ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಅರಣ್ಯೀಕರಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಮಳೆಗಾಲದಲ್ಲಿ ಆಯೋಜಿಸಿರುವ 1 ಕೋಟಿ ಸಸಿ ನಾಟಿ ಮಾಡುವ ಕೋಟಿ-ನಾಟಿ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಜಿಪಂ ಸಿಇಒ ಗುರುದತ್ ಹೆಗಡೆ ಮನವಿ ಮಾಡಿದರು.
ನಗರದ ಸಿಎಸ್‌ಐ ಆಸ್ಪತ್ರೆ ರಸ್ತೆಯಲ್ಲಿರುವ ಬೆಸ್ಟ್ ಪಿಯು ಕಾಲೇಜಿನಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ ಹಸಿರು ಕರ್ನಾಟಕ ಯೋಜನೆಯಡಿ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯವನ್ನು ಗ್ರಾಪಂಗಳ ಮೂಲಕ ಕೈಗೆತ್ತಿಕೊಳ್ಳಲಾಗಿದ್ದು, ಈ ವರ್ಷ ಕನಿಷ್ಠ 1 ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ ಎಂದರು.
ಪರಿಸರ ಕಾಳಜಿ ವಹಿಸಿ: ಜಿಲ್ಲೆಯಲ್ಲಿ ಅರಣ್ಯದ ಕೊರತೆ ಪರಿಣಾಮ ಮಳೆಯ ಅಭಾವ ಹೆಚ್ಚಾಗಿ ಹಲವು ವರ್ಷಗಳಿಂದಲೂ ಜಿಲ್ಲೆ ಬರಗಾಲಕ್ಕೆ ತುತ್ತಾಗುತ್ತಿದ್ದು, ಜಿಲ್ಲೆಯ ಶಾಲಾ, ಕಾಲೇಜುಗಳು ವಿಶೇಷವಾಗಿ ಪರಿಸರದ ಬಗ್ಗೆ ಕಾಳಜಿ ವಹಿಸಿ ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಪೋಷಣೆಗೆ ವಿಶೇಷ ಒತ್ತು ಕೊಡಬೇಕೆಂದರು.
ಜಿಲ್ಲೆಯಲ್ಲಿ ಕೋಟಿ ನಾಟಿ ಕಾರ್ಯಕ್ರಮಕ್ಕೆ ರೋಟರಿ ಸಂಸ್ಥೆ ಮುಂದೆ ಬಂದಿದ್ದು, ಸಸಿ ನಾಟಿ ಮಾಡುವಾಗ ವಿದ್ಯಾರ್ಥಿಗಳು ಸಹ ಪಾಲ್ಗೊಳ್ಳಬೇಕೆಂದರು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ವಿದ್ಯಾರ್ಥಿ ಸಂಘಟನೆಗಳು ಮಾಡಬೇಕು.
ಪುನಶ್ಚೇತನ: ಜಿಲ್ಲಾದ್ಯಂತ ಬತ್ತಿ ಹೋಗುತ್ತಿರುವ ಅಂತರ್ಜಲ ಪುನಶ್ಚೇತನಕ್ಕಾಗಿ ಈಗಾಗಲೇ ಕಲ್ಯಾಣಿಗಳ ಸ್ವತ್ಛತಾ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದ್ದು, ಅದೇ ರೀತಿ ಕೆರೆ, ಕುಂಟೆಗಳ ಪುನಶ್ಚೇತನವನ್ನು ಹೂಳು ಎತ್ತುವ ಮೂಲಕ ಕೈಗೊಳ್ಳಲಾಗುವುದು . ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ಪರಿಸರ ಬಗ್ಗೆ ಅರಿವು ಮೂಡಿಸಬೇಕು. ಮಹತ್ವಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳುವಳಿಕೆ ಮೂಡಿಸಬೇಕೆಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೀತಾರಾಮರೆಡ್ಡಿ, ಬೆಸ್ಟ್ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ರಘುನಾಥ್, ಪಿಯು ಇಲಾಖೆ ರಾಜಶೇಖರ್, ಎಬಿವಿಪಿ ಮುಖಂಡರಾದ ಎನ್.ಮಂಜುನಾಥ ರೆಡ್ಡಿ, ಮಲ್ಲಿಕಾರ್ಜುನಯ್ಯ, ಕಿಶೋರ್, ಅಖೀಲ್, ವಿಜಯ್ ಇದ್ದರು.
ಮಕ್ಕಳಿಗೆ ಉತ್ತಮ ಕಲಿಕೆಯ ವಾತಾವರಣ ಇರಬೇಕಾದರೆ ಶಾಲಾ, ಕಾಲೇಜುಗಳ ಆವರಣಗಳಲ್ಲಿ ಕೂಡ ಮರ, ಗಿಡಗಳನ್ನು ಬೆಳೆಸಬೇಕು. ಶಿಕ್ಷಣ ಸಂಸ್ಥೆಗಳು ಕನಿಷ್ಠ ತಮ್ಮ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಸಿ ನೆಟ್ಟು ಪೋಷಣೆ ಮಾಡಬೇಕು.
-ಉಮಾಕಾಂತ್, ನಗರಸಭೆ ಆಯುಕ್ತ