ಹೊಳೆನರಸೀಪುರ: ಕಡುಬಡವರು, ಶೋಷಿತ ವರ್ಗದವರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವು ಯೋಜನೆ ಅನುಷ್ಠಾನಕ್ಕೆ ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಫಲಾನುಭವಿಗಳಿಗೆ ಸಲಹೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆದೇಶ ಪತ್ರ ನೀಡಿದ ನಂತರ ಮಾತನಾಡಿ, ಬಹಳಷ್ಟು ಮಂದಿಗೆ ಇನ್ನೂ ವಾಸಿಸಲು ಸೂರು ಇಲ್ಲ, ತಿನ್ನಲು ದವಸ ಧಾನ್ಯ ಇಲ್ಲದೆ ಪರದಾಡುತ್ತಿದ್ದಾರೆ. ಅಂತಹ ವರಿಗೆ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವಿಧವೆಯರು, ವೃದ್ಧರು, ಅಂಗವಿಕಲರಿಗೆ ವೇತನದ ಆದೇಶ ಪತ್ರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ಮಾವಿನಕೆರೆ, ಕಡವಿನಕೋಟೆ ಗ್ರಾಮದವರು ಭೂಮಿ ಕಳೆದುಕೊಂಡವರು ಇಲ್ಲಿ ಇದ್ದರೆ, ಕಚೇರಿ ಒಳಭಾಗಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ಕೆಲವರು, ತಾವು ವಾಸ ಮಾಡಲು ಸೂರು ಇಲ್ಲ, ಆದ್ದರಿಂದ ನಮ್ಮಗೆ ಮನೆ ಗಳನ್ನು ಕೊಡುವಂತೆ ಮನವಿ ಮಾಡಿದರು.
ಇದನ್ನೂ ಓದಿ:ಎತ್ತಿನಹೊಳೆ ಕಾಮಗಾರಿ ಸ್ಥಳಕ್ಕೆ ಸಚಿವದ್ವಯರ ಭೇಟಿ
ಮನವಿ ಆಲಿಸಿದ ಶಾಸಕರು, ಸಮಸ್ಯೆ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದರು. ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್, ಗ್ರೇಡ್-2 ತಹಶೀಲ್ದಾರ್ ರವಿ, ಹಳೇಕೋಟೆ ಉಪತಹಶೀಲ್ದಾರ್ ಶಿವಕುಮಾರ್, ಹಳ್ಳಿಮೈಸೂರು ಉಪ ತಹಶೀಲ್ದಾರ್ ಸೋಮ ಶೇಖರ್, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.