ಕೊರೊನಾ ಸಂಕಷ್ಟ ಕಾಲದಲ್ಲಿ ಕೇಂದ್ರ ಸರಕಾರದಿಂದ ಮತ್ತೊಂದು ಬಜೆಟ್ ಮಂಡನೆಯಾಗಲಿದೆ. ಮಂಗಳವಾರ ಬೆಳಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲಿದ್ದಾರೆ.
ಕೇಂದ್ರದ ಸಾಮಾನ್ಯ ಬಜೆಟ್ ಕಾಲದಲ್ಲಿ ಪ್ರತಿಯೊಬ್ಬರಲ್ಲೂ ಕೆಲವೊಂದು ನಿರೀಕ್ಷೆಗಳಿರುತ್ತವೆ. ಅಂದರೆ ಕೈಗಾರಿಕೆ, ಕೃಷಿ, ಆರೋಗ್ಯ, ಶಿಕ್ಷಣ, ತೆರಿಗೆದಾರರು, ರೈಲ್ವೇ, ಬ್ಯಾಂಕಿಂಗ್ ವಲಯಗಳು ತಮ್ಮದೇ ಆದ ನಿರೀಕ್ಷೆಗಳನ್ನು ಇರಿಸಿಕೊಂಡಿರುತ್ತವೆ. ಇಡೀ ವರ್ಷದ ಖರ್ಚು ಮತ್ತು ವೆಚ್ಚವನ್ನು ಇದೇ ಬಜೆಟ್‌ನಲ್ಲಿ ನಿಗದಿ ಪಡಿಸುವುದರಿಂದ ಎಲ್ಲಿಲ್ಲದ ಮಹತ್ವವಿದೆ.
ಹಾಲಿ ಬಜೆಟ್ ಮೇಲೆ ಕರ್ನಾಟಕ ಸರಕಾರದ ನಿರೀಕ್ಷೆಗಳು ಬೃಹತ್ತಾಗಿಯೇ ಇವೆ. ಅದರಲ್ಲೂ ಹೊಸ ರೈಲ್ವೇ ಯೋಜನೆಗಳು, ಬೆಂಗಳೂರು ಸಬ್ ಅರ್ಬನ್ ರೈಲಿಗೆ ಹೆಚ್ಚಿನ ಅನುದಾನ, ಜಿಎಸ್‌ಟಿ ಮರುಪಾವತಿ ಸೇರಿದಂತೆ ವಿವಿಧ ಯೋಜನೆಗಳ ಮೇಲೆ ರಾಜ್ಯ ಸರಕಾರ ಕಣ್ಣಿಟ್ಟಿದೆ. ದೇಶದ ಬೊಕ್ಕಸಕ್ಕೆ ಹೆಚ್ಚೇ ಜಿಎಸ್‌ಟಿ ಪಾವತಿ ಮಾಡುತ್ತಿರುವ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ಸಿಗಬಹುದು ಎಂಬ ನಿರೀಕ್ಷೆಗಳೂ ಇವೆ. ಈ ವಿಚಾರದಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಹೇಗೆ ಸ್ಪಂದಿಸಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈಗಾಗಲೇ ಘೋಷಣೆಯಾಗಿರುವ ಬ್ಯಾಡ್ ಬ್ಯಾಂಕಿಂಗ್‌ಗೆ ಈ ಬಜೆಟ್‌ನಲ್ಲಿ ಸ್ಪಷ್ಟವಾದ ರೂಪುರೇಷೆ ಸಿಗುವ ಸಾಧ್ಯತೆಗಳಿವೆ. ಅನುತ್ಪಾದಕ ಆಸ್ತಿಯ ವಿಲೇವಾರಿ ಸಂಬಂಧ ಬ್ಯಾಡ್ ಬ್ಯಾಂಕಿಂಗ್ ಮೂಲಕ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುದನ್ನು ನೋಡಬೇಕಾಗಿದೆ.
ಸದ್ಯ ಭಾರತ ಮತ್ತೆ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆ ಎಂಬ ಹೆಸರು ಗಳಿಸಿದೆ. ಕೊರೊನಾ ಕಾಲದಲ್ಲಿ ಚೀನ ಮೊದಲ ಸ್ಥಾನಕ್ಕೆ ಹೋಗಿತ್ತು. ಈಗ ಮತ್ತೆ ಭಾರತವೇ ಮುಂದಕ್ಕೆ ದಾಪುಗಾಲಿಟ್ಟಿದೆ. ಇದೇ ಓಟವನ್ನು ಕಾಪಿಟ್ಟುಕೊಳ್ಳಬೇಕಾದರೆ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಇನ್ನಷ್ಟು ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಅದರಲ್ಲಿಯೂ ಹೆಚ್ಚಿನ ಉದ್ಯೋಗ ಸೃಷ್ಟಿ, ಹೊಸ ಹೊಸ ಕೈಗಾರಿಕೆಗಳ ಸ್ಥಾಪನೆಗೆ ಒತ್ತು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ಬಲವರ್ಧನೆ ಸೇರಿ ಕೆಲವೊಂದು ಆರ್ಥಿಕ ಸುಧಾರಣೆಯ ಮಾರ್ಗಗಳನ್ನು ತುಳಿಯಬೇಕಾಗಿದೆ. ಜನರ ಕೈಯಲ್ಲಿ ಹೆಚ್ಚಾಗಿ ಹಣ ಓಡಾಡಿದರೆ, ಖರೀದಿಯ ಸಾಮರ್ಥ್ಯವೂ ಹೆಚ್ಚುತ್ತದೆ. ಇದನ್ನೇ ಮನಸ್ಸಿನಲ್ಲಿ ಇರಿಸಿಕೊಂಡು ಮಧ್ಯಮ ವರ್ಗದ ಆಶೋತ್ತರಗಳನ್ನು ಈಡೇರಿಸಬೇಕಾಗಿದೆ. ಈ ಸಂಬಂಧವೂ ಮಂಗಳವಾರದ ಬಜೆಟ್‌ನಲ್ಲಿ ಕೆಲವು ಯೋಜನೆಗಳು ಪ್ರಕಟವಾಗುವ ಸಾಧ್ಯತೆ ಇದೆ.
ಇದರ ಜತೆಗೆ ಆದಾಯ ತೆರಿಗೆ ವಿಚಾರದಲ್ಲಿ ಕೊಂಚ ಬದಲಾವಣೆಗಳಾಗುವ ಸಾಧ್ಯತೆಗಳಿವೆ. ವೇತನ ವರ್ಗಕ್ಕೆ ಯಾವುದೇ ರೀತಿಯ ಸಮಾಧಾನ ಸಿಗದಿದ್ದರೂ ತೆರಿಗೆ ಕಡಿತ ಮತ್ತು 80ಸಿ ಡಿಡಕ್ಷನ್ ಮಿತಿ ವಿಚಾರದಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಅಲ್ಲದೆ, ಟಿಡಿಎಸ್‌ನಿಂದ ಕಡಿತವಾಗಿದ್ದ ಹಣವನ್ನು ವಾಪಸ್ ತೆಗೆದುಕೊಳ್ಳುವ ವಿಚಾರದಲ್ಲಿ ಈಗಾಗಲೇ ಹಲವಾರು ಸುಧಾರಣೆಗಳನ್ನು ತರಲಾಗಿದೆ. ಆದರೂ 2021 -22ರ ವರ್ಷದಲ್ಲಿ ಕೊಂಚ ಅಡೆತಡೆಗಳು ಕಂಡು ಬಂದಿದ್ದವು. ಇದನ್ನು ಸಂಪೂರ್ಣವಾಗಿ ಸುಧಾರಿಸುವ ಕೆಲಸ ಮಾಡಬೇಕಾಗಿದೆ.