ಬೆಂಗಳೂರು: ನಿರಂತರ ಮರ ಕಡಿಯುವ ಮೂಲಕ ಭೂ ದೇವಿಯ ಗರ್ಭಪಾತ ಮಾಡುತ್ತಿರುವ ಮನುಷ್ಯನ ಕೃತ್ಯಕ್ಕೆ ಕಡಿವಾಣ ಬೀಳಬೇಕು ಎಂದು ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟರು.
ಘಾಟಿ ಸುಬ್ರಹ್ಮಣ್ಯ ಸಮೀಪ ಇರುವ ರಾಷ್ಟ್ರೊತ್ಥಾನ ಗೋಶಾಲೆಯಲ್ಲಿ ಬೃಂದಾವನ ಅರಣ್ಯ ಯೋಜನೆಗೆ ಭಾನುವಾರ ಗಿಡನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗೋಮೂತ್ರದಲ್ಲಿ 700 ಜಾತಿಯ ಸೂಕ್ಷ್ಮ ಕಣಗಳಿವೆ ಇವು ಭೂಮಿಗೆ ಸೇರಿದರೆ ಫಲವತ್ತತ್ತೆ ಹೆಚ್ಚಾಗುತ್ತದೆ. ಗಿಡ ನೆಟ್ಟು ಗೋವಿನ ಸಗಣಿ ಹಾಗೂ ನೀರು ಹಾಕಿ ಚೆನ್ನಾಗಿ ಬೆಳೆಸಿದರೆ ಭೂದೇವಿಗೆ ಮದುವೆ ಮಾಡಿಸಿದಷ್ಟು ಪುಣ್ಯ ಬರುತ್ತದೆ ಎಂದರು.
ವನದುರ್ಗಿಯ ಗರ್ಭಪಾತ ಮಾಡಿ ವಿವಸ್ತ್ರಗೊಳಿಸುತ್ತಿದ್ದೇವೆ. ರಾಷ್ಟ್ರೊàತ್ಥಾನ ಗೋಶಾಲೆ ವೃಂದಾವನ ಅರಣ್ಯ ಯೋಜನೆ ಮೂಲಕ ವನದುರ್ಗಿಗೆ ಜೀವಕಳೆ ತುಂಬುತ್ತಿದ್ದಾರೆ. 1500 ವಿವಿಧ ಗಿಡಗಳನ್ನು ನಡೆವ ಮೂಲಕ ಆಕೆಗೆ ಕಾಂಜೀವರಂ ಸೀರೆ ತೊಡಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಬೆಂಗಳೂರಿನ ರಾಷ್ಟ್ರೀಯ ಪಶು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಕೆ.ಪಿ.ರಮೇಶ್ ಮಾತನಾಡಿ, ಎಲ್ಲ ಪ್ರಾಣಿಗಳಿಗೂ ಒಂದು ಹೊಟ್ಟೆ ಇದ್ದರೆ ಹಸುಗಳಿಗೆ 4 ಹೊಟ್ಟೆ ಇರುವುದರಿಂದ ಅನೇಕ ಸೂಕ್ಷ್ಮ ಜೀವಿಗಳ ಉಗಮಕ್ಕೆ ಇದು ಕಾರಣವಾಗಿದೆ. ಪರಿಸರ ಸಮತೋಲನಕ್ಕೆ ಗೋವುಗಳ ಕೊಡುಗೆ ಅಮೂಲ್ಯ ಎಂದರು. ರಾಷ್ಟ್ರೊàತ್ಥಾನ ಗೋಶಾಲೆಯ ಮುಖ್ಯಸ್ಥ ಜೀವನ್, ರಾಷ್ಟ್ರೊತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗಡೆ ಉಪಸ್ಥಿತರಿದ್ದರು.
ವೃಂದಾವನ ಅರಣ್ಯ: ರಾಷ್ಟ್ರೋತ್ಥಾನ ಗೋಶಾಲೆಯ 110 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಮೊದಲ ಹಂತವಾಗಿ 5 ಎಕರೆ ಪ್ರದೇಶದಲ್ಲಿ 1,500 ಗಿಡಗಳನ್ನು ನೆಡಲಾಗುತ್ತದೆ. ಬೇವು, ಆಲ, ಹಲಸು, ಹೆಬ್ಬೇವು, ಅರಳಿ, ತೊರೆಮತ್ತಿ, ತೇಗ ಸೇರಿದಂತೆ ಫಲ ನೀಡುವ ಮತ್ತು ನೆರಳು ಕೊಡುವ ಮರದ ಸಸಿ ನೆಡಲಾಗಿದೆ.
ರಾಷ್ಟ್ರೊತ್ಥಾನ ಗೋಶಾಲೆಯಲ್ಲಿ 10 ದೇಸಿ ತಳಿಯ 500ಕ್ಕೂ ಅಧಿಕ ಹಸುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. 5 ಎಕರೆ ಪ್ರದೇಶದಲ್ಲಿ ಗಿಡಗಳಿಗೆ ನೀರುಣಿಸಲು 2 ಕೊಳವೆ ಬಾವಿ ಇದೆ. 1,500 ಗಿಡಗಳಿಗೂ ಹನಿ ನೀರಾವರಿ ಯೋಜನೆ ವ್ಯವಸ್ಥೆ ಮಾಡಲಾಗಿದೆ.