಎಂಬದು ಜನರ ಆಗ್ರಹ.
ಸಾರ್ವಜನಿಕ ಕ್ರೀಡಾಂಗಣ
ಗ್ರಾಮಕ್ಕೆ ಸಂಬಂಧಿಸಿದ ಹಾಗೆ ಮುಡಿಪಿನಡ್ಕ ತಲೆಂಜಿ ಭಾಗದಲ್ಲಿ ಒಂದು ಸಾರ್ವಜನಿಕ ಕ್ರೀಡಾಂಗಣ ಅಗಬೇಕಿದೆ. ಇದಲ್ಲದೇ, ಗ್ರಾಮದ ಕುದುರೆ ಮಜಲು ಎಂಬಲ್ಲಿ ರುದ್ರ ಭೂಮಿಗಾಗಿ ಗ್ರಾ.ಪಂ ಜಾಗ ಕಾದಿರಿಸಿ ಆವರಣ ಗೋಡೆಯನ್ನು ನಿರ್ಮಿಸಿದೆ. ಉಳಿದ ಕಟ್ಟಡ ಹಾಗೂ ಸೌಕರ್ಯ ಕಲ್ಪಿಸಬೇಕಿದೆ. ಇದಿನ್ನೂ ಸುಸಜ್ಜಿತಗೊಳ್ಳದ ಕಾರಣ, ಸುಮಾರು 10 ಕಿಮೀ ದೂರದ ನೆರೆಯ ಗ್ರಾಮದ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಪರಿಸ್ಥಿತಿ ಇದೆ. ಆದಷ್ಟು ಬೇಗ ರುದ್ರಭೂಮಿ ಸುಸಜ್ಜಿತಗೊಳ್ಳಬೇಕೆಂಬುದು ಜನರ ಆಗ್ರಹ.
ಪ್ರವಾಸಿ ತಾಣ
ಇಲ್ಲಿ ಪ್ರಮುಖ ದೇವಸ್ಥಾನ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ. ಶ್ರೀ ಕೂವೆ ಶಾಸ್ತಾರ ದೇವರು ಕೂವೆತೋಟ ಎಂಬಲ್ಲಿ ಉದ್ಭವ ಮೂರ್ತಿ. ವಿಷ್ಣು ಮೂರ್ತಿ ಕೂರ್ಮಾವತಾರ. ಅದರಿಂದ ಶ್ರೀ ಕೂವೆ ಶಾಸ್ತಾರ ವಿಷ್ಣು ಮೂರ್ತಿ ಎಂದು ಹೆಸರುವಾಸಿ. ದೇವಾ ಲಯದ ಬಡಗು ದಿಕ್ಕಿಗೆ ದೈಯಿಬೈದೆತಿ (ಸ್ವರ್ಣ ಕೇದಗೆ) ಮೊಟ್ಟೆ ರೂಪದಲ್ಲಿ ದೊರೆತ ಕೆರೆ ಮದಕ ಬಂಟಾಜೆ ಅರಣ್ಯ ಪ್ರದೇಶದಲ್ಲಿ ಇದೆ. ಪ್ರಸ್ತುತ ಕೆರೆ ಪಕ್ಕದಲ್ಲಿ ರಾಜರಾಜೇಶ್ವರೀ ಗುಡಿ ನಿರ್ಮಾಣ ಪ್ರಗ ತಿಯಲ್ಲಿದೆ. ಪೂರ್ವಕ್ಕೆ ಸಂಕಪಾಲ ಬೆಟ್ಟ, ದಕ್ಷಿಣಕ್ಕೆ ಕೋಟಿ-ಚೆನ್ನಯರು ಹುಟ್ಟಿದ ಬಲ್ಲಾಳರ ಅರಮನೆ, ಸತ್ಯ ಧರ್ಮ ಚಾವಡಿ, ಕೋಟಿ-ಚೆನ್ನಯರು ಆರಾಧಿ ಸುತ್ತ ಬಂದಿರುವ ನಾಗಬಿರ್ಮೆರ ಕ್ಷೇತ್ರವಿದೆ. ಸಂಕಪಾಲ ಬೆಟ್ಟದಿಂದ ಸುಮಾರು 2 ಕಿ.ಮೀ. ದೂರದಲ್ಲಿ ಕೋಟಿ-ಚೆನ್ನಯರನ್ನು ಸಾಕಿ ಸಲಹಿದ ಸಾಯನ ಬೈದ್ಯರ ಮನೆ, ನಂಬಿಕೊಂಡು ಬಂದ ಧೂಮಾವತಿ ದೇವಸ್ಥಾನ, ಮಾತೆ ದೇಯಿಬೈದೆತಿ ಧರ್ಮ ಚಾವಡಿ ಹಾಗೂ ಕೋಟಿ ಚೆನ್ನಯರ ಗರಡಿ ನಿರ್ಮಾಣಗೊಂಡು ಪಡುಮಲೆ ಕ್ಷೇತ್ರ ಪ್ರವಾಸಿ ತಾಣವಾಗಿದೆ.
ಅಭಿವೃದ್ಧಿ ಕಾಮಗಾರಿ: ಶಾಸಕರ, ಸಚಿವರ ಹಾಗೂ 15 ನೇ ಹಣಕಾಸು ಯೋಜನೆ ಅನುದಾನದಲ್ಲಿ ಮತ್ತು ಗ್ರಾ.ಪಂ. ಸ್ವಂತ ನಿಧಿ ಮೂಲಕ ಗ್ರಾಮ ಅಭಿವೃದ್ಧಿ ಮಾಡಲಾಗುತ್ತಿದೆ. ನರೇಗಾ ಯೋಜನೆಯಡಿ ಕೃಷಿ ಚಟುವಟಿಕೆಗೆ ಒತ್ತು ನೀಡಲಾಗುತ್ತದೆ. –ಸತೀಶ್ ಪೂಜಾರಿ ಹಲಕ್ಕೆ, ಅಧ್ಯಕ್ಷರು, ಬಡಗನ್ನೂರು ಗ್ರಾ.ಪಂ.
ಕಾಂಕ್ರೀಟ್ ರಸ್ತೆ ಅಗತ್ಯ: ಐತಿಹಾಸಿಕ ಸ್ಥಳ ಪಡುಮಲೆ ಅಭಿವೃದ್ಧಿ ಗೊಳ್ಳಬೇಕು. ಪ.ಪೂ. ಕಾಲೇಜು, ತಾಂತ್ರಿಕ ಕಾಲೇಜು ಮತ್ತು ತರಬೇತಿ ಕ್ರೀಡಾಂಗಣ ಆಗಬೇಕು. ರಸ್ತೆ ಅಭಿವೃದ್ಧಿಯೊಂದಿಗೆ ಈ ದಾರಿಯಲ್ಲಿ ಪುತ್ತೂರು -ಕಾಸರಗೋಡು ಕೆ.ಎಸ್. ಆರ್.ಟಿ.ಸಿ. ಬಸ್ ಆರಂಭಿಸಬೇಕು. ಕೆಲವು ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ ಆಗಬೇಕಿದೆ. -ವೈ.ಕೆ.ನಾಯ್ಕ ಪಟ್ಟೆ, ಸ್ಥಳೀಯರು
-ದಿನೇಶ್ ಬಡಗನ್ನೂರು