ದಾವಣಗೆರೆ: ಕೇಂದ್ರ ಸರ್ಕಾರ ರೂಪಿಸಿರುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಕಾರ್ಯಕರ್ತರು ನಗರದ ತಹಶೀಲ್ದಾರ್ ಕಚೇರಿ ಎದುರು ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಪ್ರತಿ ವರ್ಷ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುತ್ತದೆ. ಈ ವರ್ಷ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಆದರೆ ಅದಕ್ಕೆ ಕಾನೂನು ಮಾನ್ಯತೆ ಇಲ್ಲದ ಕಾರಣಕ್ಕೆ ಕನಿಷ್ಠ ಬೆಂಬಲ ಬೆಲೆಗೆ ಬೆಲೆಯೇ ಇಲ್ಲದಂತಾಗಿದೆ. ವರ್ತಕರು ಮನಸ್ಸಿಗೆ ಬಂದ ಧಾರಣೆಗೆ ಬೆಳೆಗಳ ಖರೀದಿ ಮಾಡುತ್ತಿರುವುದರಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ
ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷದ ಹಿಂದೆ ಪ್ರತಿ ಕ್ವಿಂಟಲ್ ಈರುಳ್ಳಿಗೆ 800 ರೂಪಾಯಿ ನಿಗದಿ ಮಾಡಿತ್ತು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ಇದ್ದರೆ ಈರುಳ್ಳಿ ಧಾರಣೆ ದಯನೀಯವಾಗಿ ಕುಸಿತ ಆಗುತ್ತಿರಲಿಲ್ಲ. ಕನಿಷ್ಠ ಪಕ್ಷ 1 ಕೆಜಿಗೆ 8 ರೂಪಾಯಿಯಾದರೂ ದೊರೆಯುತ್ತಿತ್ತು. ಈಗ ಒಂದು ಕೆಜಿ ಈರುಳ್ಳಿ ಬೆಲೆ 1 ರೂಪಾಯಿ ಆಗಿದೆ. ಒಂದು ಎಕರೆಯಲ್ಲಿ ಈರುಳ್ಳಿ ಬೆಳೆಯಲು ಸಾವಿರಾರು ರೂಪಾಯಿ ಖರ್ಚು ಮಾಡಿರುವ ರೈತರಿಗೆ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಏನು ಮಾಡಬೇಕೆಂದು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ:ಕುವೆಂಪು ವಿವಿ 31ನೇ ಘಟಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ನಿರ್ಮಲಾ ಸೀತಾರಾಮನ್
ಕಷ್ಟಪಟ್ಟು ಬೆಳೆದ ಈರುಳ್ಳಿಗೆ ಬೆಲೆ ಇಲ್ಲದೆ ರೈತರ ಕಣ್ಣಲ್ಲಿ ನೀರು ಬರುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು, ಈರುಳ್ಳಿ ಸುರಿದು ಸರ್ಕಾರದ ವಿರುದ್ಧ ಹರಿಹಾಯ್ದರು. ಈಗಿನ ಬೆಲೆ ಕುಸಿತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಣ ಕುರುಡು, ಕಿವುಡ ನೀತಿ ಅನುಸರಿಸುತ್ತಿರುವುದೇ ಕಾರಣ ಎಂದು ದೂರಿದರು. ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಆಲೂರು ಪರಶುರಾಮ್, ಬೂದಿಹಾಳ್ ಭಗತ್ ಸಿಂಗ್, ಕಾಡಜ್ಜಿ ಪ್ರಕಾಶ್, ಹೂವಿನಮಡು ನಾಗರಾಜ್, ನಿಂಗನಹಳ್ಳಿ ನಾಗರಾಜ್, ಹುಚ್ಚವ್ವನಹಳ್ಳಿ ಹನುಮಂತ, ಕೋಲ್ಕುಂಡೆ ಹುಚ್ಚೆಂಗೆಪ್ಪ ಇತರರು ಇದ್ದರು. ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರಮುಖ ಬೇಡಿಕೆಗಳು
ಕೇಂದ್ರ ಮತ್ತು ರಾಜ್ಯ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡಬೇಕು. ಮುಕ್ತ ಮಾರುಕಟ್ಟೆಯಲ್ಲಿ ನಿಗದಿತ ಬೆಲೆಗಿಂತಲೂ ಕಡಿಮೆ ಬೆಲೆಗೆ ಖರೀದಿ ಮಾಡಿದ ವರ್ತಕರ ಪರವಾನಿಗೆ ರದ್ಧತಿ, ದಂಡ, ಜೈಲು ಶಿಕ್ಷೆಯಂತಹ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ, ಪ್ರತಿ ಕ್ವಿಂಟಲ್ ಈರುಳ್ಳಿಗೆ ಕನಿಷ್ಠ 2 ಸಾವಿರ ರೂ. ಬೆಂಬಲ ಬೆಲೆ ಘೋಷಿಸಬೇಕು. ಇಲ್ಲವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.