ಮಧುಗಿರಿ: ರಾಷ್ಟ್ರದ ಸದೃಢವಾಗಲು ಪ್ರಾಥಮಿಕ ಶಿಕ್ಷಣ ಮೂಲ ಕಾರಣ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ವೆಂಕಟೇಶಯ್ಯ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ, ಮತ್ತು ಬಡ್ತಿ ಪಡೆದ ಮುಖ್ಯಶಿಕ್ಷಕರ ಸಂಘದ ಸಂಯುಕ್ತಾಶ್ರಯದಲ್ಲಿ ಶಿಕ್ಷಕರಿಗಾಗಿ ನಡೆದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಮುಖ್ಯಶಿಕ್ಷಕರ ಮೇಲೆ ದೇಶದ ಬುನಾದಿ ಅಡಗಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪಡೆದ ಶಿಕ್ಷಣವೇ ಅಭಿವೃದ್ಧಿಗೆ ಪೂರಕ. ಆದ್ದರಿಂದ ಮುಖ್ಯಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದ್ದು, ತಾವೂ ಅಧ್ಯಯನಶೀಲರಾಗಿ ಮಕ್ಕಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕಿದೆ. ಇದರಂತೆ ರಾಜ್ಯ ಸರ್ಕಾರ ಇತರೆ ರಾಜ್ಯದಲ್ಲಿರುವಂತಹ ವೇತನ ಶ್ರೇಣಿ ನಮ್ಮ ಶಿಕ್ಷಕರಿಗೂ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಾಮಣ್ಣ ಮಾತನಾಡಿ, ಈರುಳ್ಳಿ ಕೆ.ಜಿ 150ಕ್ಕೆ ಏರಿಕೆಯಾಗಿದ್ದು, ಹಳೆ ದರವನ್ನೇ ನೀಡಲಾಗುತ್ತಿದೆ. ಇನ್ನೂ ಅನುದಾನ ಕಳೆದ 5 ತಿಂಗಳಿಂದಲೂ ನೀಡಿಲ್ಲ. ಹೀಗೆ ಮುಂದುವರೆದರೆ ಎಲ್ಲ ಜವಾಬ್ದಾರಿ ನಿರ್ವಹಿಸುವ ಮುಖ್ಯಶಿಕ್ಷಕರಿಗೆ ತೊಂದರೆಯಾಗಲಿದೆ. ಶಾಲೆ ಸಮಸ್ಯೆಳಿಗೆ ಮುಖ್ಯಶಿಕ್ಷಕರ ದೂರುವ ಚಿಂತನೆ ಬದಲಾಗಬೇಕು. ಅವರಿಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಶಿಕ್ಷಕ ವೆಣಕಟರಮಣಪ್ಪ, ಡಿ ಗ್ರೂಪ್ ನೌಕರರು ಇಲ್ಲದ ಕಾರಣ ಮುಖ್ಯಶಿಕ್ಷಕರ ಪಾಡು ಹೇಳತೀರದಾಗಿದೆ. ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ. ಶಾಲೆ ಅಭಿವೃದ್ಧಿ ಹಾಗೂ ಸಮಸ್ಯೆಗಳ ಬಗ್ಗೆ ಸ್ಥಳೀಯ ಗ್ರಾಪಂ ಗಮನ ಹರಿಸುತ್ತಿಲ್ಲ. ಇದು ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರದ ಕಾರ್ಯಕ್ರಮಗಳಿಂದ ಶಿಕ್ಷಕರು ಶಾಲೆಗೆ ಗೈರಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅವಶ್ಯಕವಾದಲ್ಲಿ ಕಾರ್ಯಾಗಾರ ಮಾಡಬೇಕು. ಶಿಕ್ಷಕರು ಅಧ್ಯಯನಶೀಲರಾಗುವ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ ನೀಡಬೇಕು ಎಂದರು.
ಡಯಟ್ ಉಪ ಪ್ರಾಂಶುಪಾಲ ಕೃಷ್ಣಪ್ಪ ಪಾಠದ ಜೊತೆಗೆ ಮಕ್ಕಳಿಗೆ ಜೀವನ ಕೌಶಲ್ಯವನ್ನು ಕಲಿಸುವ ಹಾಗೂ ಶಾಲಾ ದಾಖಲಾತಿ ನಿರ್ವಹಿಸುವ ಕುರಿತು ಉಪನ್ಯಾಸ ನೀಡಿದರು. ತಹಶೀಲ್ದಾರ್ ನಂದೀಶ್, ಬಿಇಒ ರಂಗಪ್ಪ, ಡಿವೈಪಿಸಿ ರಾಜಕುಮಾರ್, ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಜಯರಾಂ, ಖಜಾಂಚಿ ಚಿಕ್ಕರಂಗಯ್ಯ, ನಿರ್ದೇಶಕ ಶಶಿಕುಮಾರ್, ಇಸಿಒ ಪ್ರಾಣೇಶ್, ಚೆನ್ನಬಸಪ್ಪ, ಶಿಕ್ಷಕ ಮುಖಂಡರಾದ ನರಸೇಗೌಡ, ನರಸಿಂಹಮೂರ್ತಿ, ತಾಲೂಕಿನ ಮುಖ್ಯಶಿಕ್ಷಕರು ಇದ್ದರು.
ಸಮ್ಮಿಶ್ರ ಸರ್ಕಾರದಲ್ಲಿ ಸಿಆರ್‌ಪಿ, ಬಿಆರ್‌ಪಿಗಳಿಗೆ ಕಡ್ಡಾಯ ವರ್ಗಾವಣೆ ಮತ್ತು ಇತರೆ ವಿಷಯದ ಶಿಕ್ಷಕರಿಗೂ ವರ್ಗಾವಣೆಗೆ ಅವಕಾಶ ನೀಡಲಾಗಿತ್ತು. ಆದರೆ ಅದನ್ನು ಮುಂದುವರೆಸಲು ಈಗಿನ ಸರ್ಕಾರ ಕ್ರಮವಹಿಸಬೇಕಿದೆ. ಮುಖ್ಯಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದ್ದು, ಸಹಶಿಕ್ಷಕರಿಗೆ ಮಾದರಿಯಾಗಿರಬೇಕು.
-ಜಗದೀಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ