ಹೊನ್ನಾಳಿ: ಸರ್ಕಾರಿ ಶಾಲೆಗಳ ಶಿಕ್ಷಕರು ಅರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಖಾಸಗಿ ಶಾಲೆಗಳಿಗಿಂತ ಉತ್ತಮ ಫಲಿತಾಂಶ ಲಭಿಸುತ್ತದೆ ಎಂದು ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಎಚ್.ಬಿ. ಸೋಮಶೇಖರ್ ಹೇಳಿದರು.
ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಕುಂದೂರು ಕ್ಲಸ್ಟರ್ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ 25 ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಪ್ರೇರಣಾ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಅನೇಕ ಸವಲತ್ತುಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಇದ್ದಾರೆ. ಈ ಕಾರಣಕ್ಕಾಗಿ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ. ಪೋಷಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕುಂದೂರು ಕ್ಲಸ್ಟರ್‌ನ ಸಿಆರ್‌ಪಿ ಬಿ.ಎಸ್. ವೀರೇಶ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪ್ರೇರೇಪಿಸಿ ಕಲಿಕಾ ಪ್ರಕ್ರಿಯೆಯನ್ನು ಉತ್ತೇಜಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಈ ಕಾರ್ಯಾಗಾರದಲ್ಲಿ ಪಾಲ್ಗೊಂಡ ಶಿಕ್ಷಕರು ಇದರಲ್ಲಿನ ಅಂಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರೇರಣಾ ಕ್ಲಬ್, ಸಹಪಾಠಿ ಕಲಿಕೆ, ಸ್ಟಾರ್‌ಗಳ ಮಹತ್ವ, ಅಭ್ಯಾಸ ಪುಸ್ತಕ ಬಳಕೆ, ಕಲಿಕಾ ನಕ್ಷೆ ಕುರಿತು ಶಿಕ್ಷಕರಿಗೆ ಶಿಕ್ಷಣ ಫೌಂಡೇಷನ್‌ನ ಪ್ರವೀಣ್ ಮತ್ತು ಸುರೇಶ್ ತರಬೇತಿ ನೀಡಿದರು.
ಕುಂಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ವೇದಮೂರ್ತಿ, ನೆಲಹೊನ್ನೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಚ್.ಹಾಲೇಶ್, ಕೊಟ್ರಪ್ಪ ಎರೇಸೀಮಿ, ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಮಹಮ್ಮದ್‌ರಫಿ, ಎಸ್‌ಡಿಎಂಸಿ ಮಾಜಿ ಉಪಾಧ್ಯಕ್ಷ ಹನುಮಂತಪ್ಪ ಇತರರು ಉಪಸ್ಥಿತರಿದ್ದರು.