Advertisement

ಜ್ಞಾನ ಜ್ಯೋತಿ ಬೆಳಗಲಿ‌…ಕತ್ತಲೆಯ ಬಾಳಿಗೆ ಬೆಳಕು ನೀಡುವ ದೀಪಾವಳಿ

02:34 PM Oct 26, 2022 | Team Udayavani |

ಹಬ್ಬಗಳ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಂದು ಹಬ್ಬವೂ ಸಂಭ್ರಮ ಸಡಗರವೇ. ಅದರಲ್ಲೂ ನಾವು ಹಿಂದೂಗಳು ನವರಾತ್ರಿ, ಶಿವರಾತ್ರಿ, ಭೂಮಿ ಪೂಜೆ, ಚೌತಿ, ದೀಪಾವಳಿ ಹೀಗೆ ಒಂದಾದ ಮೇಲೆ ಒಂದು ಹಬ್ಬ ಆಚರಿಸುತ್ತೇವೆ. ಪ್ರತಿಯೊಂದು ಹಬ್ಬಕ್ಕೂ ಅದರದ್ದೇ ಆದ ಹಿನ್ನೆಲೆಗಳಿವೆ. ಪ್ರತಿಯೊಂದು ಹಬ್ಬದ ಸಂಭ್ರಮದ ಹಿಂದೆಯೂ ಅದರದ್ದೇ ಆದ ಹಲವು ನಂಬಿಕೆಗಳಿವೆ.

Advertisement

ದೀಪಾವಳಿಯು ಅಂಥದ್ದೇ ಒಂದು ಹಿನ್ನೆಲೆಯಿಂದ, ಬಲವಾದ ನಂಬಿಕೆಯಿಂದ ಹುಟ್ಟಿಕೊಂಡಿರುವ ಹಬ್ಬ. ಬಹುಶಃ ದೀಪಾವಳಿ ಹಬ್ಬ ಮನಸ್ಸಿಗೆ ಹೆಚ್ಚು ಇಷ್ಟವಾಗಲು ಹಬ್ಬದ ಆಚರಣೆಯ ಹಿಂದಿರುವ ಆ ನಂಬಿಕೆಯೇ ಕಾರಣವಾಗಿರಬಹುದು. ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ. ದೀಪದಿಂದ ದೀಪವನ್ನು ಹಚ್ಚುವ ಹಬ್ಬವೇ ದೀಪಾವಳಿ. ಶ್ರೀಕೃಷ್ಣ ನರಕಾಸುರ ನನ್ನು ಸಂಹರಿಸಿದ ದಿನವನ್ನು ನಾವು ನರಕ ಚತುರ್ದಶಿಯೆಂದು ಹಾಗೆ ಅಮಾವಾಸ್ಯೆಯ ಅನಂತರ ಬಲಿಚಕ್ರವರ್ತಿ ವಾಮನರ ಕಥೆಯ ಹಿನ್ನೆಲೆಯಲ್ಲಿ, ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರು ದಿನ ಬಲಿಪಾಡ್ಯಮಿ ಆಗಿ ಆಚರಿಸುತ್ತೇವೆ. ಅಲ್ಲದೆಯೇ ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆಯನ್ನು ಮಾಡುವುದರ ಜತೆಗೆ ದೀಪಾವಳಿಯನ್ನು ಆಚರಿಸುವುದು ಸಂಪ್ರದಾಯ.

ದೀಪಾವಳಿ ಹಬ್ಬದ ಹಿನ್ನೆಲೆಯನ್ನು ಗಮನಿಸಿದರೆ ನರಕಾಸುರನ ಗರ್ವವನ್ನು ಮುರಿದುದರ ನೆನಪಿನ ಆಚರಣೆ, ಅರ್ಥಾತ್‌ ದೀಪಾವಳಿ ಎನ್ನುವುದು ಕೆಟ್ಟದ್ದನ್ನು ಮೆಟ್ಟಿ ಒಳ್ಳೆಯದರ ಕಡೆಗೆ, ಅಜ್ಞಾನದಿಂದ ಜ್ಞಾನದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ ಎನ್ನುವುದರ ಸಂಕೇತವಾಗಿ ದೀಪದಿಂದ ದೀಪವನ್ನು ಬೆಳಗಿ ತಮದಿಂದ ಜ್ಯೋತಿಯೆಡೆಗೆ ಎನ್ನುವ ಸಂದೇಶ ಸಾರಿದೆ.

ಪ್ರತಿಯೊಂದು ಹಬ್ಬವೂ ಹೊಸ ಬಟ್ಟೆ, ತಿಂಡಿ, ತಿನಿಸು, ಅಲಂಕಾರ, ಆಚರಣೆಯ ಸಂಭ್ರಮವನ್ನು ನೀಡುವುದರ ಜತೆಗೆ ಪೂಜೆ, ನೈವೇದ್ಯ, ನಮಸ್ಕಾರ, ಶಂಖ, ಜಾಗಟೆಯ ನಾದ, ಪ್ರಾರ್ಥನೆ ಹೀಗೆ ಪ್ರತಿಯೊಬ್ಬನಲ್ಲೂ ದೈವದ ಮೇಲಿನ ನಂಬಿಕೆಯನ್ನು ಜಾಗೃತಗೊಳಿಸುತ್ತದೆ. ಆದರೆ ದೀಪಾವಳಿ ಇವೆಲ್ಲದರ ಜತೆಗೆ ಮೇಲು-ಕೀಳು, ಅಜ್ಞಾನ, ಗರ್ವ, ಅಹಂಕಾರ, ಹಿಂಸೆ, ಕೋಪ ಇಂತಹ ಎಲ್ಲ ಕಗ್ಗತ್ತಲ್ಲನ್ನು ತೊರೆದು ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾರ್ಥನೆ, ದಾನ, ತ್ಯಾಗ ಇಂತಹ
ಬೆಳಕಿನೆಡೆಗೆ ನಡೆಯ ಬೇಕು ಎಂಬ ಸುಂದರ ಸಂದೇಶವನ್ನು 3 ದಿನಗಳ ಕಾಲ ನೀಡುತ್ತದೆ.

ಅಲ್ಲದೆ ಸೂರ್ಯ ಮತ್ತು ಅಗ್ನಿಯ ಸಂಕೇತವಾದ ದೀಪವು ಮಂಗಳಕರವಾದುದು. ಭಾರತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಜ್ಯೋತಿಗೆ ಒಂದು ವಿಶೇಷ ಮಹತ್ವವಿದ್ದು, ಬೆಳಕೇ ಮಾನವನಿಗೆ ಜ್ಞಾನದ ಮೂಲವಾಗಿದೆ. ಹಾಗಾಗಿ ದೀಪಗಳನ್ನು ಬೆಳಗಿಸುವುದರಿಂದ ಮನೆ ಹಾಗೂ ಮನಗಳಲ್ಲಿ ಸಕಾರಾತ್ಮಕ ಪರಿಸರ ನಿರ್ಮಾಣ ಮಾಡುವುದರ ಜತೆಗೆ ಜ್ಞಾನದ ಒಂದು ವರ್ತುಲ ರೂಪಗೊಳ್ಳುವುದು ಸತ್ಯ. ಹೆಸರೇ ತಿಳಿಸುವಂತೆ ದೀಪಾವಳಿಯಲ್ಲಿ ಸಾಲು ಸಾಲು ದೀಪಗಳನ್ನು ಹಚ್ಚುವುದು ಮುಖ್ಯ ಆಚರಣೆ ಆಗಿರುವುದರಿಂದ ಹಚ್ಚಿರುವ ಪ್ರತಿಯೊಂದು ಜ್ಞಾನದ ಜ್ಯೋತಿಯು ನಮ್ಮಲ್ಲಿನ ಧನಾತ್ಮಕ ಚಿಂತನೆಗೆ ಬೆಳಕು ಚೆಲ್ಲುತ್ತದೆ.

Advertisement

ನರಕಾಸುರನ ಗರ್ವವನ್ನು ಮೆಟ್ಟಿ, ಒಳ್ಳೆಯತನ ಗೆಲುವು ಸಾಧಿಸಿರುವುದು, ಕೊಟ್ಟ ಮಾತನ್ನು ನಡೆಸುವುದಕ್ಕೋಸ್ಕರ ತನ್ನ ತಲೆಯ ಮೇಲೇ ಜಾಗವನ್ನು ನೀಡಿ ತಾನೇ ನಾಶವಾದರೂ ಮಾತಿಗೆ ತಪ್ಪದ ಬಲಿ ಚಕ್ರವರ್ತಿ, ತನ್ನೆಲ್ಲ ಐಶ್ವರ್ಯ ವೃದ್ಧಿಸಲು ಮೂಲಕಾರಣವೇ ದೈವಶಕ್ತಿ ಎನ್ನುವುದರ ಸಂಕೇತವಾಗಿ ಲಕ್ಷ್ಮೀಪೂಜೆ, ತನ್ನ ಇಡೀ ದೇಹದಲ್ಲಿ ದೇವರ ಶಕ್ತಿಯನ್ನು ಹೊಂದಿರುವ ಕಾಮಧೇನು, ಪರೋಪಕಾರಕ್ಕಾಗಿ ಜೀವಿಸುವ ಗೋಮಾತೆಯ ಪೂಜೆ.

ಕೊನೆಯಲ್ಲಿ ಮಾನವರಾದ ನಮ್ಮೆಲ್ಲರ ಅಜ್ಞಾನವನ್ನು ತೊಡೆದು ಹಾಕುವ ಶಕ್ತಿಯೇ ಜ್ಯೋತಿ, ಆ ಜ್ಞಾನದ ಜ್ಯೋತಿ ನಮ್ಮೆಲ್ಲರ ಮನೆ ಮನಸ್ಸುಗಳನ್ನು ಬೆಳಗಿಸಲಿ ಎಂಬುದಾಗಿ ಬೆಳಗುವ ದೀಪಗಳು. ಈ ಎಲ್ಲ ಕಾರಣ ದೀಪಾವಳಿ ಹಬ್ಬ ಎಲ್ಲ ಹಬ್ಬಗಳಿಗಿಂತ ದೊಡ್ಡ ಹಬ್ಬ ಎನ್ನಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next